ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಮೇಯರ್ ಪಟ್ಟ ಯಾರಿಗೆ..?

ಈ ಸುದ್ದಿಯನ್ನು ಶೇರ್ ಮಾಡಿ

Mysuru-01

ಮೈಸೂರು, ಸೆ.4-ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಲಭಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಮೈಸೂರು ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದ್ದು, ಮೇಯರ್ ಸ್ಥಾನ ಯಾವ ಪಕ್ಷದ ಮಹಿಳೆಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿದೆ.  ಎರಡೂ ಪಕ್ಷಗಳಲ್ಲೂ ಮೇಯರ್ ಸ್ಥಾನಕ್ಕಾಗಿ ಲಾಬಿ ಆರಂಭವಾಗಿದ್ದು, ಮುಖಂಡರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರೂ ಸಹ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಇರುವ ಹಿನ್ನೆಲೆಯಲ್ಲಿ ಪಾಲಿಕೆಯಲ್ಲೂ ಸಹ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯಲು ಮುಂದಾಗಿವೆ.

ಇದುವರೆಗೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಪಾಲಿಕೆಯ ಅಧಿಕಾರ ನಡೆಸುತ್ತಿತ್ತು. ಆದರೆ ಇದೀಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವ ಹಿನ್ನೆಲೆಯಲ್ಲಿ ಮೈಸೂರು ಪಾಲಿಕೆಯಲ್ಲೂ ಸಹ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿ ಅಧಿಕಾರ ನಡೆಸಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಪಾಲಿಕೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಸರ್ಕಾರ ಮೇಯರ್-ಉಪಮೇಯರ್ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.

ಮೈಸೂರು ಮಹಾಪೌರ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಹಾಗೂ ಉಪಮೇಯರ್ ಸ್ಥಾನವನ್ನು ಬಿಸಿಎ ವರ್ಗಕ್ಕೆ ಮೀಸಲಿರಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮೇಯರ್ ಸ್ಥಾನಕ್ಕೆ ಎರಡೂ ಪಕ್ಷಗಳಲ್ಲಿ ಹಗ್ಗ-ಜಗ್ಗಾಟ ಆರಂಭಗೊಂಡಿದೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲೂ ಮೇಯರ್ ಆಕಾಂಕ್ಷಿಗಳಿದ್ದು, ಎರಡೂ ಪಕ್ಷದ ಮುಖಂಡರಿಗೆ ಸವಾಲಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಮೇಯರ್ ಆಕಾಂಕ್ಷಿಯಾಗಿ ಶಾಂತಕುಮಾರಿ, ಪುಟ್ಟಲಿಂಗಮ್ಮ, ಭುವನೇಶ್ವರಿ, ಶೋಭಾ, ಅಜೀರಾ ಸಲ್ಮಾ ಅವರುಗಳು ಪಟ್ಟಿಯಲ್ಲಿದ್ದಾರೆ.
ಹಾಗೆಯೇ ಜೆಡಿಎಸ್‍ನಲ್ಲಿ ಪ್ರೇಮಾ ಶಂಕರೇಗೌಡ, ಭಾಗ್ಯ ಮಹದೇಶ್, ಅಶ್ವಿನಿ ಅನಂತ, ಸವಿತಾ ಸುರೇಶ್, ತಸ್ಲೀಮ್ ಹಾಗೂ ರೇಷ್ಮಾಬಾನು ಅವರು ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಒಟ್ಟಾರೆ ಈ ಎರಡೂ ಪಕ್ಷಗಳಲ್ಲಿ ಯಾವ ಪಕ್ಷದ ಮಹಿಳೆ ಮೇಯರ್ ಸ್ಥಾನ ಅಲಂಕರಿಸಲಿದ್ದಾರೆ ಎಂಬುದು ಕಾದುನೋಡಬೇಕಿದೆ.

Facebook Comments

Sri Raghav

Admin