ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿ 7 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Accident--01

ತುಮಕೂರು/ದೇವನಹಳ್ಳಿ, ಸೆ.5- ಇಂದು ಬೆಳ್ಳಂಬೆಳಗ್ಗೆ ತುಮಕೂರು ಹಾಗೂ ದೇವನಹಳ್ಳಿಯಲ್ಲಿ ನಡೆದ ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿ, ನಾಲ್ಕು ಮಂದಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರ ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯ ತರೂರು ಗೇಟ್ ಬಳಿ  ಕೆಟ್ಟು ನಿಂತಿದ್ದ ಲಾರಿಯನ್ನು ತೆಗೆಯುತ್ತಿದ್ದ ಕ್ರೇನ್‍ಗೆ ಬೆಂಗಳೂರಿನಿಂದ ಶಿರಾ ಕಡೆಗೆ ಹೋಗುತ್ತಿದ್ದ ಮಾರುತಿ ವ್ಯಾನ್ ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ನಾಲ್ಕು ಜನರು ಮೃತಪಟ್ಟಿದ್ದಾರೆ.

ಕಾರು ಚಾಲಕ ವೆಂಕಟೇಶ್ (23), ಶಶಿಕುಮಾರ್ (22), ಹೇಮಂತ್ (24) ಹಾಗೂ (23) ಸಾವನ್ನಪ್ಪಿದವರು. ತರೂರು ಗೇಟ್ ಬಳಿ ಕೆಟ್ಟು ನಿಂತಿದ್ದ ಲಾರಿಯನ್ನು ಬೆಳಗ್ಗಿನ ಜಾವ 3 ಗಂಟೆಗೆ ಕ್ರೇನ್ ಮೂಲಕ ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಈ ವೇಳೆ ಬೆಂಗಳೂರಿನಿಂದ ಶಿರಾ ಕಡೆಗೆ ವೇಗವಾಗಿ ಬರುತ್ತಿದ್ದ ಓಮ್ನಿ ಕಾರು ನೇರವಾಗಿ ಕ್ರೇನ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಚಾಲಕ ಸಹಿತ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Accident--02

ಕಾರಿನಲ್ಲಿದ್ದ ಕಿತ್ತನಹಳ್ಳಿ ಗ್ರಾಮದ ಪ್ರಜ್ವಲ್ (22), ಅನಿಲ್ ಕುಮಾರ್ (29) ಹಾಗೂ ಮಲ್ಲಸಂದ್ರದ ಅಶೋಕ್ (25) ಗಂಭೀರ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆ ತರಲಾಗಿದೆ. ಘಟನೆಯ ವಿವರ:ರಾಷ್ಟ್ರೀಯ ಹೆದ್ದಾರಿ 48ರ ಶಿರಾ ತಾಲೂಕಿನ ಕಳ್ಳಂಬೆಳ್ಳ ರಸ್ತೆಯಲ್ಲಿ 10 ಚಕ್ರದ ಲಾರಿಯೊಂದು ಕೆಟ್ಟು ನಿಂತಿತ್ತು. ಲಾರಿಯ ಜಾಯಿಂಟ್ ತುಂಡಾಗಿದ್ದರಿಂದ ಅದನ್ನು ಅಲ್ಲಿಂದ ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗಿನ ಜಾವ 3.30ರ ವೇಳೆಗೆ ಕ್ರೇನ್ ತರಿಸಿ ಲಾರಿಯನ್ನು ತೆರವುಗೊಳಿಸಲಾಗುತ್ತಿತ್ತು. ಅದೇ ಸಮಯಕ್ಕೆ ಅತಿ ವೇಗವಾಗಿ ಬಂದ ಮಾರುತಿ ವ್ಯಾನ್ ಕ್ರೈನ್‍ಗೆ ಡಿಕ್ಕಿ ಹೊಡೆದಿದೆ. ವ್ಯಾನ್‍ನಲ್ಲಿ ಚಾಲಕ ವೆಂಕಟೇಶ್ ಸೇರಿ ಒಟ್ಟು 7 ಜನರಿದ್ದರು. ಅದರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರ ಮೂವರು ಗಂಭೀರ ಗಾಯಗೊಂಡಿದ್ದಾರೆ. ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ ಲಾರಿ ಚಾಲಕ ಹಾಸನ ಮೂಲದ ಸುನಿಲ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಘಟನೆ ನಡೆದ ವಿಷಯ ತಿಳಿದ ಕೂಡಲೇ ಶಿರಾ ಗ್ರಾಮಾಂತರ ವೃತ್ತ ನಿರೀಕ್ಷರಾದ ಸುದರ್ಶನ್ ಹಾಗು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಳುಗಳನ್ನು ಅಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ. ಅಪಘಾತದಿಂದಾಗಿ ಬೆಳಿಗ್ಗೆ 6 ಗಂಟೆಯವರೆಗೆ ಈ ಮಾರ್ಗದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯ ಗೋಪಿನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ ಶೋಭಾ ರಾಣಿ, ಡಿವೈಎಸ್ಪಿ ವೆಂಕಟೇಶ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

# ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳ ಸಾವು :
ಕಾರು ಮತ್ತು ಕ್ಯಾಂಟರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ ಬಳಿ ಇಂದು ಮುಂಜಾನೆ ಸಂಭವಿಸಿದೆ. ಕಿಮ್ಸ್ ವೈದ್ಯಕೀಯ ಕಾಲೇಜಿಲ್ಲಿ ಕಲಿಯುತ್ತಿದ್ದ ವಿಶಾಲ್, ಪ್ರಜ್ವಲ್, ಮತ್ತು ಭೂಷಣ್ ಮೃತಪಟ್ಟವರು. ದುರಂತದಲ್ಲಿ ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ವಿದ್ಯಾರ್ಥಿಗಳು ಬೆಂಗಳೂರು ಕಡೆಯಿಂದ ದೇವನಹಳ್ಳಿ ತಾಲೂಕು ವೆಂಕಟಗಿರಿಕೋಟೆಯ ಸ್ನೇಹಿತರ ಮನೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕ್ಯಾಂಟರ್‍ನಲ್ಲಿದ್ದ ಕಬ್ಬಿಣದ ಸರಳುಗಳಿಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜಾ್ಜಗಿದೆ.  ಘಟನೆ ನಂತರ ಕ್ಯಾಂಟರ್ ಬಿಟ್ಟು ಚಾಲಕ ಪರಾರಿಯಾಗಿದ್ದು, ಚಾಲಕನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಮತ್ತೊಂದೆಡೆ ವಿದ್ಯಾರ್ಥಿಗಳನ್ನು ಕಳೆದುಕೊಂಡ ಪೊೀಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಮಾನ ನಿಲ್ದಾಣ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin