ಕೆಸಿಆರ್ ವಿಧಾನಸಭೆ ವಿಸರ್ಜಿಸಿದರೆ ಕಾನೂನು ಹೋರಾಟ ನಡೆಸಲು ಕಾಂಗ್ರೆಸ್ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

KCR--01

ನವದೆಹಲಿ,ಸೆ.2-ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಿದರೆ ಕಾನೂನು ಹೋರಾಟ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.  ಚಂದ್ರಶೇಖರ್ ತೆಗೆದುಕೊಳ್ಳುವ ತೀರ್ಮಾನದ ನಂತರ ಕಾಂಗ್ರೆಸ್ ಮೊದಲು ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ. ಒಂದು ವೇಳೆ ಆಯೋಗ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟಕ್ಕೂ ಕಾಂಗ್ರೆಸ್ ಸಿದ್ದಗೊಂಡಿದೆ.

ಜನಾದೇಶಕ್ಕೆ ವಿರುದ್ದವಾಗಿ ವಿಧಾನಸಭೆಯನ್ನು ವಿಸರ್ಜನೆ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆ ಮಾಡುವ ಅಪಮಾನ. ಯಾವ ಕಾರಣಕ್ಕಾಗಿ ಚಂದ್ರಶೇಖರ್ ರಾವ್ ತೆಲಂಗಾಣದಲ್ಲಿ ವಿಧಾನಸಭೆಯನ್ನು ವಿಸರ್ಜನೆ ಮಾಡಲು ಮುಂದಾಗಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನಾವು ಎಲ್ಲ ರೀತಿಯ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದು ಪಕ್ಷದ ಪ್ರಮುಖರೊಬ್ಬರು ತಿಳಿಸಿದ್ದಾರೆ.

ನಿಗದಿತ ಅವಧಿಯಂತೆ ತೆಲಂಗಾಣದಲ್ಲಿ 2019ರ ಮೇ ತಿಂಗಳಿನಲ್ಲಿ ತೆಲಂಗಾಣಕ್ಕೆ ಚುನಾವಣೆ ನಡೆಯಬೇಕು. ಇನ್ನು 9 ತಿಂಗಳು ಸಮಯಾವಕಾಶ ಇರುವಾಗ ವಿಧಾನಸಭೆಯನ್ನು ವಿಸರ್ಜಿಸುವುದು ಸೂಕ್ತವಲ್ಲ. ಯಾವ ಕಾರಣಕ್ಕಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.  ಮೊದಲು ನಾವು ಚುನಾವಣೆ ನಡೆಸದಂತೆ ಆಯೋಗಕ್ಕೆ ಮನವಿ ಮಾಡಲಿದ್ದೇವೆ. ಆಯೋಗ ನಿರ್ಧಾರ ತೆಗೆದುಕೊಳ್ಳಲು ವಿಳಂಬವಾದರೆ ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ಕೋರಲಿದ್ದೇವೆ. ನಮಗೆ ಅಲ್ಲಿಯೂ ನ್ಯಾಯ ಸಿಗದಿದ್ದರೆ ಅಂತಿಮವಾಗಿ ಸುಪ್ರೀಂಕೋರ್ಟ್‍ನಲ್ಲಿ ಮೊಕದ್ದಮೆ ಹೂಡುವುದಾಗಿ ಪ್ರಮುಖರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಒಂದೇ ರಾಷ್ಟ್ರ ಒಂದೇ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂಥ ಸಂದರ್ಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ವಿಧಾನಸಭೆ ವಿಸರ್ಜನೆ ಮಾಡಿ ರಾಜ್ಯದ ಜನತೆ ಮೇಲೆ ಮತ್ತೊಂದು ಹೊರೆ ಹೊರೆಸಲು ಮುಂದಾಗಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಕಾನೂನಿನಲ್ಲಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.  ಮೂಲಗಳ ಪ್ರಕಾರ ಚಂದ್ರಶೇಖರ್ ರಾವ್ ಇಂದು ವಿಧಾನಸಭೆಯನ್ನು ವಿಸರ್ಜನೆ ಮಾಡುವ ಸಾಧ್ಯತೆ ಇದೆ ಎಂಬ ವದಂತಿ ಎಲ್ಲೆಡೆ ಕೇಳಿಬರುತ್ತಿದೆ.

Facebook Comments

Sri Raghav

Admin