ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ 1 ವರ್ಷ, ಕ್ಲೈಮ್ಯಾಕ್ಸ್ ತಲುಪಿದ ತನಿಖೆ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lanesh--01

ಬೆಂಗಳೂರು,ಸೆ.5- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಇಂದಿಗೆ ಒಂದು ವರ್ಷವಾಗಿದೆ. ಪ್ರಕರಣ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿರೋದು ತನಿಖಾ ತಂಡಕ್ಕೆ ಸಂತಸದ ವಿಷಯವಾಗಿದೆ. ರಾಜರಾಜೇಶ್ವರಿ ನಗರದಲ್ಲಿ ಸೆಪ್ಟೆಂಬರ್ 5ರಂದು ದುಷ್ಕರ್ಮಿಗಳು ಪತ್ರಕರ್ತೆ ಗೌರಿ ಲಂಕೇಶ್ ಮೇಲೆ ಗುಂಡಿಕ್ಕಿ ಪ್ರಾಣಪಕ್ಷಿ ಹಾರಿಸಿಬಿಟ್ಟಿದ್ದರು. ಇಡೀ ಚಿಂತಕರ ವಲಯವೇ ಈ ಪ್ರಕರಣದಿಂದ ಬೆಚ್ಚಿ ಬಿದ್ದಿತ್ತು. ಇದು ಅಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಬಹುದೊಡ್ಡ ಸವಾಲಿನ ಪ್ರಕರಣವೇ ಆಗಿತ್ತು.

ಹೀಗಾಗಿ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದ ಅಂದಿನ ಸರ್ಕಾರ ಸ್ಪೆಷಲ್ ಇನ್ವೆಷ್ಟಿಗೇಷನ್ ಟೀಮ್(ಎಸ್‍ಐಟಿ)ಯನ್ನು ಐಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ರಚನೆ ಮಾಡಿತು. ತನಿಖೆಯ ಉಸ್ತುವಾರಿಯನ್ನು ಆಗಿನ ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ಅವರಿಗೆ ವಹಿಸಲಾಗಿತ್ತು. ಬರೋಬ್ಬರಿ 150 ಮಂದಿ ಇದ್ದ ಖಾಕಿ ಪಡೆ ಗೌರಿ ಹಂತಕರಿಗೆ ಬಲೆ ಬೀಸಿದರು. ಆದರೆ ಹತ್ಯೆ ನಡೆದು 3 ತಿಂಗಳು ಕಳೆದರೂ ಆರೋಪಿಯ ಸುಳಿವು ಸಿಕ್ಕಿರಲಿಲ್ಲ.

ಹೀಗಾಗಿ ಮತ್ತೆ ಪ್ರತಿಭಟನೆಗಳು ನಡೆದವು. ಹಠಕ್ಕೆ ಬಿದ್ದ ಎಸ್‍ಐಟಿ ತಂಡ ಮಂಡ್ಯದಲ್ಲಿ ಬಲು ದೊಡ್ಡ ಬೇಟೆಯನ್ನಾಡಿತು. ಎಸ್‍ಐಟಿಯಿಂದ ಮೊದಲ ಬೇಟೆ ಮಂಡ್ಯದ ನವೀನ್ ಅಲಿಯಾಸ್ ಹೊಟ್ಟೆಮಂಜ. ಈತನ ಬಂಧನ ನಂತರ ತನಿಖೆ ಮತ್ತೆ ಚುರುಕಾಯ್ತು. ನವೀನ್ ಪಿಸ್ತೂಲ್ ಡೀಲಿಂಗ್ ಮಾಡ್ತಿದ್ದ. ಹೊಟ್ಟೆಮಂಜನಿಂದ ಎಸ್‍ಐಟಿ ಹೆಚ್ಚಿನ ಮಾಹಿತಿಯನ್ನ ಕಲೆಹಾಕಿತು.

ಈ ವೇಳೆ ಇವನ ವಿಚಾರಣೆಯ ನಂತರ ಮತ್ತೆ 4ಮಂದಿಯನ್ನ ಎಸ್‍ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಅದ್ರಲ್ಲಿ ಪ್ರವೀಣ್ ಎಂಬಾತ ಕೊಟ್ಟ ಮಾಹಿತಿ ಈ ಇಡೀ ಗೌರಿ ಕೇಸ್‍ನ ಡಿಟೈಲ್ಸ್ ಬಿಚ್ಚಿಟ್ಟಿತ್ತು. ಯಾಕೆಂದರೆ ಎಸ್‍ಐಟಿ ಹುಡುಕುತ್ತಿದ್ದ ಆ ವ್ಯಕ್ತಿ ಸಿಕ್ಕಿದ್ದ. ಅವನೇ ಪರುಶುರಾಮ್ ವಾಗ್ಮೋರೆ. ವಿಜಯಪುರದಲ್ಲಿ ಸಿಕ್ಕಿಬಿದ್ದ ಗೌರಿ ಹಂತಕ ವಾಗ್ಮೋರೆಯೇ ಪ್ರಕರಣ ಪ್ರಮುಖ ಆರೋಪಿಯಾಗಿದ್ದಾನೆಂದು ತಿಳಿದುಬಂದಿದೆ.  ಗೌರಿ ಹತ್ಯೆಯ ಮಾಸ್ಟರ್ ಮೈಡ್ ಅಮೋಲ್ ಕಾಳೆ ಅನ್ನೋದನ್ನ ಕೂಡ ವಾಗ್ಮೋರೆ ಒಪ್ಪಿಕೊಂಡಿದ್ದ. ಹೀಗಾಗಿ ಇನ್ನೂ ವೇಗವಾಗಿ ತನಿಖೆ ನಡೆಸಿದ ಎಸ್‍ಐಟಿ ಪ್ರಕರಣವನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದೆ. ಇಲ್ಲಿಯವರೆಗೆ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಇಷ್ಟೆ ಅಲ್ಲ, ಒಂದು ಪ್ರಕರಣ ಮೂರು ಕೇಸ್‍ಗಳಿಗೆ ಮರುಜೀವ ಕೂಡ ಕೊಟ್ಟಿದೆ. ಗೌರಿ ಪ್ರಕರಣವೇನೋ ಮುಗಿತಾ ಬಂದಿದೆ. ಎಫ್‍ಎಸ್‍ಎಲ್ ಸಹ ಗೌರಿ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಲ್ಲಿ ಓರ್ವ ಪ್ರಮುಖ ಆರೋಪಿಯ ಛಾಯೆ ಹೋಲಲ್ತಿದ್ದಾನೆ ಎಂದು ವರದಿ ನೀಡಿದೆಯಂತೆ. ಜೊತೆಗೆ ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಗಣೇಶ್ ಮಿಸ್ಕಿನ್ ಬಾಯ್ಬಿಟ್ಟಿರೋ ವಿಚಾರದ ಮೇಲೆ ಈ ಹಿಂದೆ ನಡೆದಿದ್ದ ಗೋವಿಂದ್ ಪನ್ಸಾರೆ, ನರೇಂದ್ರ ದಾಬೋಲ್ಕರ್, ಎಂ.ಎಂ.ಕಲ್ಬುರ್ಗಿ ಹತ್ಯೆಯಲ್ಲಿ ಇವರ ಕೈವಾಡವಿರುವುದು ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ತಂಡ ಈವರೆಗೂ 2000 ಮಂದಿಯನ್ನು ವಿಚಾರಣೆಗೊಳಪಡಿಸಿ ಕೆಲವು ಮಹತ್ವದ ಮಾಹಿತಿಯನ್ನು ಕಲೆ ಹಾಕಿದೆ.

Gauri-Lankesh

# ಪ್ರಮುಖ ಘಟನಾವಳಿಗಳು :
ಸೆ.05 (2017) ರಂದು ಗೌರಿ ಹತ್ಯೆ ಬಳಿಕ ಸಾಹಿತಿ, ಸಾಮಾಜಿಕ ಹೋರಾಟಗಾರು, ಪ್ರಗತಿಪರ ಸಂಘಟನೆಗಳು ಗೌರಿ ಲಂಕೇಶ್ ಬಳಗ ಹೆಸರಿನಲ್ಲಿ ನಾನು ಗೌರಿ ಎಂಬ ಪ್ರತಿರೋಧ ಸಮಾವೇಶವನ್ನು ಆಯೋಜಿಸಿತ್ತು. ಸಮಾವೇಶದಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಸ್ವತಂತ್ರ ಹೋರಾಟಗಾರ ಎಚ್.ಎಸ್ . ದೊರೆಸ್ವಾಮಿ ನೇತೃತ್ವದಲ್ಲಿ ನಿಯೋಗ ಭೇಟಿ ಮಾಡಿ ಮನವಿ ಮಾಡಿತ್ತು.

# ಹೊಟ್ಟೆಮಂಜ ಸೆರೆ:
ಫೆ.18 (2018)ರಂದು ಮೆಜೆಸ್ಟಿಕ್‍ನಲ್ಲಿ ಶಸ್ತ್ರಾಸ್ತ್ರ ಸಾಗಾಟದಲ್ಲಿ ಸಿಸಿಬಿಗೆ ಸೆರೆಸಿಕ್ಕ ಮದ್ದೂರಿನ ಕೆ.ಟಿ. ನವೀನ್‍ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಎಸ್‍ಐಟಿ ತಂಡ ಬಂಧಿಸಿತು. ಆರೋಪಿ ವಿರುದ್ಧ 650 ಪುಟಗಳ ಚಾರ್ಜ್‍ಶೀಟ್‍ನ್ನು 3ನೇ ಎಸಿಎಂಎಂ ನ್ಯಾಯಾಲಕ್ಕೆ ಸಲ್ಲಿಕೆ ಮಾಡಿತು.
ನವೀನ್ ಕುಮಾರ್ ಹತ್ಯೆಗೆ ಸಂಚು ರೂಪಿಸಿದ್ದ, ಬೆಂಗಳೂರು, ಬೆಳಗಾವಿಯಲ್ಲಿ ಈ ಹತ್ಯೆಗೆ ಯೋಜನೆ ರೂಪಿಸಲಾಗಿತ್ತು. ಈ ತಂಡ ಪ್ರೊ. ಭಗವಾನ್ ಹತ್ಯೆಗೂ ಸಂಚು ರೂಪಿಸಿದ್ದರು. ಈತ ಶೂಟರ್‍ಗಳಿಗೆ ಬುಲೆಟ್ ನೀಡಿದ್ದ ಎಂದು ಎಸ್‍ಐಟಿ ತಿಳಿಸಿತ್ತು. ಮಂಡ್ಯ ಮೂಲದ ನವೀನ್ ಹಿಂದೂ ಯುವ ಸೇನೆ ಅಧ್ಯಕ್ಷ ಅಮೋಲ್ ಕಾಳೆಗೆ ಜೀವಂತ ಗುಂಡುಗಳನ್ನು ಪೂರೈಸುತ್ತಿದ್ದ ಎಂಬ ಆರೋಪವನ್ನು ಹೊಂದಿದ್ದಾನೆ.

# ಅಮೋಲ್ ಕಾಳೆ ಬಂಧನ:
ಮೇ.15 ರಂದು ಉಡುಪಿಯಲ್ಲಿ ಸೆರೆಸಿಕ್ಕವನು ಪ್ರವೀಣ್ ಆಲಿಯಾಸ್ ಸುಜಿತ್ ನವೀನ್‍ನನ್ನು ಕಾಳೆಗೆ ಪರಿಚಯಿಸಿದವನು ಈತನೇ ಎಂಬುದನ್ನು ಎಸ್‍ಐಟಿ ದಾಖಲಿಸಿತು. ಪ್ರಕರಣವನ್ನು ಬಗೆದಷ್ಟು ಅಮೋಲ್‍ಕಾಳೆ, ಅಮಿತ್ ದೆಗ್ವೇಕರ್, ಮನೋಹರ್ ಯಡವೆ ಸಿಕ್ಕಿಬಿದ್ದರು. ಈ ಮೂವರು ಹಿಂದೂ ಸಂಘಟನೆಗಳ ಸಂಬಂಧ ಹೊಂದಿದ್ದರು ಎನ್ನಲಾಗಿತ್ತು.

# ವಾಘ್ಮೋರೆ ಪೊಲೀಸ್ ಬಲೆಗೆ:
ಮತ್ತೊಬ್ಬ ಆರೋಪಿ ಮನೋಹರ ವಿಚಾರಣೆ ವೇಳೆ ದೊರಕಿದ ಮಾಹಿತಿ ಮೇರೆಗೆ, ಎಸ್‍ಐಟಿ ತಂಡವೂ ವಿಜಯಪುರ ಮೂಲದ ಪರಶುರಾಮ್ ವಾಘ್ಮೋರೆಯನ್ನು ಜೂನ್ 7ರಂದು ಬಂಧಿಸಿತು. ಗೌರಿಯನ್ನು ತಾನೇ ಗುಂಡಿಟ್ಟು ಕೊಂದಿದ್ದ ಎಂದು ಈತ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದ ಎನ್ನಲಾಗಿದೆ. ಅಲ್ಲದೇ ಈತ ರಾಯಚೂರಿನ ಸಿಂದಗಿ ತಹಶೀಲ್ದಾರ್ ಕಚೇರಿ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ್ದ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ.

ತನಿಖೆಯನ್ನು ಮತ್ತಷ್ಟು ಭೇದಿಸಿದ ಪೊಲೀಸರು ಹುಬ್ಬಳ್ಳಿ ಮೂಲದ ಗಣೇಶ್ ಮಿಸ್ಕಿನ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದರು. ಈತ ಮೊದಲ ಬಾರಿಗೆ ಮಾಧ್ಯಮದವರಿಗೆ ಆರ್‍ಎಸ್‍ಎಸ್ ಹೆಸರು ತಿಳಿಸಿದ. ಅಗರಬತ್ತಿ ಕಾರ್ಖಾನೆ ನಡೆಸುತ್ತಿದ್ದ ಗಣೇಶ್, ಗೌರಿ ಹತ್ಯೆ ಪ್ರಕರಣದಲ್ಲಿ ಬೈಕ್ ಚಲಾಯಿಸಿದ್ದ ಎನ್ನಲಾಗಿದೆ. ಪರಶುರಾಮ್

# ವಾಘ್ಮೋರೆಯೇ ಕೊಲೆಗಾರ:
ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದ ಈ ಪ್ರಕರಣ ಕಡೆಗೂ ಒಂದು ಹಂತ ತಲುಪಿದೆ. ಗೌರಿ ಹತ್ಯೆಯಾಗಿ ಒಂದು ವರ್ಷಕ್ಕೆ ಒಂದು ದಿನ ಬಾಕಿ ಇರುವಂತೆಯೇ ಎಸ್‍ಐಟಿ ಆರೋಪಿಯನ್ನು ಪತ್ತೆ ಹಚ್ಚಿದೆ. ಎಫ್‍ಎಸ್‍ಎಲ್ ವರದಿಯಲ್ಲಿ ಪರಶುರಾಮ್ ವಾಘ್ಮೋರೆಯೇ ಗೌರಿ ಹತ್ಯೆ ನಡೆಸಿರುವುದು ಎಂಬುದು ಸಾಬೀತಾಗಿದೆ. ಸಿಸಿಟಿವಿ ಮರುಸೃಷ್ಠಿಯಲ್ಲಿ ದೃಶ್ಯವಾಳಿ ಸಾಮ್ಯತೆ ಹೊಂದಿದೆ. ಹೀಗಾಗಿ ವಾಘ್ಮೋರೆಯೇ ಪ್ರಮುಖ ಆರೋಪಿ ಎಂಬುದು ಎಸ್‍ಐಟಿ ಶಂಕಿಸಿದೆ.

Facebook Comments

Sri Raghav

Admin