‘ಮತದಾನ ಮಾಡದ ರಮ್ಯಾಗೆ ಮತ ಹಾಕಬೇಡಿ’ : ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

Ramaya-01
ಬೆಂಗಳೂರು.ಸೆ.1-ಚುನಾವಣೆಯಲ್ಲಿ ಮತ ಹಾಕದೆ ಕ್ಷೇತ್ರದ ಜನತೆಗೆ ಮೋಸ ಮಾಡಿರುವ ಚಿತ್ರನಟಿ, ಮಾಜಿ ಸಂಸದೆ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ವಿರುದ್ಧ ಬಿಜೆಪಿ ಅಭಿಯಾನ ಆರಂಭಿಸಿದೆ.  ಮಂಡ್ಯ ಜಿಲ್ಲೆಯ ಉಪ್ಪರಕನಹಳ್ಳಿ ನಿವಾಸಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ನಿನ್ನೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಬಂದು ಮತ ಹಾಕದೆ ಜಿಲ್ಲೆಗೆ ಅಪಮಾನ ಮಾಡಿರುವ ರಮ್ಯಾಗೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನತೆ ಮತ ಹಾಕಬಾರದೆಂದು ಆರಂಭಿಸಿರುವ ಅಭಿಯಾನ ಇದೀಗ ವೈರಲ್ ಆಗಿದೆ.

ಅಭಿಯಾನದ ಮೂಲಕ ಶಿವಕುಮಾರ್ ಆರಾಧ್ಯ ಅವರು ರಮ್ಯಾ ವಿರುದ್ಧ ಕಿಡಿ ಕಾರಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಸಾಕಷ್ಟು ಪರ ಹಾಗೂ ವಿರೋಧ ವ್ಯಕ್ತವಾಗಿದೆ.  ರಮ್ಯಾ ಯಾರಿಗೆ ಮತ ಹಾಕಲಿ ನಮ್ಮದೇನು ಅಭ್ಯಂತರವಿಲ್ಲ. ಆದರೆ ಜಿಲ್ಲೆಯಲ್ಲಿ ಮತದಾರರಾಗಿದ್ದು, ಮತದಾನದ ವೇಳೆ ತಮ್ಮ ಹಕ್ಕು ಚಲಾಯಿಸದಿದ್ದರೆ ಇವರು ಎಂತಹ ರಾಜಕಾರಣಿ ಎಂದು ಪ್ರಶ್ನಿಸಿದ್ದಾರೆ.

ಒಂದು ವೇಳೆ ಲೋಕಸಭೆ ಚುನಾವಣೆಗೆ ರಮ್ಯಾ ಸ್ಪರ್ಧಿಸಿದರೆ ಅಪಮಾನ ಮಾಡಿರುವ ಜಿಲ್ಲೆಯ ಜನತೆ ಅವರಿಗೆ ತಕ್ಕ ಪಾಠ ಕಲಿಸಬೇಕು. ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸುವುದೇ ಮಂಡ್ಯ ಜನತೆಯ ಗುರಿಯಾಗಬೇಕೆಂದು ಅವರು ಕರೆ ನೀಡಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಇದು ಭಾರೀ ಸದ್ದು ಮಾಡುತ್ತಿದೆ. ನಿನ್ನೆ ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಮ್ಯಾ ಮತ ಹಾಕದಿರುವುದೇ ಈ ಆಕ್ರೋಶಕ್ಕೆ ಕಾರಣವಾಗಿದೆ.

Facebook Comments

Sri Raghav

Admin