ಹಖ್ಖಾನಿ ಜಾಲದ ಸಂಸ್ಥಾಪಕ, ತಾಲಿಬಾನ್ ಉಪ ನಾಯಕ ಜಲಾಲುದ್ಧೀನ್ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

alaluddeen

ಕಾಬೂಲ್, ಸೆ.4(ಪಿಟಿಐ)- ಆಫ್ಘಾನಿಸ್ಥಾನದ ಅತ್ಯಂತ ಕ್ರೂರ ಭಯೋತ್ಪಾದನೆ ಸಂಘಟನೆ ಹಖ್ಖಾನಿ ಜಾಲದ ಸಂಸ್ಥಾಪಕ ಹಾಗೂ ತಾಲಿಬಾನ್ ಉಗ್ರರ ಬಣದ ಉಪ ನಾಯಕ ಜಲಾಲುದ್ದೀನ್ ಹಖ್ಖಾನಿ ದೀರ್ಘ ಅನಾರೋಗ್ಯದಿಂದಾಗಿ ಸಾವಿಗೀಡಾಗಿದ್ದಾನೆ. ಈ ವಿಷಯವನ್ನು ತಾಲಿಬಾನ್ ಇಂದು ಅಧಿಕೃತವಾಗಿ ಪ್ರಕಟಿಸಿದೆ. ಅತ್ಯಂತ ನಿರ್ದಯ ಮತ್ತು ಭಯಾನಕ ಉಗ್ರಗಾಮಿ ಜಾಲದ ಹಖ್ಖಾನಿ ನೆಟ್‍ವರ್ಕ್‍ಗೆ ಜಲಾಲುದ್ದೀನ್ ಪುತ್ರ ಸಿರಾಜುದ್ದೀನ್ ಹಖ್ಖಾನಿ ಉತ್ತರಾಧಿಕಾರಿಯಾಗಿದ್ದಾನೆ.

ಹಖ್ಖಾನಿ ಅವರು ಈ ಶತಮಾನದ ಅತ್ಯಂತ ಪ್ರಬಲ ಜಿಹಾದಿ (ಧರ್ಮಯುದ್ಧ) ಹೋರಾಟಗಾರರಾಗಿದ್ದರು. ಅವರು ದೀರ್ಘ ಕಾಲದ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಹೇಳಿಕೆಯನ್ನು ಟ್ವೀಟರ್‍ನಲ್ಲಿ ಪೋಸ್ಟ್ ಮಾಡಲಾಗಿದೆ.  1980ರಲ್ಲಿ ಹಖ್ಖಾನಿ, ಅಮೆರಿಕ ಮತ್ತು ಪಾಕಿಸ್ತಾನದ ನೆರವಿನಿಂದ ಆಫ್ಘಾನಿಸ್ಥಾನದಲ್ಲಿ ರಷ್ಯಾ ಅಸ್ತಿತ್ವದ ವಿರುದ್ಧ ಮುಜಾಹಿದ್ದೀನ್ ಕಮಾಂಡರ್ ಆಗಿ ಹೋರಾಟದ ಮುಂಚೂಣಿಯಲ್ಲಿದ್ದ.

ಸಕ್ರಿಯ ಉಗ್ರಗಾಮಿ ಚಟುವಟಿಕೆ, ನಿರ್ದಯ ಆಕ್ರಮಣಗಳು ಹಾಗೂ ಹತ್ಯಾಕಾಂಡಗಳಿಂದ ಕುಪ್ರಸಿದ್ಧಿಯಾಗಿದ್ದ ಈತನನ್ನು ಹಖ್ಖಾನಿ ಉಗ್ರರು ಮತ್ತು ತಾಲಿಬಾನ್ ಬಂಡುಕೋರರು ಮಹಾ ಧೈರ್ಯಶಾಲಿ ನಾಯಕ ಎಂದು ಬಣ್ಣಿಸಿದ್ದರು. ಅರೆಬಿಕ್ ಭಾಷೆಯಲ್ಲಿ ಪಾಂಡಿತ್ಯ ಪಡೆದಿದ್ದ ಈತ ಅಲ್ ಖೈದಾ ನಾಯಕ ಒಸಮಾ ಬಿನ್ ಲಾಡೆನ್ ಸೇರಿದಂತೆ ಅರಬ್ ಜಿಹಾದಿ ಮುಖಂಡರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ.

ಆಫ್ಘಾನಿಸ್ಥಾನದಲ್ಲಿ ತಾಲಿಬಾನ್ ಬಂಡುಕೋರರ ಆಳ್ವಿಕೆಯಲ್ಲಿ ಈತ ಸಚಿವನಾಗಿಯೂ ಕಾರ್ಯನಿರ್ವಹಿಸಿದ್ದ. ಜಲಾಲುದ್ದೀನ್ ಹಖ್ಖಾನಿ ಎಲ್ಲಿ ಸತ್ತ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಇತ್ತೀಚಿನ ದಿನಗಳಲ್ಲಿ ಹಖ್ಖಾನಿ ಸಾವಿನ ಬಗ್ಗೆ ವದಂತಿ ಸುದ್ದಿಗಳು ಹಬ್ಬಿದ್ದವು. ಆದರೆ ಈಗ ಆತ ಮೃತಪಟ್ಟಿರುವುದನ್ನು ತಾಲಿಬಾನ್ ಖಚಿತಪಡಿಸಿದೆ.

ರಾಜಧಾನಿ ಕಾಬೂಲ್ ಸೇರಿದಂತೆ ಆಫ್ಘನ್‍ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿವಿಧ ದಾಳಿ ಮತ್ತು ಹಿಂಸಾಚಾರಗಳಲ್ಲಿ ಈತನ ನಾಯಕತ್ವದ ಗುಂಪಿನ ಕೈವಾಡ ಇತ್ತು. ಈತನಿಗೆ ತಾಲಿಬಾನ್ ಬಂಡುಕೋರರು, ಇಸ್ಲಾಮಿಕ್ ಸ್ಟೇಟ್ ಉಗ್ರರು ಮತ್ತು ಪಾಕಿಸ್ತಾನ ಸಹಕಾರ ನೀಡುತ್ತಿತ್ತು. ಹಖ್ಖಾನಿ ಜಾಲ ಸೇರಿದಂತೆ ಎಲ್ಲ ಭಯೋತ್ಪಾದಕ ಬಣಗಳನ್ನು ಮಟ್ಟ ಹಾಕುವಂತೆ ಆಗ್ರಹಿಸಿ ಅಮೆರಿಕ ಪಾಕಿಸ್ತಾನಕ್ಕೆ 300 ಡಾಲರ್‍ಗಳ ಸೇನಾ ನೆರವಿಗೆ ಕತ್ತರಿ ಹಾಕಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments

Sri Raghav

Admin