ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕೈ ಕೊಡ್ತಾರಾ ಪಕ್ಷೇತರರು..!

ಈ ಸುದ್ದಿಯನ್ನು ಶೇರ್ ಮಾಡಿ

BBMP-1
ಬೆಂಗಳೂರು, ಸೆ.4- ಒಂದೆಡೆ ಮೇಯರ್ ಆಯ್ಕೆಗೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಪಕ್ಷಗಳು ಕಸರತ್ತು ಆರಂಭಿಸಿದರೆ, ಇನ್ನೊಂದೆಡೆ ಪಕ್ಷೇತರರು ತಮ್ಮ ಆಶ್ವಾಸನೆಗಳನ್ನು ಈಡೇರಿಸದಿದ್ದರೆ ಈ ಬಾರಿ ಬೇರೆಯದೇ ತೀರ್ಮಾನ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಬಿಬಿಎಂಪಿಯಲ್ಲಿ ಸುಭದ್ರ ಮತ್ತು ಸುಗಮ ಆಡಳಿತ ನೀಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಪಕ್ಷೇತರರಾದ ನಾವು ಏಳು ಜನ ಸಂಪೂರ್ಣ ಬೆಂಬಲ ನೀಡಿದ್ದೆವು. ಆದರೆ, ಬೆಂಬಲ ಪಡೆಯುವ ಸಂದರ್ಭದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಯಾವೊಬ್ಬ ಮೇಯರ್‍ಗಳೂ ಈಡೇರಿಸಿಲ್ಲ. ಹೀಗಾಗಿ ಪ್ರಸ್ತುತ ಮೇಯರ್ ಆಯ್ಕೆ ಸಂದರ್ಭದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಕುಳಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಪಕ್ಷೇತರ ಸದಸ್ಯ ಹಾಗೂ ಸಿಬ್ಬಂದಿ ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ್ (ಗುಂಡಣ್ಣ) ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಮಂಜುನಾಥರೆಡ್ಡಿ ಅವರು ಮೊದಲ ಬಾರಿಗೆ ಮೇಯರ್ ಆದಾಗ ಏಳು ಜನ ಪಕ್ಷೇತರರಿಗೆ ಅಧಿಕಾರ ನೀಡಿದ್ದರು. ನಂತರ ಎರಡನೆ ವರ್ಷ ಕೆಲವರಿಗೆ ಅಧಿಕಾರ ನೀಡಲಾಯಿತು. ಮತ್ತೆ ಅಧಿಕಾರ ಕೊಟ್ಟರಾದರೂ ಸ್ಥಾಯಿ ಸಮಿತಿಗಳ ಅಧಿಕಾರವನ್ನು ಮೊಟಕುಗೊಳಿಸಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪರಿಸ್ಥಿತಿ ನಿರ್ಮಾಣ ಮಾಡಲಾಯಿತು.  ಎಂಟು ಜನ ಪಕ್ಷೇತರರು ಆರಿಸಿ ಬಂದಿದ್ದೆವು. ಅದರಲ್ಲಿ ಮಮತಾ ಅವರು ಕಾಂಗ್ರೆಸ್‍ಗೆ ಸೇರ್ಪಡೆಯಾದರು. ಈಗ ನಾವು ಏಳು ಜನ ಒಗ್ಗಟ್ಟಾಗಿದ್ದು, ಏನು ಮಾಡಬೇಕೆಂಬುದನ್ನು ನಿರ್ಧರಿಸಲಿದ್ದೇವೆ. ನಮ್ಮ ಒಗ್ಗಟ್ಟನ್ನು ಯಾರೂ ಮುರಿಯಲು ಸಾಧ್ಯವಿಲ್ಲ.

ಉತ್ತಮ ಆಡಳಿತಕ್ಕಾಗಿ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ. ನಮಗೆ ಸಮಾನ ಅಧಿಕಾರ ನೀಡಬೇಕು. ಆದರೆ, ಈವರೆಗೆ ಯಾವೊಬ್ಬ ಮೇಯರ್ ಪಕ್ಷೇತರರಿಗೆ ವಿಶೇಷ ಅನುದಾನ ನೀಡಿಲ್ಲ. ಸಮಾನ ಅಧಿಕಾರ, ವಿಶೇಷ ಅನುದಾನ ನೀಡುವ ಆಶ್ವಾಸನೆ ಕೊಟ್ಟರೆ ಮಾತ್ರ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬೆಂಬಲ ನೀಡುತ್ತೇವೆ. ಇಲ್ಲದಿದ್ದರೆ ಪರ್ಯಾಯ ಚಿಂತನೆ ನಡೆಸುತ್ತೇವೆ ಎಂದು ಲಕ್ಷ್ಮಿನಾರಾಯಣ್ ತಿಳಿಸಿದ್ದಾರೆ.  ಬಿಬಿಎಂಪಿಯಲ್ಲಿ ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು, ನಗರ ವ್ಯಾಪ್ತಿಯ ಕಾಂಗ್ರೆಸ್ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮೇಯರ್ ಆಯ್ಕೆ ನಡೆದಿದೆ. ಸದಸ್ಯ ಬಲದಲ್ಲಿ ಕೊಂಚ ವ್ಯತ್ಯಾಸವಾದರೂ ಮೇಯರ್ ಆಯ್ಕೆಗೆ ಕುತ್ತು ಬರುವ ಸಾಧ್ಯತೆ ಇದೆ.

Facebook Comments