ಎಂಜಿ ರಸ್ತೆಯಲ್ಲಿ ಚದರ ಅಡಿಗೆ ಕೇವಲ 20 ರೂ. ಬಾಡಿಗೆ..! ಬಿಬಿಎಂಪಿ ಗೋಲ್‍ಮಾಲ್

ಈ ಸುದ್ದಿಯನ್ನು ಶೇರ್ ಮಾಡಿ

MG-Road-Bengaluru--01

ಬೆಂಗಳೂರು, ಸೆ.5- ಪ್ರತಿ ಚದರ ಅಡಿಗೆ 20 ಸಾವಿರ ಬಾಡಿಗೆ ಇರುವ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಬಿಬಿಎಂಪಿ ಅಧಿಕಾರಿಗಳು ಕೇವಲ 20ರೂ.ಗೆ ಮಂಜೂರು ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಕರ್ಮಕಾಂಡದ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶಿಸಿದ್ದಾರೆ.

ಎಂಜಿ ರಸ್ತೆಯ ಬಹುಮಹಡಿ ಕಟ್ಟಡದಲ್ಲಿ ರುವ ಕ್ಯಾನೊಪಿ ಎಂಬ  ಹೊಟೇಲ್‍ಗೆ ಪಾಲಿಕೆಯಿಂದ ಗುತ್ತಿಗೆ ಕೊಟ್ಟಿದ್ದು, ಗುತ್ತಿಗೆ ಅವಧಿ ಮುಗಿದಿದ್ದು, ಇದರ ಮಾಲೀಕರು ಅವಧಿ ಮುಂದುವರಿಸುವಂತೆ ಪತ್ರ ಬರೆದಿದ್ದರು. ಬಾಡಿಗೆ ಕಡಿಮೆ ಎಂಬ ಕಾರಣಕ್ಕೆ ಕ್ಯಾನೊಪಿ ಹೊಟೇಲ್‍ಗೆ ಗುತ್ತಿಗೆಗೆ ಕೊಟ್ಟಿರಲಿಲ್ಲ. ಇದರಿಂದ ಮಾಲೀಕ ಕೋರ್ಟ್ ಮೊರೆ ಹೋಗಿದ್ದು, ಸುಮಾರು 12 ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಇಂತಹ ಸಂದರ್ಭದಲ್ಲಿ ಹೋಟೆಲ್‍ಗೆ ಅನುಮತಿ ಕೊಡುವುದು ಕಾನೂನು ಬಾಹಿರವಾಗುತ್ತದೆ. ಆದರೆ, ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿಯವರು ನಿರ್ಣಯ ಕೈಗೊಂಡು ಮೇಯರ್‍ರಿಂದ ಅನುಮೋದನೆ ಪಡೆದು ಇದೇ ಕ್ಯಾನೊಪಿ ಹೊಟೇಲ್‍ನವರಿಗೆ ಬಾಡಿಗೆಗೆ ಅನುಮೋದನೆ ಕೊಟ್ಟುಬಿಟ್ಟಿದ್ದಾರೆ.

ಎಂಜಿ ರಸ್ತೆ ನಗರದ ಅತ್ಯಂತ ಪ್ರಮುಖ ಭಾಗಗಳಲ್ಲಿ ಒಂದು. ಇಲ್ಲಿ ಪ್ರತಿ ಚದರ ಅಡಿಗೆ 20 ಸಾವಿರ ಬಾಡಿಗೆ ಇದೆ. ಆದರೆ, ಬಿಬಿಎಂಪಿಯವರು ಕ್ಯಾನೊಪಿ ಮಾಲೀಕರಿಗೆ ಚದರ ಅಡಿಗೆ ಕೇವಲ 20ರೂ.ನಂತೆ ಬಾಡಿಗೆ ನಿಗದಿಪಡಿಸಿಕೊಟ್ಟಿದ್ದಾರೆ. ಕೋರ್ಟ್‍ನಲ್ಲಿ ಪ್ರಕರಣವಿದ್ದರೂ ಬಾಡಿಗೆಗೆ ಅನುಮೋದನೆ ಕೊಟ್ಟಿರುವುದು ಕಾನೂನು ಬಾಹಿರವಾಗುತ್ತದೆ. ಅಲ್ಲದೆ, ಪಾಲಿಕೆಗೆ ಲಕ್ಷಾಂತರ ರೂ. ನಷ್ಟವಾಗುತ್ತದೆ ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಅಧ್ಯಕ್ಷ ಎಸ್.ಅಮರೇಶ್ ಹೇಳಿದ್ದಾರೆ.

ಕಾನೂನನ್ನು ಪರಿಗಣಿಸದೆ ಬಿಬಿಎಂಪಿ ಕ್ಯಾನೋಪಿಗೆ ಅನುಮೋದನೆ ಕೊಟ್ಟು ಪಾಲಿಕೆ ಮಾಡಿರುವ ಅನ್ಯಾಯವನ್ನು ಸರಿಪಡಿಸುವಂತೆ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಅಧ್ಯಕ್ಷ ಅಮರೇಶ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಎಚ್.ಡಿ.ಕುಮಾರಸ್ವಾಮಿ ಅವರು ಕ್ಯಾನೋಪಿ ಹೊಟೇಲ್‍ಗೆ ಬಿಡಿಗಾಸಿಗೆ ಕಟ್ಟಡ ಬಾಡಿಗೆ ಕೊಟ್ಟಿರುವ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶಿಸಿದ್ದಾರೆ.

Facebook Comments

Sri Raghav

Admin