ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಅವಧಿಪೂರ್ಣಗೊಳಿಸುವುದಿಲ್ಲ : ಬಿಎಸ್ವೈ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

yadiyurappa--01

ಬಾಗಲಕೋಟೆ,ಸೆ.2- ಯಾವುದೇ ಕಾರಣಕ್ಕೂ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅವಧಿಪೂರ್ಣಗೊಳಿಸುವುದಿಲ್ಲ. ಸದ್ಯದಲ್ಲೇ ಸರ್ಕಾರ ಪತನವಾಗಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.  ರಾಜ್ಯದಲ್ಲಿ ಸರ್ಕಾರ ಬದುಕಿದ್ದು ಸತ್ತು ಹೋಗಿದೆ. ದುಡ್ಡು ತಿಂದು ವರ್ಗಾವಣೆ ದಂಧೆ, ವಸೂಲಿ ಕಾರ್ಯಕ್ಕೆ ಸರ್ಕಾರ ಇಳಿದಿದೆ. ಹೆಚ್ಚೆಂದರೆ ಮೂರು ತಿಂಗಳು ಮಾತ್ರ ಈ ಸರ್ಕಾರ ಆಡಳಿತ ನಡೆಸಬಹುದೆಂದು ಹೇಳಿದರು.

ಜಿಲ್ಲೆಯಲ್ಲಿ ಮುದೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ದಿ ಕಾರ್ಯ ನಡೆಯುತ್ತಿಲ್ಲ. ಸಾಲಮನ್ನಾ ಬಗ್ಗೆ ಸ್ಪಷ್ಟತೆ ಇಲ್ಲ. ಸಹಕಾರಿ ಬ್ಯಾಂಕ್‍ಗಳು ದಿವಾಳಿ ಆಗುತ್ತಿವೆ. ರಾಜ್ಯದ 13 ಜಿಲ್ಲೆಗಳಲ್ಲಿ ಭೀಕರ ಬರ ಇದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದಲ್ಲಿ ಒಂದು ದಿನ ಪ್ರವಾಸ ಮಾಡಿಲ್ಲ ಎಂದು ಕಿಡಿಕಾರಿದರು.

ನೂರು ದಿನದ ಸಂಭ್ರಮದಲ್ಲಿರುವ ಸರ್ಕಾರಕ್ಕೆ ರಾಜ್ಯದ ಮುಖ್ಯ ಸಮಸ್ಯೆಗಳ ಬಗ್ಗೆ ಗಮನವಿಲ್ಲ. ಬಹುಮತ ಪಡೆದಿರುವ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.50 ರಷ್ಟು ಸ್ಥಾನ ಬಿಜೆಪಿಗೆ ಬರಲಿದೆ. ಸಮನ್ವಯ ಸಮಿತಿ ಸಭೆ ನಡೆಸಿದ್ದೇ ದೊಡ್ಡ ಸಾಧನೆ ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ. ರಾಜ್ಯದಲ್ಲಿ ತುಘಲಕ್ ಆಡಳಿತವಿದೆ. ಪರಿಸ್ಥಿತಿ ನೋಡಿದರೆ ಸರ್ಕಾರ ಬಹಳ ದಿನ ಉಳಿಯಲ್ಲ. ಕಾಂಗ್ರೆಸ್‍ನಲ್ಲಿ ಗೊಂದಲದ ವಾತಾವರಣ ಇದೆ. ಬಿಜೆಪಿಯವರು ಈಗ ಅಧಿಕಾರಕ್ಕೆ ಬರುತ್ತೇವೆ, ಬಿಎಸ್‍ವೈ ಮುಖ್ಯಮಂತ್ರಿ ಆಗ್ತಾರೆ ಎಂಬುದು ಶೀಘ್ರದಲ್ಲಿ ಬಯಲಾಗುತ್ತದೆ ಎಂದರು.

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಎಸ್‍ವೈ, ಯಾರು ಹಗಲುಗನಸು ಕಾಣುತ್ತಿದ್ದಾರೆ ಎಂಬುದು ಸದ್ಯದಲ್ಲೇ ತಿಳಿಯಲಿದೆ. ಹಾಸನ ಸೇರಿದಂತೆ ಎಲ್ಲೆಲ್ಲಿ ಅವರು ಏನೇನು ಮಾತನಾಡಿದ್ದಾರೆ ಎಂಬುದು ಗೊತ್ತಾಗುತ್ತದೆ.

ಕುಮಾರಸ್ವಾಮಿ ದೇವಸ್ಥಾನ ಭೇಟಿಗೆ ನಮ್ಮ ಅಭ್ಯಂತರ ಇಲ್ಲ. ಆದರೆ, ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಬೆಂಬಲ ಬೆಲೆ ಕೇಂದ್ರ ನಿಗದಿ ಮಾಡಿದರೂ ರಾಜ್ಯ ಇನ್ನೂ ಖರೀದಿ ಮಾಡ್ತಿಲ್ಲ. ತಮ್ಮ ಹಾಗೂ ಸಿದ್ದರಾಮಯ್ಯ ಫೋನ್ ಕದ್ದಾಲಿಕೆ ತನಿಖೆ ಆಗಬೇಕು. ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿರುವುದು ಸತ್ಯ. ಲೋಕಸಭೆಗೆ ಸಿದ್ದರಾಮಯ್ಯ ಎಲ್ಲಿಂದಾದರೂ ಸ್ಪರ್ಧಿಸಲಿ, ನಮಗೇನು ಆಗಲ್ಲ. ಮೋದಿ ಇಮೇಜ್ ದಿನೇದಿನೆ ಜಾಸ್ತಿ ಆಗುತ್ತಿದೆ. ಹಾಗಾಗಿ ನಾವೇ ಗೆಲ್ಲುತ್ತೇವೆ ಎಂದರು.

Facebook Comments

Sri Raghav

Admin