9 ವರ್ಷದ ಬಾಲಕಿಯ ಗ್ಯಾಂಗ್‍ರೇಪ್ ಮಾಡಿ, ಕೊಡಲಿಯಿಂದ ಕೊಂದು, ಕಣ್ಣು ಕಿತ್ತ ಕ್ರೂರಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Gang-Rape--01

ಶ್ರೀನಗರ, ಸೆ.5- ಕಣಿವೆ ರಾಜ್ಯ ಕಾಶ್ಮೀರದ ಕತುವಾದಲ್ಲಿ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕಗ್ಗೊಲೆ ಮಾಡಿದ ಪ್ರಕರಣ ಅಂತಾರಾಷ್ಟ್ರೀಯ ಆಕ್ರೋಶಕ್ಕೆ ಕಾರಣವಾದ ಘಟನೆ ನೆನೆಪಿನಲ್ಲಿರುವಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಅದೇ ರೀತಿ ಮತ್ತೊಂದು ಅತ್ಯಂತ ಹೀನ ಕೃತ್ಯ ನಡೆದಿದೆ. ಮಲ ಸಹೋದರನೊಬ್ಬ ತನ್ನ ಸ್ನೇಹಿತರೊಂದಿಗೆ ಒಂಭತ್ತು ವರ್ಷಗಳ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕಣ್ಣುಗಳನ್ನು ಕಿತ್ತು, ಆಸಿಡ್‍ನಿಂದ ಶವವನ್ನು ಸುಟ್ಟು ಹಾಕಿ ಅರಣ್ಯ ಪ್ರದೇಶದಲ್ಲಿ ಎಸದಿರುವ ಹೇಯ ಕೃತ್ಯ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶದಲ್ಲಿ ನಡೆದಿದೆ. ಈ ಎಲ್ಲ ಘಟನೆಗೆ ಆಕೆಯ ಮಲತಾಯಿಯೇ ಕುಮ್ಮಕ್ಕು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬರ್ಬರ ಕೃತ್ಯದ ಸಂಬಂಧ ಬಾಲಕಿಯ ಮಲತಾಯಿ, 14 ವರ್ಷದ ಮಲ ಸಹೋದರ ಮತ್ತು ಆತನ ಮೂವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಉರಿ ಸೆಕ್ಟೆರ್‍ನ ಅರಣ್ಯ ಪ್ರದೇಶದಲ್ಲಿ ಕೊಳೆತು ಹೋಗಿದ್ದ ಬಾಲಕಿಯ ಶವ ಪತ್ತೆಯಾಗಿತ್ತು. ನಾವು ತಕ್ಷಣ ತನಿಖೆ ಕೈಗೊಂಡೆವು. ಇದಕ್ಕಾಗಿ ವಿಶೇಷ ತಂಡವನ್ನು ರಚಿಸಿ ತನಿಖೆ ತೀವ್ರಗೊಳಿಸಿದಾಗ ಕುಟುಂಬದೊಳಗಿನ ಮತ್ಸರ ಹಾಗೂ ಕ್ರೂರ ಪ್ರತೀಕಾರದ ಹೀನ ಕೃತ್ಯ ಬಯಲಾಯಿತು ಎಂದು ಬಾರಾಮುಲ್ಲಾದ ಹಿರಿಯ ಪೊಲೀಸ್ ಅಧಿಕಾರಿ ಮಿರ್ ಇಮ್ತಿಯಾಜ್ ಹುಸೇನ್ ಹೇಳಿದ್ದಾರೆ.

ತನ್ನ ಪತಿಯ ಎರಡನೆ ಪತ್ನಿ ಹಾಗೂ ಆಕೆಯ ಮಕ್ಕಳ ವಿರುದ್ಧ ಮೊದಲ ಪತ್ನಿ ವಿಷ ಕಾರುತ್ತಿದ್ದಳು. ಪತಿಯು ಆಕೆಯೊಂದಿಗೆ ಕಾಲ ಕಳೆಯುತ್ತಿದ್ದ. ಎಲ್ಲ ಮಕ್ಕಳಿಗಿಂತ ಒಂಭತ್ತು ವರ್ಷದ ಈ ಬಾಲಕಿ ತಂದೆಗೆ ತುಂಬಾ ಇಷ್ಟವಾಗಿದ್ದಳು. ಇದರಿಂದ ಮತ್ಸರಗೊಂಡ ಆಕೆ ತಮ್ಮ ಮಗ ಹಾಗೂ ಆತನ ಗೆಳೆಯರಿಗೆ ಕುಮ್ಮಕ್ಕು ನೀಡಿ ಈ ನೀಚ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ. ವಿಚಾರಣೆ ವೇಳೆ ಇದನ್ನು ಆಕೆ ಒಪ್ಪಿಕೊಂಡಿದ್ದಾಳೆ.

ಮಲ ಮಗಳನ್ನು ಕೊಂದು ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಆಕೆ ಬಾಲಕಿಯನ್ನು ಪುಸಲಾಯಿಸಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ಡಳು. ಅಲ್ಲಿ ಪೂರ್ವ ನಿಗದಿಯಂತೆ ಆಕೆಯ ಮಗ ಮತ್ತು ಮೂವರು ಗೆಳೆಯರು ಬಾಲಕಿಗೆ ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದರು. ಆಕೆಯ ಕಣ್ಣುಗಳನ್ನು ಕಿತ್ತು ಹಾಕಿ ಕೊಡಲಿಯಿಂದ ತಲೆಯ ಮಧ್ಯಭಾಗಕ್ಕೆ ಹೊಡೆದು ಕೊಂದರು.

ಬಳಿಕ ಒಬ್ಬಾತ ಮನೆಗೆ ಹಿಂದಿರುಗಿ ಆಸಿಡ್ ಬಾಟಲ್ ತಂದ. 19 ವರ್ಷದ ಯುವಕನೊಬ್ಬ ಚಾಕುವಿನಿಂದ ಬಾಲಕಿಯ ಕಣ್ಣುಗಳನ್ನು ಕಿತ್ತು ಹಾಕಿದ. ನಂತರ ದೇಹದ ಮೇಲೆ ಆಸಿಡ್ ಸುರಿದು ಬೆಂಕಿ ಹಚ್ಚಿ ಶವವನ್ನು ಅರ್ಧಂಬರ್ಧ ಸುಟ್ಟು ಹಾಕಿ, ಪೊದೆಯೊಳಗೆ ಎಸೆದರು. ಇಷ್ಟೆಲ್ಲ ಬರ್ಬರ ಕೃತ್ಯಗಳು ಮಲತಾಯಿಯ ಮುಂದೆಯೇ ನಡೆದಿದೆ ಎಂದು ಹುಸೇನ್ ತಿಳಿಸಿದ್ದಾರೆ. ಬಂಧಿತರಿಂದ ಕೊಡಲಿ, ಚಾಕು, ಆಸಿಡ್ ಖಾಲಿ ಬಾಟಲ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

Facebook Comments

Sri Raghav

Admin