ವಿವಾದಾತ್ಮಕ ಆದೇಶಗಳನ್ನು ವಾಪಸ್ ಪಡೆದ ರಾಜಸ್ಥಾನ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Teachers-Day

ಜೈಪುರ, ಸೆ.1- ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರ ಹೊರಡಿಸಿದ್ದ ಎರಡು ಆದೇಶಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ವಿವಾದಾತ್ಮಕ ಆದೇಶಗಳನ್ನು ಸರ್ಕಾರ ವಾಪಸ್ ಪಡೆದಿದೆ.  ಮೊದಲ ಆದೇಶದಲ್ಲಿ ಶಿಕ್ಷಕರ ದಿನಾಚರಣೆ ಸಮಾರಂಭಕ್ಕೆ ಹಾಜರಾಗದ ಶಿಕ್ಷಕರ ವೇತನ ಕಡಿತಗೊಳಿಸುವ ಎಚ್ಚರಿಕೆ ನೀಡಲಾಗಿತ್ತು. ಎರಡನೇ ಆದೇಶದಲ್ಲಿ ಆ ದಿನ ಧರಿಸುವ ಸೀರೆ ಅಥವಾ ಇತರ ಬಟ್ಟೆಯಲ್ಲಿ ಕಪ್ಪು ಬಣ್ಣ ಇರಬಾರದು ಎಂದು ಆದೇಶಿಸಲಾಗಿತ್ತು. ಈ ಬಗ್ಗೆ ಶಿಕ್ಷಕ ಸಮುದಾಯ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು.

ರಾಜ್ಯ ಶಿಕ್ಷಣ ಇಲಾಖೆ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ರಾಜ್ಯ ವಿಧಾನಸಭೆಯ ಬಳಿ ಆಯೋಜಿಸಲು ನಿರ್ಧರಿಸಿದ್ದು, ಎಲ್ಲ 33 ಜಿಲ್ಲೆಗಳ ತಲಾ ಒಬ್ಬ ಶಿಕ್ಷಕರನ್ನು ಸನ್ಮಾನಿಸಲು ಕಾರ್ಯಕ್ರಮ ಹಮ್ಮಿಕೊಂಡಿದೆ. ವಸುಂಧರರಾಜೇ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅಂದರೆ 2013ರ ಡಿಸೆಂಬರ್ 13ರ ಬಳಿಕ ನೇಮಕಗೊಂಡ ಶಿಕ್ಷಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. 11.51 ಕೋಟಿ ರೂಪಾಯಿ ವೆಚ್ಚದ ಈ ಸಮಾರಂಭಕ್ಕೆ ಕೇವಲ ವಸುಂಧರರಾಜೇ ಅವರ ಅಧಿಕಾರಾವಧಿಯಲ್ಲಿ ನೇಮಕಗೊಂಡ ಶಿಕ್ಷಕರನ್ನು ಮಾತ್ರ ಆಹ್ವಾನಿಸುವ ಮೂಲಕ ರಾಜ್ಯ ಸರ್ಕಾರ ತಾರತಮ್ಯ ಎಸಗಿದೆ ಹಾಗೂ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದೂರಿದ್ದಾರೆ.

ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸುವ ಶಿಕ್ಷಕರು ಕಪ್ಪು ಬಟ್ಟೆ, ಶೂ, ಸಾಕ್ಸ್, ಬೆಲ್ಟ್ ಅಥವಾ ಕಪ್ಪು ಬಣ್ಣದ ಕರವಸ್ತ್ರವನ್ನೂ ಹೊಂದಿರಬಾರದು ಎಂದು ಸೂಚಿಸಲಾಗಿತ್ತು. ಇದು ಪ್ರತಿಭಟನೆಗೆ ಕಾರಣವಾಗಬಹುದು ಎಂಬ ಭೀತಿಯಿಂದ ಸರ್ಕಾರ ಈಗ ತನ್ನ ಆದೇಶವನ್ನು ವಾಪಸ್ ಪಡೆದಿದೆ.

Facebook Comments

Sri Raghav

Admin