‘ಸಮ್ಮಿಶ್ರ ಸರ್ಕಾರದ ಹಣಬಲ ತೋಳ್ಬಲದ ನಡುವೆಯೂ ಬಿಜೆಪಿಗೆ ಉತ್ತಮ ಫಲಿತಾಂಶ’

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa

ಬೆಂಗಳೂರು,ಸೆ. 3- ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಹಣ ಬಲ ಮತ್ತು ತೋಳ್ಬಲದ ನಡುವೆಯೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಬಂದಿದೆ ಎಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಾರದಿದ್ದರೂ ಸಮ್ಮಿಶ್ರ ಸರ್ಕಾರದ ಎಲ್ಲ ಅಡೆತಡೆಗಳನ್ನು ಮೆಟ್ಟಿ ಬಿಜೆಪಿಯನ್ನು ಜನರು ಕೈ ಹಿಡಿದಿದ್ದಾರೆ. [ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ LIVE UPDATES ]

ಲೋಕಸಭೆ ಚುನಾವಣೆಗೆ ಇದು ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಹೇಳಿದರು.   ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹೆಚ್ಚಿನ ಸ್ಥಾನ ನಿರೀಕ್ಷೆ ಮಾಡಿದ್ದೆವು. ಅನೇಕ ಕಡೆ ನಮಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಆದರೂ ಜನ ನಮ್ಮನ್ನು ಕೈಬಿಟ್ಟಿಲ್ಲ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ ಎಂದರು. ಲೋಕಸಭೆ ಚುನಾವಣೆಗೂ ಈ ಚುನಾವಣೆಗೂ ಹೋಲಿಕೆ ಮಾಡುವುದು ಸರಿಯಲ್ಲ. ನಗರ ಸ್ಥಳೀಯ ಸಂಸ್ಥೆ ಚುನಾವಣೆ ಸ್ಥಳೀಯ ವಿಷಯಗಳ ಮೇಲೆ ನಡೆದಿರುತ್ತದೆ. ಜೆಡಿಎಸ್‍ನವರು ಮುಖ್ಯಮಂತ್ರಿಯಾಗಿದ್ದರೂ ಏಕೆ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ಮಹಾನಗರ ಪಾಲಿಕೆ ಚುನಾವಣೆಯಲ್ಲೂ ನಾವು ಉತ್ತಮ ಸಾಧನೆ ಮಾಡಿದ್ದೇವೆ. ಶಿವಮೊಗ್ಗದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಮೈಸೂರಿನಲ್ಲಿ ಮತ್ತು ತುಮಕೂರಿನಲ್ಲಿ ಅತಂತ್ರವಾಗಿದ್ದರೂ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಹಾಗೆ ನೋಡಿದರೆ ಕಾಂಗ್ರೆಸ್ ಜೆಡಿಎಸ್ ಎರಡೂ ಪಕ್ಷಗಳು ಹೆಚ್ಚಿನ ಸ್ಥಾನ ಗಳಿಸಬೇಕಿತ್ತು. ಜನತೆ ಈ ಅವಕಾಶವಾದಿ ದೋಸ್ತಿ ಸರ್ಕಾರವನ್ನು ಒಪ್ಪಿಕೊಂಡಿಲ್ಲ ಎಂದರು.

ಪಕ್ಷಕ್ಕೆ ಎಲ್ಲೆಲ್ಲಿ ಹಿನ್ನಡೆಯಾಗಿದೆ ಅಂತಹ ಕಡೆ ಸಂಘಟನೆಗೆ ಒತ್ತು ನೀಡಲಾಗುವುದು. ಲೋಕಸಭೆ ಚುನಾವಣೆಗೆ ಈಗಾಗಲೇ ಪಕ್ಷ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಯಾರೂ ಏನೇ ಹೇಳಿದರೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

Facebook Comments

Sri Raghav

Admin