ಸಂಚಾರಿ ಬ್ಯಾಂಕಿಂಗ್ ವ್ಯವಸ್ಥೆ ಜಾರಿ ಸಂಬಂಧ ವ್ಯಾಪಾರಿಗಳೊಂದಿಗೆ ಸಚಿವ ಕಾಶಂಪೂರ್ ಸಂವಾದ

ಈ ಸುದ್ದಿಯನ್ನು ಶೇರ್ ಮಾಡಿ

Bandeppa-Kashyampur--01

ಬೆಂಗಳೂರು, ಸೆ.4-ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಿ ಸಂಚಾರಿ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಸಣ್ಣ ವ್ಯಾಪಾರಿಗಳೊಂದಿಗೆ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಸಂವಾದ ನಡೆಸಿದರು. ಯಶವಂತಪುರದ ಹಣ್ಣು ಮತ್ತು ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ ಸಚಿವರು ರಾಜ್ಯಸರ್ಕಾರದ ಮಹತ್ವದ ಯೋಜನೆಯಾದ ಬಡವರ ಬಂಧು ಪ್ರಾಯೋಗಿಕ ಯೋಜನೆಗೆ ಸಂಬಂಧಿಸಿದಂತೆ ಬೀದಿ ಬದಿ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದರು.

ಮೊಬೈಲ್ ಆ್ಯಪ್ ಆಧಾರಿತ ಧನ ಸಹಾಯ ನೀಡುವ ಯೋಜನೆಯೇ ಬಡವರ ಬಂಧು. ಸಣ್ಣಪುಟ್ಟ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಯೋಜನೆಯನ್ನು ರೂಪಿಸಲಾಗುತ್ತಿದೆ.  ಮೀಟರ್ ಬಡ್ಡಿ ದಂಧೆಯಿಂದ ಸಣ್ಣ-ಪುಟ್ಟ ವ್ಯಾಪಾರಸ್ಥರು ಶೋಷಣೆಗೆ ಒಳಗಾಗುತ್ತಿರುವುದನ್ನು ಮನಗಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರುವುದಾಗಿ ಪ್ರಕಟಿಸಿದ್ದರು.

ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯಾದ ಬಡವರ ಬಂಧು ಯೋಜನೆ ಜಾರಿಗೊಳಿಸುವ ಮುನ್ನ ಸಹಕಾರ ಸಚಿವರು ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಿ ಅಹವಾಲುಗಳನ್ನು ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಹಾಜರಿದ್ದರು. ಅಲ್ಲದೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಾಪಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಮೀಟರ್ ಬಡ್ಡಿ ದಂಧೆಗೆ ಒಳಗಾಗಿರುವ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್, ಸಮ್ಮಿಶ್ರ ಸರ್ಕಾರದಿಂದ ಬಡವರ ಬಂಧು ಯೋಜನೆ ಸಿದ್ಧಪಡಿಸಲಾಗಿದೆ. ಯೋಜನೆಯ ರೂಪುರೇಷೆಗಳನ್ನು ಈಗಾಗಲೇ ರೂಪಿಸಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆ ಅರಿಯಲು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.

ಬೀದಿ ಬದಿ ವ್ಯಾಪಾರಿಗಳು ಪ್ರತಿದಿನ ವ್ಯಾಪಾರಕ್ಕೆ ಅಗತ್ಯವಿರುವ ಹಣವನ್ನು ಬೆಳಗ್ಗೆ ಪಡೆದು ರಾತ್ರಿ ವಾಪಸ್ ಮಾಡಬೇಕಾಗುತ್ತದೆ. ಇದರಿಂದ ಖಾಸಗಿ ವ್ಯಕ್ತಿಗಳಿಂದ ಹೆಚ್ಚು ಬಡ್ಡಿಗೆ ಹಣ ಪಡೆದು ಕಿರುಕುಳಕ್ಕೆ ಒಳಗಾಗುವುದನ್ನು ತಪ್ಪಿಸಬೇಕಾಗಿದೆ. ಆ ಮೂಲಕ ಮೀಟರ್ ಬಡ್ಡಿ ದಂಧೆಗೂ ಕಡಿವಾಣ ಹಾಕುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.

Facebook Comments

Sri Raghav

Admin