ಹಿಂದು ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಐಎಸ್ ಬೆಂಬಲಿಗ ಸೇರಿ ಐವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

5-Arrsted--01

ಕೊಯಮತ್ತೂರು, ಸೆ.3- ಮೂವರು ಹಿಂದು ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಐವರು ಯುವಕರನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರಗಾಮಿ ಸಂಘಟನೆ ಜೊತೆ ನಂಟು ಹೊಂದಿರುವ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.  ಕೊಯಮತ್ತೂರಿನ ಆರ್.ಆಶೀಖ್(25), ಚೆನ್ನೈನ ಐ. ಜಾಫರ್ ಸಾದಿಕ್ ಅಲಿ(29), ತಿಂಡಿವನಂನ ಎಸ್. ಇಸ್ಮಾಯಿಲ್, ಪಲ್ಲವರಂನ ಎಸ್. ಶಂಷುದ್ದೀನ್ ಹಾಗೂ ಚೆನ್ನೈನ ಎಸ್. ಸಲಾಹುದ್ಧೀನ್ ಬಂಧಿತ ಆರೋಪಿಗಳು. ಹಿಂದು ಮುನ್ನಾನಿ ನಾಯಕ ಅರ್ಜುನ್ ಸಂಪತ್, ಶಕ್ತಿ ಸೇನಾ ಮುಖಂಡ ಅನ್ಬು ಮರಿ ಹಾಗೂ ಹಿಂದು ಮಕ್ಕಳ ಕಚ್ಚಿ(ಎಚ್‍ಎಂಕೆ) ಸಂಘಟನೆಯ ಮತ್ತೊಬ್ಬ ಧುರೀಣರನ್ನು ಕೊಲ್ಲಲು ಇವರು ಸಂಚು ರೂಪಿಸಿದ್ದರು. ಅಲ್ಲದೇ ಸಮಾಜದಲ್ಲಿ ಶಾಂತಿ ಮತ್ತು ಕೋಮು ಸಾಮರಸ್ಯ ಕದಡಲು ಸಹ ಕುತಂತ್ರ ರೂಪಿಸಿದ್ದರು.

ಪೆರೋಲ್ (ಜೈಲಿನ ರಜೆ) ಮೇಲೆ ಹೊರಬಂದಿದ್ದ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯೊಬ್ಬನ ವಿವಾಹದಲ್ಲಿ ಭಾಗವಹಿಸಲು ಇವರು ಕೊಯಮತ್ತೂರಿಗೆ ಬರುತ್ತಾರೆ ಎಂಬ ಗುಪ್ತಚರ ಮಾಹಿತಿಯನ್ನು ಆಧರಿಸಿ ವಿಶೇಷ ತನಿಖಾ ಘಟಕದ ಪೊಲೀಸರು ಬಲೆ ಬೀಸಿದ್ದರು. ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಳಪುಳ ಎಕ್ಸ್‍ಪ್ರೆಸ್ ರೈಲಿನಲ್ಲಿ ಕೊಯಮತ್ತೂರು ರೈಲ್ವೆ ಜಂಕ್ಷನ್‍ಗೆ ಬಂದ ಇವರನ್ನು ಶನಿವಾರ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಬಣದೊಂದಿಗೆ ಸಂಪರ್ಕ ಹೊಂದಿದವನಾಗಿದ್ದಾನೆ ಎಂದು ತಿಳಿದು ಬಂದಿದೆ. ಮೂವರು ಹಿಂದು ಧುರೀಣರನ್ನು ಕೊಲ್ಲುವುದು ತಮ್ಮ ಉದ್ದೇಶವಾಗಿತ್ತು. ಅಲ್ಲದೆ, ತಮಿಳುನಾಡು ಸೇರಿದಂತೆ ವಿವಿಧೆಡೆ ಕೋಮು ಸೌಹಾರ್ದ ವಾತಾವರಣ ಕದಡಿ ಗಲಭೆ ಸೃಷ್ಟಿಸುವುದು ಸಹ ನಮ್ಮ ಯೋಜನೆಯಾಗಿತ್ತು ಎಂದು ಬಂಧಿತರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳು ಇನ್ನು ಕೆಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಗೊಳಿಸಿದ್ದಾರೆ. ಗೋಪ್ಯದ ದೃಷ್ಟಿಯಿಂದ ಅವುಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಹಿಂದೂ ನಾಯಕರು ಮತ್ತು ವಿಚಾರವಾದಿಗಳನ್ನು ಕೊಂದಿರುವ ಪ್ರಕರಣ ಭಾರೀ ಸುದ್ದಿಯಾಗಿರುವಾಗಲೇ ತಮಿಳುನಾಡಿನಲ್ಲಿ ಐವರು ಬಂಧಿತರಾಗಿರುವುದು ಆತಂಕ ಮೂಡಿಸಿದೆ.

Facebook Comments

Sri Raghav

Admin