ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ..ಇಂದು ಜಗದೋದ್ಧಾರಕನ ಜನ್ಮಾಷ್ಟಮಿ

ಈ ಸುದ್ದಿಯನ್ನು ಶೇರ್ ಮಾಡಿ

Krishna
ಜಗತ್ ರಕ್ಷಕ ಶ್ರೀಕೃಷ್ಣನನ್ನು ಭಕ್ತರು ಸುಂದರಾಂಗ, ಮನಮೋಹನ, ಚಿತ್ತಚೋರ ಎಂದೆಲ್ಲ ಬಣ್ಣಿಸುತ್ತಾರೆ. ಭಗವದ್ಗೀತೆ ಪಂಚ ಪಾಂಡವರಲ್ಲಿ ಒಬ್ಬನಾದ ತನ್ನ ಪರಮ ಶಿಷ್ಯನಾದ ಅರ್ಜುನನಿಗೆ ಬೋಧಿಸುವ ಮೂಲಕ ಇಡೀ ಜಗತ್ತಿಗೇ ಧರ್ಮ, ಸತ್ಯ, ನಿಷ್ಠೆ, ಪ್ರೀತಿಯ ದಾರಿ ತೋರಿದ್ದಾನೆ.

ಸಂಭವಾಮಿ ಯುಗೇ… ಯುಗೇ… ಧರ್ಮೋ ರಕ್ಷತಿ ರಕ್ಷಿತಃ
ಕೃಷ್ಣಾವತಾರದ ಉದ್ದೇಶ ವೇದಗಳ ಸಾರವನ್ನು ಗೀತೆಯ ಮೂಲಕ ನೀಡುವುದು. ಹೀಗಾಗಿ ಜ್ಞಾನಪ್ರದವಾದ ಕೃಷ್ಣಾವತಾರವನ್ನೇ ಕಲಿಯುಗದಲ್ಲಿರುವ ನಾವು ಉಪಾಸನೆ ಮಾಡಬೇಕು ಎಂದು ಜ್ಞಾನಿಗಳು ಹೇಳುತ್ತಾರೆ.  ಭಾಗವತದ ಏಕಾದಶಸ್ಕಂಧದಲ್ಲಿ ಕಲೌ ಕೃಷ್ಣಮ್ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಹಾಗಾಗಿ ಶ್ರೀಕೃಷ್ಣನ ಅವತಾರವಾದ ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದೇ ಉಪವಾಸ ಮಾಡುವುದು ಅತ್ಯಂತ ಶ್ರೇಷ್ಠ. ಶ್ರೀಕೃಷ್ಣ ಅವತರಿಸಿದ್ದು ಶ್ರಾವಣ ಕೃಷ್ಣ ಅಷ್ಟಮಿಯ ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ. ಶ್ರೀಕೃಷ್ಣ ವಿಷ್ಣು ಒಬ್ಬರೇ. ಲೋಕದಲ್ಲಿ ಅನೀತಿ ಹೆಚ್ಚಾದಾಗ ವಿಷ್ಣು ಶ್ರೀಕೃಷ್ಣನ ರೂಪದಲ್ಲಿ ಅವತರಿಸಿದ ಎಂದು ನಂಬಲಾಗುತ್ತದೆ.

ಶ್ರೀಕೃಷ್ಣ ಶಬ್ದದ ಅರ್ಥ ಆಕರ್ಷಣೆ ಮಾಡುವವನು, ಆನಂದ ಸ್ವರೂಪ, ದುರ್ನಡತೆಯನ್ನು ಬಿಡಿಸುವವನು ಎಂಬುದಾಗಿದೆ.  ಶ್ರೀಕೃಷ್ಣ ನಿರ್ಮೋಹಿ, ನಿರಹಂಕಾರಿ, ಮಹಾಯೋಗಿಯಾಗಿದ್ದ. ಶ್ರೀಕೃಷ್ಣನ ಮೂರ್ತಿ ಯನ್ನು ಇಂದಿಗೂ ಮಂದಿರಗಳಲ್ಲಿ ಸಿಂಗಾರ ಮಾಡಿ ಪೂಜಿಸಲಾಗುತ್ತದೆ. ಅವನ ಮನಸ್ಸು ಮಂದಿರಕ್ಕೆ ಸಮ.
ಶ್ರೀಕೃಷ್ಣನ ಚಿತ್ರಗಳನ್ನು ನೋಡಿದಾಗ ನಯನಗಳಲ್ಲಿ ಶೀತಲೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಕೃಷ್ಣನನ್ನು ಪಿತಾಂಬರಧಾರಿಯಾಗಿ ಕೊಳಲನ್ನು ನುಡಿಸುತ್ತಿರುವಂತೆ ತೋರಿಸುತ್ತಾರೆ. ಅವನ ಸುತ್ತಮುತ್ತ ಹಸುಗಳು ಮತ್ತು ಗೋಪಿಕೆಯರು ಹಾಡಿ ಕುಣಿಯುತ್ತಿರುವುದನ್ನು ಬಿಂಬಿಸಲಾಗುತ್ತದೆ.
ಭಕ್ತರು ಕೃಷ್ಣನ ಮೂರ್ತಿಯ ಚರಣ ಕಮಲಗಳನ್ನು ತೊಳೆದು ಚರಣಾಮೃತವನ್ನು ಸ್ವೀಕರಿಸಿ ಧನ್ಯರಾದೆವೆಂದು ಭಾವಿಸುತ್ತಾರೆ.

ಸತ್ಯಯುಗದಲ್ಲಿ ಮೊದಲನೆ ರಾಜಕುಮಾರ ಶ್ರೀಕೃಷ್ಣ. ಕೃಷ್ಣನನ್ನು ಸಮುದ್ರದ ಮಧ್ಯದಲ್ಲಿ ಆಲದ ಎಲೆಯಲ್ಲಿ ಬರುವಂತೆ ತೋರಿಸುತ್ತಾರೆ. ಅದರ ಅರ್ಥವೇನೆಂದರೆ – ಭವಿಷ್ಯದಲ್ಲಿ ಸಂಭವಿಸುವ ಮಹಾವಿನಾಶದ ನಂತರ ಭೂಮಿಯು ಜಲಮಯವಾಗುತ್ತದೆ. ಯಾವ ದೇಶಗಳೂ ಇರುವುದಿಲ್ಲ. ನಾವು ಇತಿಹಾಸದಲ್ಲಿ ಓದಿದಂತೆ ಅಮೆರಿಕಾ ಹಾಗೂ ಇತರೆ ರಾಷ್ಟ್ರಗಳನ್ನು ಕೊಲಂಬಸ್‍ನಂತಹ ಯಾತ್ರಿಕರು ಕಂಡು ಹಿಡಿದಿದ್ದಾರೆ. ವಿದೇಶಗಳು ಸತ್ಯಯುಗದಲ್ಲಿ ಇರುವುದಿಲ್ಲ. ಕೇವಲ ಭಾರತ ದೇಶ ಮಾತ್ರ ಇರುತ್ತದೆ. ಅಂತರಿಕ್ಷದಿಂದ ನೋಡಿದಾಗ ಭಾರತವು ಆಲದ ಎಲೆಯಂತೆ ಕಾಣುತ್ತದೆ. ಸತ್ಯಯುಗದಲ್ಲಿ ಆತ್ಮವು 8 ಜನ್ಮಗಳನ್ನು ತೆಗೆದುಕೊಳ್ಳುತ್ತದೆ. ರಾಧಾಕೃಷ್ಣರು ತಮ್ಮ 35ನೆ ವಯಸ್ಸಿನಲ್ಲಿ ಸಿಂಹಾಸನಾಧೀಶರಾಗಿ ತಮ್ಮ ಹೆಸರನ್ನು ಲಕ್ಷ್ಮೀ-ನಾರಾಯಣರಾಗಿ ಪರಿವರ್ತನೆ ಮಾಡಿಕೊಂಡು ರಾಜ್ಯವನ್ನು ಆಳುತ್ತಾರೆ.

ಅವರ ರಾಜ್ಯವಂಶದಲ್ಲಿ ಹತ್ತಿರದ ಸಂಬಂಧಿಕರು 16,108 ಜನ ಇರುತ್ತಾರೆ. ಒಟ್ಟು 9 ಲಕ್ಷ ಪ್ರಜೆಗಳೂ ಇರುತ್ತಾರೆ. ಅಲ್ಲಿ ಒಂದೇ ರಾಜ್ಯ, ಒಂದೇ ಭಾಷೆ ಇರುತ್ತದೆ. ಎಲ್ಲರೂ ಯೋಗಶಕ್ತಿಯಿಂದ ಜನ್ಮ ಪಡೆಯುತ್ತಾರೆ. ಲಕ್ಷ್ಮೀ-ನಾರಾಯಣರಿಗೆ ಯೋಗಬಲದಿಂದ ಒಂದು ಮಗು ಆಗುತ್ತದೆ. ಆ ಮಗುವಿಗೆ 35 ವರ್ಷಗಳಾದ ನಂತರ ಪಟ್ಟಾಭಿಷೇಕ ಮಾಡಿ ರಾಜ್ಯ ಅಧಿಕಾರವನ್ನು ಕೊಡುತ್ತಾರೆ. ಈ ರೀತಿಯಲ್ಲಿ 8 ಜನ ರಾಜಕುಮಾರರು ವಂಶಪಾರಂಪರ್ಯವಾಗಿ ರಾಜ್ಯಭಾರ ಮಾಡುತ್ತಾರೆ. ಆದ್ದರಿಂದ ಕೃಷ್ಣಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ ಎನ್ನಲಾಗಿದೆ.

Krishna-2

ಭಾರತೀಯರು ಶ್ರೀಕೃಷ್ಣನ ಜನ್ಮದಿನವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸುತ್ತಾರೆ. ಭಾರತದಲ್ಲಿ ಬೃಂದಾವನ, ಮಥುರ, ದ್ವಾರಕ ಮತ್ತಿತರ ದೇಶ-ವಿದೇಶಗಳಲ್ಲಿ ಇರುವ ಇಸ್ಕಾನ್ ಮಂದಿರಗಳಲ್ಲಿ ಮುದ್ದು ಕೃಷ್ಣನ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಅನೇಕ ಸ್ಥಳಗಳಲ್ಲಿ ದಹಿ ಹಂಡೆ (ಮೊಸರಿನ ಗಡಿಗೆ)ಯನ್ನು ಒಡೆಯುವ ಸ್ಪರ್ಧೆ ಏರ್ಪಡಿಸುವುದು ವಾಡಿಕೆ.

ನಮ್ಮೆಲ್ಲರನ್ನೂ ಉದ್ಧಾರ ಮಾಡಲು ಅವತರಿಸಿ ಬಂದ ಆ ಪರಬ್ರಹ್ಮನನ್ನು ನೆನೆಯುವುದು, ಪೂಜಿಸುವುದಕ್ಕಿಂತ ಮಿಗಿಲಾದುದು ಮತ್ತೇನಿದೆ.  ಪರಮಾತ್ಮ ಅವತರಿಸಿದ ಈ ಪವಿತ್ರ ದಿನ ಇಪ್ಪತ್ತು ಕೋಟಿ ಏಕಾದಶಿಗಳಿಗೆ ಸಮವಾದ ವ್ರತ ಎಂದು ಬ್ರಹ್ಮವೈವರ್ತ ಪುರಾಣ ತಿಳಿಸುತ್ತದೆ. ಏಕಾದಶೀನಾಂ ವಿಶಂತ್ಯಃ ಕೋಟ್ಯೋ ಯಾಃ ಪರಿಕೀರ್ತಿತಾಃ ಐ ತಾಭಿಃ ಕೃಷ್ಣಾಷ್ಟಮಿ ತುಲ್ಯಾ.

ಕೃತಯುಗ, ತ್ರೇತಾ ಯುಗ, ದ್ವಾಪರಯುಗ ಮತ್ತು ಕಲಿಯುಗ-ನಾಲ್ಕು ಯುಗಗಳ ಸಮೂಹಕ್ಕೆ ಮಹಾಯುಗ ಎನ್ನುತ್ತಾರೆ. ಇದರ ಪರಿಮಾಣ 43,20,000 ವರ್ಷಗಳು. ಈ ರೀತಿಯ ಎರಡು ಮಹಾ ಯುಗಗಳಲ್ಲಿ ಅಂದರೆ 86,40,000 ವರ್ಷಗಳಲ್ಲಿ ಒಟ್ಟು 20,73,60,000 ಏಕಾದಶಿಗಳು ಬರುತ್ತವೆ. ಅಷ್ಟೂ ಏಕಾದಶಿಗಳನ್ನು ಮಾಡಿದಲ್ಲಿ ಪಾಪ ಪರಿಹಾರವಾಗುತ್ತದೆ. ಎಷ್ಟು ಪುಣ್ಯ ಒದಗಿ ಬರುತ್ತದೆಯೋ ಅಷ್ಟು ಫಲ ಕೇವಲ ಒಂದು ಕೃಷ್ಣಜಯಂತಿಯಂದು ಶ್ರದ್ಧೆಯಿಂದ ಉಪವಾಸ ಮಾಡಿ, ಭಕ್ತಿಯಿಂದ ಭಗವಂತನನ್ನು ಅರ್ಚಿಸಿದಲ್ಲಿ ಒದಗಿಬರುತ್ತದೆ. ಕೃಷ್ಣಾಷ್ಟಮಿಯ ಬಗ್ಗೆ ಪೂರ್ಣ ತಿಳಿಯದೆ ಕೇವಲ ಸಜ್ಜನರ ಸಂಪರ್ಕದಿಂದ ಉಪವಾಸ ಮಾಡಿದರೂ, ಮನಸ್ಸಿನ ಎಲ್ಲ ಅಭೀಷ್ಟಗಳನ್ನು ಶ್ರೀಕೃಷ್ಣ ಪೂರೈಸುತ್ತಾನೆ. ಇನ್ನು ಕೃಷ್ಣಜನ್ಮಾಷ್ಟಮಿ ವ್ರತದ ಮಹಾತ್ಮೆಯನ್ನು ತಿಳಿದುಕೊಂಡು ಭಕ್ತಿಯಿಂದ ವ್ರತ ಮಾಡುವ ಭಕ್ತರ ಮೇಲೆ ಶ್ರೀಹರಿ ಪೂರ್ಣ ಪ್ರಸನ್ನನಾಗುತ್ತಾನೆ. ಪ್ರೀತಿಯಿಂದ ತನ್ನ ಲೋಕದಲ್ಲಿ ಶಾಶ್ವತವಾದ ಸ್ಥಾನ ನೀಡುತ್ತಾನೆ.

ಈ ಬಾರಿ (ಸೆ.2) ಕೇವಲ ಕೃಷ್ಟಾಷ್ಟಮಿಯಲ್ಲ, ಶ್ರೀ ಕೃಷ್ಣ ಜಯಂತಿಯೂ ಬಂದಿದೆ. ಸರ್ವೋತ್ತಮವಾದ ದಿವಸ. ಆ ದಿವಸ ಯಾವುದೇ ಕೆಲಸ-ಕಾರ್ಯಗಳಿದ್ದರೂ ಬದಿಗಿರಿಸಿ, ಸಿನಿಮಾ, ಹರಟೆ ಮುಂತಾದವುಗಳ ಮೊರೆ ಹೋಗದೆ ಇಡೀ ದಿವಸ ಪರಿಶುದ್ಧವಾದ ಕ್ರಮದಲ್ಲಿ ನೀರನ್ನೂ ಸ್ವೀಕರಿಸದೆ ಉಪವಾಸವನ್ನು ಆಚರಿಸಿ.
ಶ್ರೀಕೃಷ್ಣನ ಪ್ರೀತಿಗಾಗಿ ವಿಷ್ಣು ಸಹಸ್ರನಾಮ, ಭಗವದ್ಗೀತೆಗಳನ್ನು ಪಠಿಸಿ. ಭಗವದ್ಗೀತೆಯ ಒಂದು ತತ್ವವನ್ನಾದರೂ ಆ ದಿವಸ ತಿಳಿಯಲು ಪ್ರಯತ್ನ ಪಡಿ. ರಾತ್ರಿಯಲ್ಲಿ ಪರಮಭಕ್ತಿಯಿಂದ ಆ ಶ್ರೀಕೃಷ್ಣನಿಗೆ ಪೂಜೆ ಮಾಡಿ ಅಘ್ರ್ಯ ಪ್ರದಾನವನ್ನು ಮಾಡಿ. ಜೀವನ ಸಾರ್ಥಕವಾಗುತ್ತದೆ.

Facebook Comments

Sri Raghav

Admin