ಬಿಬಿಎಂಪಿ ಮೇಯರ್ ಎಲೆಕ್ಷನ್‍ಗೆ ಮುಹೂರ್ತ ಫಿಕ್ಸ್, ಸೌಮ್ಯ-ಗಂಗಾಂಬಿಕೆ ನಡುವೆ ಬಿಗ್‍ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

BBMP-Election

ಬೆಂಗಳೂರು, ಸೆ.3- ಬಿಬಿಎಂಪಿಯ ಮುಂದಿನ ಮೇಯರ್ ಆಯ್ಕೆಗೆ ಸೆ.28ರಂದು ಚುನಾವಣೆ ನಡೆಸಲು ವೇದಿಕೆ ಸಿದ್ಧವಾಗಿದೆ.28ರ ಬೆಳಗ್ಗೆ 11 ಗಂಟೆಗೆ ಮೇಯರ್ ಚುನಾವಣೆ ನಡೆಸಲು ತೀರ್ಮಾನಿಸಲಾಗಿದ್ದು, ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ.ಕಳಸದ್ ಅವರು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ.  ಮೇಯರ್ ಸಂಪತ್‍ರಾಜ್ ಅವರ ಉತ್ತರಾಧಿಕಾರಿ ಆಯ್ಕೆಗೆ ಚುನಾವಣೆ ನಿಗದಿಯಾಗುತ್ತಿದ್ದಂತೆ ಮೇಯರ್ ಆಕಾಂಕ್ಷಿಗಳು ಸಕ್ರಿಯರಾಗಿದ್ದು, ತಮ್ಮ ಗಾಡ್‍ಫಾದರ್‍ಗಳ ಮೂಲಕ ನಗರದ ಪ್ರಥಮ ಪ್ರಜೆ ಸ್ಥಾನ ಅಲಂಕರಿಸಲು ಪೈಪೋಟಿಗೆ ಇಳಿದಿದ್ದಾರೆ.  ಮುಂದಿನ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿರುವುದರಿಂದ ಆ ವರ್ಗಕ್ಕೆ ಸೇರಿದ ಆಕಾಂಕ್ಷಿಗಳು ಪೈಪೋಟಿಗಿಳಿದಿದ್ದಾರೆ.

ಈ ಬಾರಿಯ ಮೇಯರ್ ಸ್ಥಾನ ಒಕ್ಕಲಿಗ ಸಮುದಾಯ ಇಲ್ಲವೆ ವೀರಶೈವ ಸಮುದಾಯವನ್ನು ಪ್ರತಿನಿಧಿಸುವ ವ್ಯಕ್ತಿಗೆ ಮೀಸಲಿಡಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ.   ಹೀಗಾಗಿ ಮೇಯರ್ ಸ್ಥಾನಕ್ಕೆ ಶಾಂತಿನಗರ ವಾರ್ಡ್ ಸದಸ್ಯೆ ಸೌಮ್ಯ ಶಿವಕುಮಾರ್ ಹಾಗೂ ಜಯನಗರ ವಾರ್ಡ್‍ನ ಗಂಗಾಂಬಿಕೆ ಮಲ್ಲಿಕಾರ್ಜುನ್ ನಡುವೆ ಬಿಗ್‍ಫೈಟ್ ಆರಂಭವಾಗಿದೆ.   ಒಕ್ಕಲಿಗ ಸಮುದಾಯದ ಸೌಮ್ಯ ಶಿವಕುಮಾರ್ ಅವರು ಈ ಹಿಂದೆ ಜಿ.ಪದ್ಮಾವತಿ ಮೇಯರ್ ಆಗಿ ಆಯ್ಕೆಯಾಗುವ ಸಂದರ್ಭದಲ್ಲೇ ಮೇಯರ್ ಸ್ಥಾನ ಅಲಂಕರಿಸಲು ಫೈಟ್ ನಡೆಸಿದ್ದರು. ಆದರೆ, ರಾಜಿ ಸಂಧಾನ ನಡೆಸಿದ ಕಾಂಗ್ರೆಸ್ ವರಿಷ್ಠರು ಮುಂದಿನ ಬಾರಿ ನಿಮಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು.

ಈ ಹಿಂದೆ ನೀಡಿದ್ದ ಬೇಡಿಕೆಯಂತೆ ಈ ಬಾರಿ ತನಗೆ ಮೇಯರ್ ಸ್ಥಾನ ನೀಡಬೇಕು ಎಂದು ಸೌಮ್ಯ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಪದ್ಮಾವತಿ ಗಂಗಾಧರ್‍ಗೌಡ ಅವರಿಗೆ ಮೇಯರ್ ಪಟ್ಟ ಸಿಕ್ಕ ನಂತರ ಇದುವರೆಗೂ ಆ ಸಮುದಾಯಕ್ಕೆ ಪ್ರಥಮ ಪ್ರಜೆ ಸ್ಥಾನ ಒಲಿದು ಬಂದಿಲ್ಲ. ಹೀಗಾಗಿ ಆ ಜನಾಂಗಕ್ಕೆ ಆಗಿರುವ ಅನ್ಯಾಯವನ್ನು ಈ ಬಾರಿ ಸರಿಪಡಿಸಿಕೊಳ್ಳಲು ಇದೊಂದು ಸದಾವಕಾಶ ಎನ್ನುವುದು ಸೌಮ್ಯ ಶಿವಕುಮಾರ್ ಅವರ ವಾದವಾಗಿದೆ.
ಆದರೆ, ಲಿಂಗಾಯತ ಸಮುದಾಯದ ಜಯನಗರ ವಾರ್ಡ್‍ನ ಗಂಗಾಂಬಿಕೆ ಅವರಿಗೆ ಮೇಯರ್ ಸ್ಥಾನ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ ಅವರು ಪಟ್ಟುಹಿಡಿದಿದ್ದಾರೆ.

40 ವರ್ಷಗಳ ಹಿಂದೆ ವೀರಶೈವ ಸಮುದಾಯದ ಪುಟ್ಟೇಗೌಡ ಅವರಿಗೆ ಮೇಯರ್ ಸ್ಥಾನ ಒಲಿದಿತ್ತು. ಅಲ್ಲಿಂದ ಇಲ್ಲಿವರೆಗೂ ಆ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಹೀಗಾಗಿ ಗಂಗಾಂಬಿಕೆ ಅವರನ್ನು ಮೇಯರ್ ಆಗಿ ಆಯ್ಕೆ ಮಾಡಿದರೆ ಬಿಜೆಪಿಯತ್ತ ಮುಖ ಮಾಡಿರುವ ವೀರಶೈವ ಸಮುದಾಯದ ಮತಗಳನ್ನು ಸೆಳೆಯಲು ಅನುಕೂಲವಾಗುತ್ತದೆ ಎನ್ನುವುದು ಕೆಲ ಶಾಸಕರ ಅಭಿಪ್ರಾಯವಾಗಿದೆ.

ಒಟ್ಟಾರೆ ಸೌಮ್ಯ ಶಿವಕುಮಾರ್ ಮತ್ತು ಗಂಗಾಂಬಿಕೆ ಅವರ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದ್ದು, ಈ ಇಬ್ಬರಲ್ಲಿ ಒಬ್ಬರು ಮೇಯರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತಪಟ್ಟಿದೆ. ಜೆಡಿಎಸ್ ಪಟ್ಟು: ಕಳೆದ ಮೂರು ಬಾರಿ ಕಾಂಗ್ರೆಸ್‍ನಿಂದ ಆಯ್ಕೆಯಾದ ಮೇಯರ್‍ಗೆ ಸಹಕಾರ ನೀಡಿರುವುದರಿಂದ ಈ ಬಾರಿಯ ಮೇಯರ್ ಸ್ಥಾನವನ್ನು ತಮಗೆ ಬಿಟ್ಟುಕೊಡಬೇಕು ಎಂದು ಮಿತ್ರಪಕ್ಷವಾದ ಜೆಡಿಎಸ್ ಒತ್ತಾಯಿಸಿದೆ. ಜೆಡಿಎಸ್‍ನ ಈ ಬೇಡಿಕೆಗೆ ಒಂದು ವೇಳೆ ಕಾಂಗ್ರೆಸ್ ಸಮ್ಮತಿಸಿದರೆ ಬಿಬಿಎಂಪಿ ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಇಲ್ಲವೆ ಮಾಜಿ ಉಪಮಹಾಪೌರರಾದ ಹೇಮಲತಾ ಗೋಪಾಲಯ್ಯ ಅವರಿಗೆ ಮೇಯರ್ ಸ್ಥಾನ ಒಲಿದು ಬರುವ ಸಾಧ್ಯತೆಗಳಿವೆ.

# ಮತದಾರರು:
198 ಸದಸ್ಯರು, 28 ಶಾಸಕರು ಹಾಗೂ ಮೇಲ್ಮನೆ ಸದಸ್ಯರು, 5 ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು ಸೇರಿದಂತೆ ಒಟ್ಟು 259 ಮಂದಿ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಬಹುದಾಗಿದೆ. ಮೇಯರ್ ಗದ್ದುಗೆ ಏರಬೇಕಾದರೆ 130 ಮತಗಳನ್ನು ಪಡೆಯುವುದು ಅನಿವಾರ್ಯವಾಗಿದೆ. ಬಲಾಬಲ: 198 ಸದಸ್ಯ ಬಲದ ಬಿಬಿಎಂಪಿಯಲ್ಲಿ ಬಿಜೆಪಿ 100, ಕಾಂಗ್ರೆಸ್ 77, ಜೆಡಿಎಸ್ 14 ಹಾಗೂ 7 ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್‍ನ 15 ಶಾಸಕರು, ಬಿಜೆಪಿಯ 11 ಮತ್ತು ಜೆಡಿಎಸ್‍ನ ಇಬ್ಬರು ಶಾಸಕರು ಮತ ಚಲಾಯಿಸಬಹುದಾಗಿದೆ. ಇದರೊಂದಿಗೆ ಐವರು ಲೋಕಸಭಾ ಸದಸ್ಯರು, 9 ಮಂದಿ ರಾಜ್ಯಸಭಾ ಸದಸ್ಯರು, 20 ಮಂದಿ ವಿಧಾನ ಪರಿಷತ್ ಸದಸ್ಯರು ಮತ ಚಲಾಯಿಸಬಹುದಾಗಿದೆ.

ಕಾಂಗ್ರೆಸ್‍ನ 77 ಸದಸ್ಯರು, 15 ಶಾಸಕರು, 7 ಪಕ್ಷೇತರ ಸದಸ್ಯರು, 6 ರಾಜ್ಯಸಭಾ ಸದಸ್ಯರು, ಇಬ್ಬರು ಸಂಸದರು ಹಾಗೂ 9 ವಿಧಾನ ಪರಿಷತ್ ಸದಸ್ಯರು ಸೇರಿದಂತೆ 116 ಮತದಾರರಿದ್ದಾರೆ. ಇದರೊಂದಿಗೆ ಜೆಡಿಎಸ್‍ನ 14 ಸದಸ್ಯರು, ಇಬ್ಬರು ಶಾಸಕರು, ಒಬ್ಬ ರಾಜ್ಯಸಭಾ ಸದಸ್ಯ ಸೇರಿದಂತೆ 17 ಮತದಾರರಿದ್ದಾರೆ. 116 ಸದಸ್ಯಬಲದ ಕಾಂಗ್ರೆಸ್‍ಗೆ ಜೆಡಿಎಸ್‍ನ 17 ಮಂದಿ ಸೇರಿದರೆ ಮೇಯರ್ ಸ್ಥಾನ ಗದ್ದುಗೆ ಹಿಡಿಯಲು ಅವಶ್ಯವಿರುವ 130ಕ್ಕಿಂತ ಮೂರು ಮತ ಹೆಚ್ಚಾಗಿ ಲಭಿಸಿದಂತಾಗುತ್ತದೆ.  ಬಿಜೆಪಿ ನೂರು ಸದಸ್ಯರನ್ನು ಹೊಂದಿದ್ದರೂ ಈ ಬಾರಿಯೂ ಅವರಿಗೆ ಮೇಯರ್ ಸ್ಥಾನ ಅಲಂಕರಿಸಲು ಸಾಧ್ಯವಾಗುವುದಿಲ್ಲ.

# ಬದಲಾಗುವುದೇ ಮೀಸಲು:
ಸೆ.28ಕ್ಕೆ ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದರೂ ಸರ್ಕಾರ ಮೀಸಲಾತಿ ಬದಲಾವಣೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೀಸಲು ಬದಲಾವಣೆ ಮಾಡುವ ಬಗೆಗಿನ ಸಾಧಕ-ಬಾಧಕಗಳನ್ನು ಮುನ್ಸಿಪಲ್ ಮತ್ತು ಅರ್ಬನ್ ಇಲಾಖೆ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ.

Facebook Comments

Sri Raghav

Admin