ಪೋಲೀಸರ ಮೇಲೆ ಲಾಂಗು ಬೀಸಿದ ದರೋಡೆಕೋರ ಕಾಲಿಗೆ ಫೈರಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Police-firing-Suhel

ಬೆಂಗಳೂರು, ಸೆ.3- ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಗ್ಗಿಸಲು ಪಣ ತೊಟ್ಟಿರುವ ಪೂರ್ವ ವಿಭಾಗದ ಪೊಲೀಸರು ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ದರೋಡೆ ಹಾಗೂ ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪಿಯೊಬ್ಬ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಡಿಜೆ ಹಳ್ಳಿಯಲ್ಲಿನ ಮೋದಿ ರಸ್ತೆಯ ನಿವಾಸಿ ಸಯ್ಯದ್ ಸುಹೇಲ್ ಅಲಿಯಾಸ್ ಸುಹೇಲ್ ಅಲಿಯಾಸ್ ಪಪ್ಪಾಯ್(22) ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ. ಕಾರ್ಯಾಚರಣೆ ವೇಳೆ ಈತನ ಇಬ್ಬರು ಸಹಚರರು ಪರಾರಿಯಾಗಿದ್ದು, ಇವರ ಪತ್ತೆ ಕಾರ್ಯ ಮುಂದುವರೆದಿದೆ.

ಇತ್ತೀಚಿನ ದಿನಗಳಲ್ಲಿ ಪೂರ್ವ ವಿಭಾಗದಲ್ಲಿ ದರೋಡೆ, ಸರಗಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಬಾಣಸವಾಡಿ ಠಾಣೆ ಇನ್‍ಸ್ಪೆಕ್ಟರ್ ಮುನಿಕೃಷ್ಣ ನೇತೃತ್ವದಲ್ಲಿ ಒಂದು ತಂಡ ಹಾಗೂ ಸಬ್‍’ಇನ್‍ಸ್ಪೆಕ್ಟರ್ ಶರತ್‍ಕುಮಾರ್ ಮತ್ತು ಹೆಡ್‍ಕಾನ್‍ಸ್ಟೇಬಲ್ ರಫಿಕ್ ಅವರನ್ನೊಳಗೊಂಡ ಮತ್ತೊಂದು ತಂಡ ರಚಿಸಲಾಗಿತ್ತು. ‘ಇನ್‍ಸ್ಪೆಕ್ಟರ್ ಮುನಿಕೃಷ್ಣ ಅವರ ನೇತೃತ್ವದ ತಂಡ ರಾತ್ರಿ ದರೋಡೆಕೋರರಿಗಾಗಿ ಶೋಧ ನಡೆಸುತ್ತಿದ್ದಾಗ ಆರೋಪಿ ಸಯ್ಯದ್ ಸುಹೇಲ್ ಮತ್ತು ಈತನ ಇಬ್ಬರು ಸಹಚರರು ಒಂದೇ ಬೈಕ್‍ನಲ್ಲಿ ಬಾಣಸವಾಡಿ ಮುಖ್ಯರಸ್ತೆಯ ಅಗ್ನಿಶಾಮಕ ಠಾಣೆ ಸಮೀಪ ಹೋಗುತ್ತಿದ್ದಾನೆಂಬ ಮಾಹಿತಿ ಲಭಿಸಿದೆ.

ಮಾಹಿತಿ ತಿಳಿದ ತಕ್ಷಣ ಸಬ್‍’ಇನ್‍ಸ್ಪೆಕ್ಟರ್ ಶರತ್‍ಕುಮಾರ್ ಹಾಗೂ ಹೆಡ್‍ಕಾನ್‍ಸ್ಟೆಬಲ್ ರಫಿಕ್ ಅವರನ್ನೊಳಗೊಂಡ ತಂಡವೂ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಗೆ ಮುಂದಾಗಿದೆ. ಈ ಎರಡೂ ತಂಡಗಳು ಆರೋಪಿಗಳನ್ನು ಬೆನ್ನಟ್ಟಿ ಆತನ ಬೈಕ್ ಅಡ್ಡಗಟ್ಟಿ ಹಿಡಿಯಲು ಮುಂದಾದಾಗ ಸಬ್‍’ಇನ್‍ಸ್ಪೆಕ್ಟರ್ ಶರತ್‍ಕುಮಾರ್ ಹಾಗೂ ಹೆಡ್‍ಕಾನ್‍ಸ್ಟೆಬಲ್ ರಫಿಕ್ ಮೇಲೆ ಲಾಂಗ್ ಬೀಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ತಕ್ಷಣ ಇನ್‍ಸ್ಪೆಕ್ಟರ್ ಮುನಿಕೃಷ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿ ಸುಹೇಲ್‍ಗೆ ಶರಣಾಗುವಂತೆ ಸೂಚಿಸಿದರೂ ಅವರ ಮಾತನ್ನು ಲೆಕ್ಕಿಸದೆ ಪೊಲೀಸರತ್ತ ಮತ್ತೆ ತಲ್ವಾರ್ ಬೀಸಿದ್ದಾನೆ.
ಆಗ ಆತ್ಮರಕ್ಷಣೆಗಾಗಿ ಇನ್‍ಸ್ಪೆಕ್ಟರ್ ಮುನಿಕೃಷ್ಣ ಅವರು ಹಾರಿಸಿದ ಎರಡು ಗುಂಡುಗಳು ಆರೋಪಿ ಸಯ್ಯದ್ ಸುಹೇಲ್‍ನ ಎರಡೂ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.

ಈ ವೇಳೆ ಆರೋಪಿಯನ್ನು ಸುತ್ತುವರಿದ ಪೊಲೀಸರು ಈತನನ್ನು ವಶಕ್ಕೆ ಪಡೆದು, ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಈತನ ಜೊತೆಗಿದ್ದ ಇಬ್ಬರು ಸಹಚರರು ಪರಾರಿಯಾಗಿದ್ದು ಅವರುಗಳ ಪತ್ತೆ ಕಾರ್ಯ ಮುಂದುವರೆದಿದೆ. ಆರೋಪಿ ಸಯ್ಯದ್ ಸುಹೇಲ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಸರಗಳ್ಳತನ ಸೇರಿದಂತೆ 13 ಪ್ರಕರಣಗಳು ದಾಖಲಾಗಿವೆ. ಈತ ಮುಂಜಾನೆ 3 ಗಂಟೆಯಿಂದ 6 ಗಂಟೆ ಹಾಗೂ ಸಂಜೆ 4 ಗಂಟೆಯಿಂದ 8ರ ನಡುವೆ ಹಿರಿಯ ನಾಗರಿಕರು ಹಾಗು ವಾಯುವಿಹಾರ ಮಾಡುವವರನ್ನು ಹಿಂಬಾಲಿಸಿ ಅವರನ್ನು ಬೆದರಿಸಿ ಹಣ, ಆಭರಣ ದೋಚುತ್ತಿದ್ದನು. ಹಣ ಕೊಡದಿದ್ದರೆ ಅವರ ಮೇಲೆ ಹಲ್ಲೆ ನಡೆಸಿ ಹಣ , ಆಭರಣ ಕಿತ್ತುಕೊಂಡು ಪರಾರಿಯಾಗುತ್ತಿದ್ದ. ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಗೆ ಹಲವಾರು ದೂರುಗಳು ಬಂದಿದ್ದರಿಂದ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡು ದರೋಡೆಕೋರನನ್ನು ಬಂಧಿಸಿದ್ದಾರೆ

Facebook Comments

Sri Raghav

Admin