ಅಯ್ಯೋ ವಿಧಿಯೇ..! ಹಲವು ರಾಷ್ಟ್ರ ಪದಕ ಗೆದ್ದ ಪ್ಯಾರಾ-ಅಥ್ಲೆಟ್ ಈಗ ಭಿಕ್ಷುಕ..!

ಈ ಸುದ್ದಿಯನ್ನು ಶೇರ್ ಮಾಡಿ

Madya-PRadesh--01

ಭೋಪಾಲ್, ಸೆ.3-ನಮ್ಮ ರಾಜಕಾರಣಿಗಳು ನೀಡುವ ವಾಗ್ದಾನಗಳು ಭರವಸೆಯಾಗಿಯೇ ಉಳಿಯುತ್ತವೆ. ಅವು ಕಾರ್ಯರೂಪಕ್ಕೆ ಬರುವುದು ಕಷ್ಟ. ಇದಕ್ಕೊಂದು ಉದಾಹರಣೆ ಮಧ್ಯಪ್ರದೇಶದ ಪ್ರತಿಭಾವಂತ ವಿಕಲಚೇತನ ಕ್ರೀಡಾಪಟು ಮನಮೋಹನ್ ಸಿಂಗ್ ಲೋಧಿ. ಹಲವು ರಾಷ್ಟ್ರೀಯ ಮಟ್ಟದ ಪದಕಗಳನ್ನು ಗೆದ್ದಿರುವ ಈ ಪ್ಯಾರಾ-ಅಥ್ಲೇಟ್ ಈಗ ಭಿಕ್ಷುಕ…!

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ವಿಶೇಷ ಕ್ರೀಡಾಪಟುವಿಗೆ ಸಹಾಯ ಮಾಡುವುದಾಗಿ ಘೋಷಿಸಿ ಭರವಸೆಯ ಮಾತುಗಳನ್ನಾಡಿದ್ದರು. ಕಾಲಕ್ರಮೇಣ ವಾಗ್ದಾನವನ್ನು ಅವರು ಮರೆತುಬಿಟ್ಟರು. ಈವರೆಗೂ ಆ ಆಶ್ವಾಸನೆ ಈಡೇರಿಲ್ಲ. ತನ್ನ ಜೀವನೋಪಾಯಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ಯಾರಾ-ಸ್ಟ್ರಿಂಟರ್ ಮನಮೋಹನ್ ಸಿಂಗ್ ಲೋದಿ ರಸ್ತೆ ಬದಿಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ.

ಕ್ರೀಡಾ ಜರ್ಸಿ ಧರಿಸಿ, ತನಗೆ ಬಂದಿರುವ ಪದಕಗಳನ್ನು ಕೊರಳಿಗೆ ಹಾಕಿಕೊಂಡು ತನ್ನ ಪಕ್ಕದಲ್ಲಿ ಭಿಕ್ಷಾ ಪಾತ್ರೆ ಹಾಗೂ ಪುರಸ್ಕಾರ ಪ್ರಮಾಣಪತ್ರಗಳನ್ನು ಇಟ್ಟುಕೊಂಡು ದಾರಿಹೋಕರಲ್ಲಿ ಭಿಕ್ಷೆ ಬೇಡುತ್ತಿರುವ ಸಿಂಗ್ ಮುಖ್ಯಮಂತ್ರಿ ಸಹಾಯಹಸ್ತಕ್ಕಾಗಿ ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ಮಧ್ಯಪ್ರದೇಶದ ನರಸಿಂಗ್‍ಪುರ್ ಪ್ಯಾರಾ-ಅಥ್ಲೆಟ್ ರಾಷ್ಟ್ರಮಟ್ಟದಲ್ಲಿ ಹಲವಾರು ಮೆಡಲ್‍ಗಳನ್ನು ಗೆದ್ದಿದ್ದಾರೆ. ತಾವು ಪ್ರತಿ ಬಾರಿ ಪದಕ ಗೆದ್ದಾಗ ರಾಜ್ಯ ಸರ್ಕಾರವು ತಮಗೆ ಸರ್ಕಾರಿ ಉದ್ಯೋಗ ಮತ್ತು ಇತರ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸುವುದು ಮಾಮೂಲಿ. ಆದರೆ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಅವರು ನೀಡುವ ಭರವಸೆಗಳು ಹಾಗೆಯೇ ಉಳಿಯುತ್ತವೆ ಎಂದು ಲೋಧಿ ನೊಂದು ನುಡಿದಿದ್ದಾರೆ.

ನಾನು ನಾಲ್ಕು ಬಾರಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಅವರು ನೀಡಿದ ವಾಗ್ದಾನ ಈಡೇರಿಲ್ಲ. ನಾನು ಆರ್ಥಿಕವಾಗಿ ತುಂಬಾ ದುರ್ಬಲ. ಜೀವನ ನಡೆಸಲು ಕಷ್ಟವಾಗುತ್ತಿದೆ. ಅನ್ಯ ಮಾರ್ಗವಿಲ್ಲದೆ ನಾನು ಭಿಕ್ಷಾಟನೆ ಮಾರ್ಗ ಹಿಡಿದಿದ್ದೇನೆ. ಮುಖ್ಯಮಂತ್ರಿ ಅವರು ನನಗೆ ಸಹಾಯ ಮಾಡುವ ತನಕ ನಾನು ರಸ್ತೆಗಳಲ್ಲಿ ಭಿಕ್ಷೆ ಬೇಡುವುದನ್ನು ಮುಂದುವರಿಸುತ್ತೇನೆ ಎಂದು ಪ್ರತಿಭಾವಂತ ವಿಕಲಚೇತನ ಅಥ್ಲೆಟ್ ವಿಷಾದದಿಂದ ಹೇಳುತ್ತಾರೆ. ಮನಮೋಹನ್ ಸಿಂಗ್ ಲೋಧಿ ಬೀದಿಗೆ ಬಂದಿದ್ದರೂ ರಾಜ್ಯ ಸರ್ಕಾರ ಈವರೆಗೆ ಸಹಾಯ ಹಸ್ತ ಚಾಚಿಲ್ಲ. ಅದು ಯಾವಾಗ ಈಡೇರುತ್ತದೆ ಕಾದು ನೋಡಬೇಕು.

Facebook Comments

Sri Raghav

Admin