ತುಮಕೂರಲ್ಲಿ ಮೆರವಣಿಗೆ ವೇಳೆ ಕಿಡಿಗೇಡಿಗಳಿಂದ ಆ್ಯಸಿಡ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Acid-Attack--01

ತುಮಕೂರು, ಸೆ.3-ಮೆರವಣಿಗೆ ವೇಳೆ ಕಿಡಿಗೇಡಿಗಳು ಆ್ಯಸಿಡ್ ದಾಳಿ ನಡೆಸಿದ ಪರಿಣಾಮ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. 16ನೆ ವಾರ್ಡ್‍ನ ಕಾಂಗ್ರೆಸ್ ಅಭ್ಯರ್ಥಿ ಆರಿಫ್ ಹುಸೇನ್ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ನೂರಾರು ಕಾರ್ಯಕರ್ತರು ಎನ್‍ಆರ್ ಕಾಲೋನಿ ಬಳಿಯ ಕೋತಿತೋಪು ರಸ್ತೆಯಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸುತ್ತಿದ್ದಾಗ ಆ್ಯಸಿಡ್ ದಾಳಿ ನಡೆಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಜಿ ಶಾಸಕ ಶಫಿ ಅಹಮ್ಮದ್ ಅವರ ಮನೆ ಸಮೀಪವೇ ಘಟನೆ ನಡೆದಿದ್ದು, ಮನ್ಸೂರ್ ಎಂಬುವವರ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿ ಸ್ಥಳದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ಉಂಟಾಗಿದ್ದು, ಸ್ಥಳಕ್ಕೆ ತಿಲಕ್‍ಪಾರ್ಕ್ ವೃತ್ತ ನಿರೀಕ್ಷಕ ರಾಧಾಕೃಷ್ಣ, ನಗರ ವೃತ್ತ ನಿರೀಕ್ಷಕ ಚಂದ್ರಶೇಖರ್, ಡಿವೈಎಸ್‍ಪಿ ನಾಗರಾಜ್, ಎನ್‍ಇಪಿಎಸ್ ಸಬ್‍ಇನ್ಸ್‍ಪೆಕ್ಟರ್ ರಾಘವೇಂದ್ರ, ನಗರಠಾಣೆ ಸಬ್‍ಇನ್ಸ್‍ಪೆಕ್ಟರ್ ವಿಜಯಲಕ್ಷ್ಮಿ ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

# ಸೊಗಡು ಶಿವಣ್ಣ ತರಾಟೆ:
ಘಟನೆ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಭೇಟಿಗೆ ಆಗಮಿಸಿದ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದೇನು ಆಸ್ಪತ್ರೆಯೋ ಕುರಿ ದೊಡ್ಡಿಯೋ ನಿಮಗೇನು ಜವಾಬ್ದಾರಿ ಇಲ್ಲವೇ. ಮಾಧ್ಯಮಗಳನ್ನು ನಿಯಂತ್ರಿಸುವ ಕೆಲಸ ಮಾಡುವ ಬದಲಿಗೆ ಆ್ಯಂಬುಲೆನ್ಸ್ ಕರೆಸಿ ಜಿಲ್ಲಾಸ್ಪತ್ರೆಗೆ ಗಾಯಗೊಂಡವರನ್ನು ಕಳುಹಿಸಿ ಎಂದು ಗರಂ ಆದರು. ಕೂಡಲೇ ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.

Facebook Comments

Sri Raghav

Admin