ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ, ಯಾರಿಗೆ ಕಹಿ..? ಯಾರಿಗೆ ಸಿಹಿ..?

ಈ ಸುದ್ದಿಯನ್ನು ಶೇರ್ ಮಾಡಿ

Local-Body-Electionಬೆಂಗಳೂರು, ಸೆ.3- ತೀವ್ರ ಕುತೂಹಲ ಕೆರಳಿಸಿದ್ದ ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳಿಗೆ ಅಗ್ನಿಪರೀಕ್ಷೆ ಎಂದೆನಿಸಿದ್ದ ಮೂರು ಮಹಾನಗರ ಪಾಲಿಕೆ, 102 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್, ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ, ಇನ್ನುಳಿದಂತೆ ಕಾಂಗ್ರೆಸ್ ತನ್ನ ಪ್ರಾಬಲ್ಯಮೆರೆದಿದೆ.  ಮತದಾರ ಪ್ರಭು ಯಾವುದೇ ಪಕ್ಷಕ್ಕೂ ಸ್ಪಷ್ಟಬಹುಮತ ನೀಡದಿದ್ದರೂ ನಗರಸಭೆಗಳಲ್ಲಿ ಬಿಜೆಪಿ ಅಲ್ಪಮಟ್ಟಿನ ಶಕ್ತಿ ವೃದ್ಧಿಸಿಕೊಂಡಿದೆ. ಪುರಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲುವು ಸಾಧಿಸಿದರೆ, ಪಟ್ಟಣ ಪಂಚಾಯ್ತಿಗಳಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಸಮಬಲದ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್ ಪಕ್ಷ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ.

ಮೂರು ಮಹಾನಗರ ಪಾಲಿಕೆಗಳ ಪೈಕಿ ಶಿವಮೊಗ್ಗ ಬಿಜೆಪಿ ಪಾಲಾದರೆ, ಇನ್ನುಳಿದ ಎರಡು ಪಾಲಿಕೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರೂ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಮೈಸೂರು ಮಹಾನಗರ ಹಾಗೂ ತುಮಕೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ್ದರೂ ಅಧಿಕಾರ ಹಿಡಿಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎರಡು ಪಾಲಿಕೆಗಳಲ್ಲಿ ಆಡಳಿತಾರೂಢ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆಗೇರುವ ಸಾಧ್ಯತೆ ಇದೆ. ರಾಜ್ಯದ 21 ಜಿಲ್ಲೆಗಳ 29 ನಗರ ಸಭೆಗಳು, 53 ಪುರಸಭೆಗಳು ಹಾಗೂ 20 ಪಟ್ಟಣ ಪಂಚಾಯ್ತಿಗಳಿಂದ ಒಟ್ಟಾರೆ 2664 ವಾರ್ಡ್‍ಗಳ ಚುನಾವಣಾ ಫಲಿತಾಂಶದಲ್ಲಿ ನಗರಸಭೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದರೆ, ಪುರಸಭೆಗಳಲ್ಲಿ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಪಡೆದಿದೆ. ಪಟ್ಟಣ ಪಂಚಾಯತ್‍ಗಳಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ ಸಾಧಿಸಿವೆ. ಜೆಡಿಎಸ್ ಮೂರನೆ ಸ್ಥಾನದಲ್ಲಿದೆ.

ಮಡಿಕೇರಿಯ ಮೂರು ಪಟ್ಟಣ ಪಂಚಾಯ್ತಿಯ 45 ವಾರ್ಡ್‍ಗಳನ್ನು ಹೊರತುಪಡಿಸಿ 2664 ವಾರ್ಡ್‍ಗಳಿಗೆ ನಡೆದ ಚುನಾವಣಾ ಫಲಿತಾಂಶ ಮಧ್ಯಾಹ್ನದ ವೇಳೆಗೆ ಬಹುತೇಕ ಪ್ರಕಟಗೊಂಡಿದ್ದು, ಪ್ರಕಟಿತ 2626 ಫಲಿತಾಂಶದಲ್ಲಿ ಕಾಂಗ್ರೆಸ್ 967, ಬಿಜೆಪಿ 916, ಜೆಡಿಎಸ್ 373, ಪಕ್ಷೇತರ 326, ಇತರೆ 35, ಬಿಎಸ್‍ಪಿ 13 ವಾರ್ಡ್ ಗಳಲ್ಲಿ ಜಯಗಳಿಸಿದೆ.  ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿರುವುದರಿಂದ ಬಿಜೆಪಿ ಹೊರತುಪಡಿಸಿ ಹೊಂದಾಣಿಕೆ ಮಾಡಿಕೊಂಡು ಅತಂತ್ರವಿರುವೆಡೆ ಅಧಿಕಾರ ಹಿಡಿಯಲು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಈಗಾಗಲೇ ಕಸರತ್ತು ಆರಂಭಿಸಿವೆ. ಚುನಾವಣಾ ಪೂರ್ವದಲ್ಲೇ ರಾಜ್ಯ ನಾಯಕರುಗಳು ಮೈತ್ರಿ ವಿಷಯವನ್ನು ಸ್ಥಳೀಯ ನಾಯಕರಿಗೆ ವಹಿಸಿದ್ದರು. ಹೀಗಾಗಿ ಅಲ್ಲಿನ ಪರಿಸ್ಥಿತಿಗನುಗುಣವಾಗಿ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಲು ನಿರ್ದೇಶನ ನೀಡಲಿದ್ದಾರೆ.

ಹಲವೆಡೆ ಪಕ್ಷೇತರರು ನಿರ್ಣಾಯಕವಾಗಲಿದ್ದು, ಅವರಿಗೆ ಈಗ ಫುಲ್ ಡಿಮ್ಯಾಂಡ್ ಬಂದಿದೆ. ರಾಷ್ಟ್ರೀಯ ಪಕ್ಷಗಳವರು ಪಕ್ಷೇತರರನ್ನು ತಮ್ಮತ್ತ ಸೆಳೆಯುವ ಕಸರತ್ತು ಆರಂಭಿಸಿದ್ದಾರೆ.  ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಪುರಸಭೆ, ನಗರಸಭೆಗಳಲ್ಲಿ ಬಿಜೆಪಿ ತನ್ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಅದೇ ರೀತಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲೂ ತನ್ನ ಪ್ರಾಬಲ್ಯವನ್ನು ವೃದ್ಧಿಸಿಕೊಂಡಿದೆ. ಆಡಳಿತಾರೂಡ ಜೆಡಿಎಸ್, ಕಾಂಗ್ರೆಸ್ ಪಕ್ಷ ಪೈಪೋಟಿ ನೀಡಿದ್ದರೂ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗಿಲ್ಲ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ತವರು ಕ್ಷೇತ್ರ ಕೊರಟಗೆರೆ ಪುರಸಭೆಯಲ್ಲಿ ಜೆಡಿಎಸ್ ಜಯಗಳಿಸಿದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾದಾಮಿ ನಗರಸಭೆಯಲ್ಲಿ ಕಾಂಗ್ರೆಸ್ ಪ್ರಯಾಸದ ಗೆಲುವು ಸಾಧಿಸಿದೆ.

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರ ಜೇವರ್ಗಿ ಪುರಸಭೆಯಲ್ಲಿ ಕಾಂಗ್ರೆಸ್‍ಗೆ ಬಿಜೆಪಿ ಪ್ರಬಲ ಪೈಪೋಟಿ ನೀಡಿದೆ. ಇತ್ತ ಚಾಮರಾಜನಗರ ಜಿಲ್ಲೆಯಲ್ಲಿ ಸಚಿವರಾದ ಪುಟ್ಟರಂಗಶೆಟ್ಟಿ ಅವರಿಗೆ ತೀವ್ರ ಮುಖಭಂಗವಾಗಿದೆ. ಗದಗದಲ್ಲಿ ಕಾಂಗ್ರೆಸ್ ಪ್ರಯಾಸದ ಗೆಲುವು ಸಾಧಿಸಿದರೆ, ಸಚಿವ ಯು.ಟಿ.ಖಾದರ್ ಅವರ ಕ್ಷೇತ್ರವಾದ ಉಳ್ಳಾಲದಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಕಾರ್ಕಳ, ಕಲಬುರಗಿ ಜಿಲ್ಲೆಯ ಅಳಂದಾ, ಸಂಕೇಶ್ವರ, ತೇರದಾಳ, ಟಿ.ನರಸೀಪುರ, ಪುರಸಭೆಗಳ ಫಲಿತಾಂಶ ಅತಂತ್ರವಾಗಿದೆ.

ಇದೇ ರೀತಿ ಹಿರೇಕೆರೂರು ಪಟ್ಟಣ ಪಂಚಾಯತ್, ಹಾವೇರಿ ನಗರ ಸಭೆ, ರಾಣೆಬೆನ್ನೂರು ನಗರಸಭೆ, ಸೇರಿದಂತೆ ಹಲವೆಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಸನದಲ್ಲಿ ಜೆಡಿಎಸ್ ಪಕ್ಷ ಕ್ಲೀನ್ ಸ್ವೀಪ್ ಮಾಡಿದೆ. ಹೊಳೆನರಸೀಪುರ ಒಟ್ಟು 23 ಸ್ಥಾನಗಳ ಪೈಕಿ 23 ಸ್ಥಾನಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ಇನ್ನು ಕಳೆದ ಬಾರಿ 5 ಸ್ಥಾನ ಹೊಂದಿದ್ದ ಕಾಂಗ್ರೆಸ್‍ಪಕ್ಷ ಈಗ ಶೂನ್ಯ ಸಾಧನೆಗೈದಿದೆ. ಇನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಳೆ ನರಸೀಪುರದಲ್ಲಿ ಜೆಡಿಎಸ್ ಉಸ್ತುವಾರಿ ಹೊತ್ತಿದ್ದ ಭವಾನಿ ರೇವಣ್ಣ ಅವರ ಕೈ ಮತ್ತಷ್ಟು ಪ್ರಬಲವಾಗಿದ್ದು, ಜಿಲ್ಲೆಯ 5ರಲ್ಲಿ 4 ಕಡೆ ಜೆಡಿಎಸ್ ಜಯಗಳಿಸಿದೆ.

# ಮೈಸೂರು ಮೇಯರ್‍ಗೆ ಸೋಲು:
ಇನ್ನು ಮೈಸೂರು ಪಾಲಿಕೆ ಹಾಲಿ ಮೇಯರ್ ಭಾಗ್ಯವತಿ ಅವರು ಅನಿರೀಕ್ಷಿತವಾಗಿ ಸೋಲು ಕಂಡಿದ್ದು, ವಾರ್ಡ್ ಸಂಖ್ಯೆ 21ರಲ್ಲಿ ಬಿಜೆಪಿಯ ವೇದಾವತಿ ಭರ್ಜರಿ ಗೆಲುವು ಸಾಧಿಸಿದ್ದಾರೆ.  ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆ ಬಿಜೆಪಿ ತೆಕ್ಕೆಗೆ ಜಾರಿದ್ದು, ಕಾಂಗ್ರೆಸ್‍ಗೆ ಮುಖಭಂಗವಾಗಿದೆ. ಇಲ್ಲಿ ಒಟ್ಟು 23 ವಾರ್ಡ್‍ಗಳ ಪೈಕಿ ಬಿಜೆಪಿ 12ರಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 9 ವಾರ್ಡ್‍ಗಳಲ್ಲಿ ಜಯ ಸಾಧಿಸಿದೆ. ಲಿಂಗಸಗೂರು ಪುರಸಭೆ ಕಾಂಗ್ರೆಸ್ ಪಾಲಾಗಿದ್ದು, 23 ವಾಡ್‍ಗಳಲ್ಲಿ ಕಾಂಗ್ರೆಸ್ 13 , ಜೆಡಿಎಎಸ್ 4, ಬಿಜೆಪಿ 2ರಲ್ಲಿ ಗೆಲುವು ಸಾಧಿಸಿದೆ. ನಾಲ್ಕು ಮಂದಿ ಪಕ್ಷೇತರರು ಜಯಗಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಕ್ಷೇತ್ರವಾದ ಕೊರಟಗೆರೆಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಇಲ್ಲಿನ ಪಟ್ಟಣ ಪಂಚಾಯತ್ ಜೆಡಿಎಸ್ ತೆಕ್ಕೆಗೆ ಜಾರಿದೆ. 15 ವಾರ್ಡ್‍ಗಳ ಪೈಕಿ ಜೆಡಿಎಸ್ 8ರಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 5 ಮತ್ತು ಬಿಜೆಪಿ 1ರಲ್ಲಿ ಜಯ ಸಾಧಿಸಿದೆ. ಒಂದು ವಾರ್ಡ್‍ನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.  ಸಿಂಧನೂರು ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ರಚನೆಗೆ ಸಿದ್ಧವಾಗಿದ್ದು, ಒಟ್ಟು 31 ವಾರ್ಡ್ ಗಳ ಪೈಕಿ ಕಾಂಗ್ರೆಸ್ 20 ವಾರ್ಡ್ ಗಳಲ್ಲಿ ಜಯಭೇರಿ ಬಾರಿಸಿದೆ. ಜೆಡಿಎಸ್ 11 ವಾರ್ಡ್‍ಗಳಲ್ಲಿ ಜಯ ಸಾಧಿಸಿದ್ದು, ಬಿಜೆಪಿ ಶೂನ್ಯ ಸಾಧನೆಗೈದಿದೆ. ಇನ್ನು ಸಚಿವ ಯು.ಟಿ.ಖಾದರ್ ಅವರ ಕ್ಷೇತ್ರವಾದ ಉಳ್ಳಾಲ ನಗರ ಸಭೆ ಅತಂತ್ರವಾಗಿದ್ದು. ಇಲ್ಲಿನ ಒಟ್ಟು 26 ವಾರ್ಡ್‍ಗಳ ಪೈಕಿ ಕಾಂಗ್ರೆಸ್, 11, ಎಸ್‍ಡಿಪಿಐ 6, ಜೆಡಿಎಸ್ 4, ಬಿಜೆಪಿ 3 ಮತ್ತು ಐಎನ್ ಡಿ 2 ವಾರ್ಡ್‍ಗಳಲ್ಲಿ ಜಯ ಸಾಧಿಸಿದೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Facebook Comments

Sri Raghav

Admin