ಸಂಘಟನೆ ಹೆಸರಲ್ಲಿ ಹಣ ವಸೂಲಿಗಿಳಿದಿದ್ದ ಮೂವರು ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Crime

ಬೆಂಗಳೂರು, ಸೆ.1-ಕರ್ನಾಟಕ ಪ್ರಜಾಸಕ್ತಿ ಸಮಿತಿ ಸಂಘಟನೆ ಹೆಸರಿನಲ್ಲಿ ಅಕ್ರಮ ಕೂಟ ಕಟ್ಟಿಕೊಂಡು ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ಪಶ್ಚಿಮ ವಿಭಾಗದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಚಂದನ್ (26), ಗಗನ್‍ಗೌಡ (26), ಬಸವರಾಜು (27) ಬಂಧಿತ ಆರೋಪಿಗಳಾಗಿದ್ದು, ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರಿದಿದೆ.
ಆ.30ರಂದು ಸಂಜೆ 5.30ರ ಸಮಯದಲ್ಲಿ ಕಾಮಾಕ್ಷಿಪಾಳ್ಯ ವ್ಯಾಪ್ತಿಯ ಪೇಟೆ ಚಿನ್ನಪ್ಪ ಕೈಗಾರಿಕಾ ಪ್ರದೇಶದಲ್ಲಿರುವ ಉಮೇಶ್‍ಕುಮಾರ್ ಅಗರ್ವಾಲ್ ಎಂಬುವವರ ಮಾಲೀಕತ್ವದ ಭಾರತ್ ಮೋನೋ ಫಿಲೋಮೆಂಟ್ ಟೆಕ್ಸ್ ಟೈಲ್ ಕಾರ್ಖಾನೆ ಬಳಿ ಏಳು ಮಂದಿಯ ಗುಂಪೊಂದು ತಾವು ಕರ್ನಾಟಕ ಪ್ರಜಾಶಕ್ತಿ ಸಮಿತಿ ಸಂಘಟನೆಯ ಕಾರ್ಯಕರ್ತರು. ನೀವು ಕಾರ್ಖಾನೆ ನಡೆಸಲು ಲೈಸೆನ್ಸ್ ಇದೆಯಾ ಎಂದು ಕೇಳಿದ್ದಾರೆ.

ತಮಗೆ 50 ಸಾವಿರ ರೂ. ಕೊಡುವಂತೆ ಒತ್ತಡ ಹಾಕಿದ್ದು, ಹಣ ಕೊಡದಿದ್ದರೆ ನಿಮ್ಮ ಕಾರ್ಖಾನೆ ಮುಚ್ಚಿಸುತ್ತೇವೆ. ಅಲ್ಲದೆ ಬೆಂಕಿ ಹಚ್ಚುತ್ತೇವೆಂದು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಫ್ಯಾಕ್ಟರಿ ಮಾಲೀಕರಾದ ನಾಗರಾಜು ಎಂಬುವವರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದರು. ಕಾಮಾಕ್ಷಿಪಾಳ್ಯ ಠಾಣೆ ಇನ್ಸ್‍ಪೆಕ್ಟರ್ ರವಿಕುಮಾರ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಆರೋಪಿಗಳಿಂದ ಕರ್ನಾಟಕ ಪ್ರಜಾಶಕ್ತಿ ಸಂಘಟನೆಯ ಗುರುತಿನ ಚೀಟಿಗಳು, ಸಂಘಟನೆಯ ಶಾಲುಗಳು, ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಂಡಿದ್ದಾರೆ.

Facebook Comments