‘ಹಿಮಾಲಯನ್ ಮೋನಲ್’ ವಿಶಿಷ್ಟ ಪಕ್ಷಿಯ ಬಗ್ಗೆ ನಿಮಗೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Monal-2

ಹಿಮಾಲಯನ್ ಮೋನಲ್ ಹೆಸರೇ ಹೇಳುವಂತೆ ಇದು ಹಿಮಾಲಯ ಪರ್ವತ ಪ್ರದೇಶದಲ್ಲಿ ವಾಸಿಸುವ ವಿಶಿಷ್ಟ ಪಕ್ಷಿ ಇದು. ನಮ್ಮ ನೆರೆಯ ದೇಶ ನೇಪಾಳದ ರಾಷ್ಟ್ರ ಪಕ್ಷಿಯಾಗಿಯೂ ಗುರುತಿಸಿಕೊಂಡಿದೆ. ಈ ಪಕ್ಷಿಯನ್ನುಇಂಪೇನ್ ಮೋನಲ್ ಅಥವಾ ಇಂಪೇನ್ ಫೆಸೆಂಟ್ ಎಂದು ಕರೆಯಲಾಗುತ್ತದೆ.ಇದು ಬೇಟೆ ಹಕ್ಕಿಯ ಪ್ರಬೇಧಕ್ಕೆ ಸೇರಿದ್ದು, ಇದನ್ನು ನೇಪಾಳದಲ್ಲಿ ಧನ್‍ಫೆ ಎಂದೂ ಕರೆಯುತ್ತಾರೆ.

ಇದು ಉತ್ತರಾಖಾಂಡ್ ರಾಜ್ಯದ ರಾಜ್ಯ ಪಕ್ಷಿಯಾಗಿದ್ದು, ಇಲ್ಲಿ ಈ ಪಕ್ಷಿಯನ್ನುಮೋನಲ್‍ಎಂದು ಕರೆಯುತ್ತಾರೆ.2007ರ ವರೆಗೆ ಈ ಪಕ್ಷಿಯು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾಗಿಯೂ ಗುರುತಿಸಿಕೊಂಡಿದ್ದು, ಈ ಪಕ್ಷಿಯನ್ನುಏಕ ಜೈವಿಕ ಕುಲ ಪ್ರಬೇಧಕ್ಕೆ ಸೇರಿದ್ದೆಂದೂ ಗುರುತಿಸಲಾಗಿದೆ. ಅಧ್ಯಯನದ ಪ್ರಕಾರ ವಾಯುವ್ಯ ಭಾರತದಲ್ಲಿರುವ ಗಂಡು ಮೋನಲ್‍ಗಳ ಕಂದು ಬಣ್ಣದ ಉದ್ದನೆಯ ಬಾಲವು ಇತರೆಲ್ಲ ಮೋನಲ್‍ಗಳಿಗಿಂತ ಕಡಿಮೆ ದ್ದವಿರುವುದನ್ನುಗುರುತಿಸ
ಲಾಗಿದೆ. ಇವುಗಳ ಎದೆಯ ಭಾಗವು ಗಾಢ ಹಸಿರು ಬಣ್ಣದಿಂದ ಕೂಡಿದ್ದು, ಇದು ಇವುಗಳಲ್ಲೂ ಉಪ ವರ್ಗಗಳ ಇರುವಿಕೆಯನ್ನು ಸೂಚಿಸುತ್ತದೆ.  ಹಿಮಾಲಯನ್ ಮೋನಲ್‍ನ ವೈಜ್ಞಾನಿಕ ಹೆಸರು ಲೇಡಿ ಮೇರಿ ಇಂಪೇ ಎಂದು. ಇದು ಬಂಗಾಳದ ಬ್ರಿಟೀಷ್ ಮುಖ್ಯ ನ್ಯಾಯಾಧೀಶನ ಹೆಂಡತಿ ಸರ್‍ಎಲಿಜಬೆತ್ ಇಂಪೇರ್ ಹೆಸರನ್ನು ನೆನಪಿಸುತ್ತದೆ. ಈ ಪಕ್ಷಿ ಗಾತ್ರದಲ್ಲೂ ದೊಡ್ಡದಾಗಿದ್ದು, ಸರಿಸುಮಾರು 70ಸೆಂಮೀ ಉದ್ದ ಇರುತ್ತದೆ. ಗಂಡು ಮೋನಲ್ ಸರಾಸರಿ 2380 ಗ್ರಾಂ ತೂಗಿದರೆ ಹೆಣ್ಣು ಮೋನಲ್ 2150 ಗ್ರಾಂ ತೂಗುತ್ತದೆ.

ವಯಸ್ಕ ಗಂಡು ಮೋನಲ್‍ಗಳ ಮೈ ತುಂಬ ವೈವಿಧ್ಯಮಯವಾದ ಬಣ್ಣದ ಗರಿಗಳು ತುಂಬಿರುವುದರಿಂದ ಎಂಥವರನ್ನೂ ಒಂದೇ ನೋಟಕ್ಕೆ ಆಕರ್ಷಿಸಿಬಿಡುತ್ತವೆ. ಆದರೆ, ಹೆಣ್ಣು ಮೋನಲ್‍ಗಳ ಮೈಬಣ್ಣ ಅಷ್ಟೊಂದು ಆಕರ್ಷಕವಾಗಿರದೆ ಕಂದು ಬಣ್ಣದಿಂದ ಕೂಡಿರುತ್ತದೆ. ಗಂಡು ಮೋನಲ್‍ಗಳ ತಲೆಯಲ್ಲಿ ಉದ್ದನೆಯ ಲೋಹಿಯ, ಹಸಿರು ವರ್ಣದ ಜುಟ್ಟು, ಬೆನ್ನು ಹಾಗೂ ಕತ್ತಿನಲ್ಲಿರುವ ಗಾಢ ವರ್ಣದ ಪುಕ್ಕಗಳು ಮತ್ತು ಹಾರಾಡುವಾಗ ಆಕರ್ಷಕವಾಗಿ ಕಾಣುವ ಕಂದು ಮತ್ತು ಬಿಳಿ ಮಿಶ್ರಿತ ಉದ್ದನೆಯ ಬಾಲದ ಕಾರಣದಿಂದಾಗಿ ಗಂಡು ಮೋನಲ್‍ಗಳನ್ನು ಸುಲಭವಾಗಿ ಗುರುತಿಸಬಹುದು.

Monal

ಗಂಡು ಮೋನಲ್‍ಗಳ ಬಾಲದ ಗರಿಯು ಕಂದು ಬಣ್ಣದಿಂದ ಕೂಡಿದ್ದರೆ, ಹೆಣ್ಣು ಮೋನಲ್‍ಗಳ ಬಾಲ ಕಂದು ಮತ್ತು ಕಪ್ಪು ಬಣ್ಣಗಳ ಮಿಶ್ರಣದಿಂದ ಕೂಡಿರುತ್ತದೆ ಹಾಗೂ ಕತ್ತಿನ ಸುತ್ತ ಬಿಳಿಯ ಪುಕ್ಕಗಳು ಗೋಚರಿಸುತ್ತವೆ. ಒಂದು ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮೋನಲ್‍ಗಳು ಗಾತ್ರದಲ್ಲಿ ಹೊರತುಪಡಿಸಿದರೆ ನೋಡಲು ಒಂದನ್ನೊಂದು ಬಹುತೇಕ ಹೋಲುವುದರಿಂದ ಗುರುತಿಸುವುದು ಸ್ವಲ್ಪ ಕಷ್ಟವೆನ್ನಬಹುದು. ಇವುಗಳ ಕಣ್ಣುಗಳು ಅತ್ಯಂತ ತೀಕ್ಷ್ಣವಾಗಿದ್ದು, ಕಣ್ಣಿನ ಸುತ್ತ ನೀಲಿ ಬಣ್ಣದ ಪುಕ್ಕಗಳಿಂದ ಕೂಡಿ, ಹರಿತ ಹಾಗೂ ಚೂಪಾದ ಬಾಗಿದ ಕೊಕ್ಕನ್ನು ಹೊಂದಿರುತ್ತವೆ. ಇವುಗಳ ಕಾಲುಗಳು ಅತ್ಯಂತ ಬಲಿಷ್ಠವಾಗಿದ್ದು, ಇವುಗಳು ವೇಗದ ಹಾರಾಟಕ್ಕೂ, ಓಟಕ್ಕೂ ಸೈ ಎನಿಸಿವೆ.

ಈ ಪಕ್ಷಿಯ ಮೂಲಸ್ಥಾನ ಆಫ್ಘಾನಿಸ್ಥಾನ. ಅಲ್ಲಿಂದ ವಲಸೆ ಬಂದ ಈ ಪಕ್ಷಿಗಳು ಇಂದು ಹಿಮಾಲಯ ಪರ್ವತ ಶ್ರೇಣಿ, ಪಾಕಿಸ್ತಾನ, ನೇಪಾಳ, ಕಾಶ್ಮೀರ, ದಕ್ಷಿಣ ಟಿಬೆಟ್, ಭೂತಾನ್, ಭರ್ಮಾ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಹೆಚ್ಚಾಗಿ ಇವುಗಳು ಸಮಶೀತೋಷ್ಣ ವಲಯದ ಓಕ್ ಮತ್ತು ಕನಿಫರ್ ಅರಣ್ಯಗಳು, ಇಳಿಜಾರು ಹುಲ್ಲುಗಾವಲುಗಳು, ದೊಡ್ಡ ಬಂಡೆಗಳು, ಪರ್ವತ ಶ್ರೇಣಿಗಳು ಮತ್ತು ಸಮುದ್ರ ಮಟ್ಟಕ್ಕಿಂತ ಎತ್ತರದ ಪ್ರದೇಶಗಲ್ಲೇ ವಾಸಿಸುತ್ತವೆ. ಇವುಗಳು ದಟ್ಟ ಮಂಜು ಹಾಗೂ ಗಾಢ ಚಳಿಯನ್ನೂ ಸಹಿಸಿಕೊಳ್ಳುತ್ತವೆ. ಹಿಮ ಹಾಗೂ ಮಣ್ಣನ್ನು ಅಗೆದು ಮರ-ಗಿಡಗಳ ಬೇರುಗಳನ್ನು ಹಾಗೂ ಮಣ್ಣಿನಲ್ಲಿ ಹುದುಗಿರುವ ಹುಳು-ಹುಪ್ಪಟೆಗಳನ್ನು ತಿಂದು ಬದುಕುತ್ತವೆ.

ಇವುಗಳು ಗಂಡು ಮತ್ತು ಹೆಣ್ಣು ಹೆಚ್ಚಾಗಿ ಜೋಡಿಗಳಾಗಿಯೇ ಬದುಕುತ್ತವೆ. ಏಪ್ರಿಲ್‍ನಿಂದ ಆಗಸ್ಟ್ ಅವಧಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.
ಚಳಿಗಾಲದ ಅವಧಿಯಲ್ಲಿ ಅಲ್ಲಲ್ಲಿ ಚದುರಿರುವ ಎಲ್ಲ ಮೋನಲ್‍ಗಳು ಒಟ್ಟಾಗಿ ಒಂದೆಡೆ ವಿಶ್ರಾಂತಿ ಪಡೆಯುತ್ತವೆ. ಹಿಮಾಲಯನ್ ಮೋನಲ್‍ಗಳನ್ನು ಪಕ್ಕನೆ ಕಂಡಾಗ ನವಿಲಿನಂತೆ ಕಂಡರೂ ಅಚ್ಚರಿ ಪಡಬೇಕಿಲ್ಲ. ನವಿಲಿಗೆ ಹೋಲಿಸಿದಾಗ ಮೋನಲ್‍ಗಳ ನೋಟವೇ ಅತ್ಯಂತ ಆಕರ್ಷಣೀಯ.

Monal-3

ನವಿಲಿನ ಅಂದವನ್ನೂ ಮೀರಿಸುತ್ತದೆ. ಕಾಮನ ಬಿಲ್ಲಿನಂತೆ ಗರಿಯಲ್ಲಿನ ವರ್ಣ ವೈವಿಧ್ಯ, ಲೋಹೀಯ ತಂತಿಯಂತಹ ಹಸಿರು ಜುಟ್ಟು ಹಾಗೂ ಕಂದು ಬಣ್ಣದ ಜುಟ್ಟುಗಳೇ ಇದರ ವೈಶಿಷ್ಟ್ಯತೆಗಳು. ಇವುಗಳು ಬೇಟೆಗಾರರ ಹಾವಳಿಯಿಂದ ಹಾಗೂ ಮಾನವ ಜನ್ಯ ಕಾರಣಗಳಿಂದ (ಅರಣ್ಯನಾಶ, ಕಾಂಕ್ರಿಟೀಕರಣ, ಕೈಗಾರಿಕೀಕರಣ, ವಿಷಕಾರಿ ತ್ಯಾಜ್ಯ, ಪರಿಸರ ಮಾಲಿನ್ಯ) ಇಂದು ಅಳಿವಿನಂಚಿನಲ್ಲಿರುವುದು ಬೇಸರದ ಸಂಗತಿ. ಪಶ್ಚಿಮ ಹಿಮಾಲಯದಲ್ಲಿ ಜಲವಿದ್ಯುತ್ ಸ್ಥಾವರಗಳ ಹೆಚ್ಚಳದಿಂದಾಗಿ ಮೋನಲ್‍ಗಳ ವಂಶಾಭಿವೃದ್ಧಿ ಕುಂಠಿತಗೊಂಡಿದೆ ಎಂದು ಅಧ್ಯಯನವು ಹೇಳುತ್ತದೆ.

ಹಿಮಾಚಲ ಪ್ರದೇಶದಲ್ಲಿ ತಯಾರಿಸಲಾಗುವ ಟೊಪ್ಪಿಗಳನ್ನು ಅಲಂಕರಿಸಲು ಗಂಡು ಮೋನಲ್‍ಗಳ ಲೋಹಿಯಾ ವರ್ಣದ ಜುಟ್ಟನ್ನು ಬಳಸುವುದರಿಂದ ಗಂಡು ಮೋನಲ್‍ಗಳ ಸಂತತಿ ಅವನತಿಯತ್ತ ಸಾಗಿದೆ. 1982ರಲ್ಲಿ ಹಿಮಾಚಲ ಪ್ರದೇಶ ಸರ್ಕಾರವು ಮೋನಲ್‍ಗಳ ಬೇಟೆ ನಿಷೇಧಿಸಿ ಕಾನೂನನ್ನು ತಂದಿರುವುದರಿಂದ ತಕ್ಕಮಟ್ಟಿಗೆ ಇವುಗಳ ಸಂತತಿ ಪುನಶ್ಚೇತನಗೊಳ್ಳುತ್ತಿದೆ ಎನ್ನಬಹುದು.

ಕೆಲವೊಂದು ಪ್ರದೇಶಗಳಲ್ಲಿ ಇವುಗಳ ಸಂಖ್ಯೆ ಹೇರಳವಾಗಿದ್ದು, ಅಂಕಿ-ಅಂಶಗಳ ಪ್ರಕಾರ, ಪ್ರತೀ ಚದರ ಮೈಲಿಗೆ ತಲಾ ಐದು ಜತೆ ಮೋನಲ್‍ಗಳಿವೆ ಎಂದು ಹೇಳಲಾಗಿದೆ. ಈ ಪ್ರಬೇಧಕ್ಕಿರುವ ಏಕೈಕ ಗಂಡಾಂತರವೆಂದರೆ ಅವುಗಳ ಆಕರ್ಷಣೀಯ ವರ್ಣದಕಾರಣದಿಂದಾಗಿ ಹಾಗೂ ಇವುಗಳ ಜುಟ್ಟಿಗೆ ಮಾರುಕಟ್ಟೆಯಲ್ಲಿರುವ ಬೇಡಿಕೆಯ ಕಾರಣದಿಂದಾಗಿ ಇವುಗಳಿಗೆ ಬೇಟೆಗಾರರ ಹಾವಳಿ ಅಧಿಕವಾಗಿದೆ.  ಪ್ರಕೃತಿಯ ಕೊಡುಗೆಯಾಗಿರುವ ಈ ವಿಭಿನ್ನ ಹಿಮಾಲಯನ್ ಮೋನಲ್‍ಗಳನ್ನು ಉಳಿಸಿ-ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ.

Facebook Comments

Sri Raghav

Admin