ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ, ಹಣದ ಕೊರತೆ ಇಲ್ಲ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

kumaraswamy

ಬೆಂಗಳೂರು, ಸೆ.5- ರಾಜ್ಯ ಸರ್ಕಾರದಲ್ಲಿ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದ್ದು, ಸರ್ಕಾರದ ಕಾರ್ಯಕ್ರಮಗಳಿಗೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ಉನ್ನತ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಕಾಲೇಜುಗಳ ಅಧ್ಯಾಪಕರ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ, ರಾಜ್ಯಸರ್ಕಾರದ ಖಜಾನೆಯಲ್ಲಿ ನಾಲ್ಕು ಸಾವಿರ ಕೋಟಿ ಹಣವಿದೆ. ಸರ್ಕಾರದ ಆದಾಯ ಸಂಗ್ರಹ ಶೇ.33ರಷ್ಟು ಏರಿಕೆಯಾಗಿದೆ. ಆದಾಯ ಸೋರಿಕೆ ತಡಗಟ್ಟಿ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ರೈತರ ಸಾಲಮನ್ನಾ ಮಾಡಲು ಇತರೆ ಸರ್ಕಾರಿ ಕಾರ್ಯಕ್ರಮಗಳ ಅನುದಾನವನ್ನು ಬಳಕೆ ಮಾಡಿಕೊಂಡಿಲ್ಲ. ಯಾವುದೇ ಸರ್ಕಾರಿ ಕಾರ್ಯಕ್ರಮಕ್ಕೆ ರೈತರ ಸಾಲಮನ್ನಾದಿಂದ ಧಕ್ಕೆಯಾಗಿಲ್ಲ. ಒಟ್ಟಾರೆ ಸರ್ಕಾರಿ ಕಾರ್ಯಕ್ರಮಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹಣ ಬಳಸಿಲ್ಲ: ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ ಹಣವನ್ನು ಬೇರೆ ಉದ್ದೇಶಕ್ಕೆ ರಾಜ್ಯ ಸರ್ಕಾರ ಬಳಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ರಾಜ್ಯಸರ್ಕಾರದ ಆರೋಗ್ಯಕರ್ನಾಟಕ ಯೋಜನೆ ವಿಲೀನಮಾಡುವ ಪ್ರಸ್ತಾವ ಬಂದಿತ್ತು. ಆದರೆ, ವಿಲೀನ ಮಾಡುವುದರಿಂದ ನಮ್ಮ ರಾಜ್ಯದ ಜನರಿಗೆ ಯಾವ ರೀತಿ ಅನುಕೂಲವಾಗಲಿದೆ ಎಂಬ ಬಗ್ಗೆ ಮಾಹಿತಿ ಕೇಳಿದ್ದೇನೆ ಎಂದರು.

ಆರೋಗ್ಯ ಕರ್ನಾಟಕ ಯೋಜನೆಗೆ 800 ಕೋಟಿ ರೂ. ವಿನಿಯೋಗಿಸಲಾಗಿದೆ. ಆಯುಷ್ಮಾನ್ ಯೋಜನೆಯಿಂದ ರಾಜ್ಯಕ್ಕೆ 200 ಕೋಟಿ ರೂ. ಮಾತ್ರ ದೊರೆಯಲಿದೆ. ಆದರೆ, ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಲೋಪಗಳಿವೆ. ಅಲ್ಲದೆ, ಪ್ರಚಾರಕ್ಕಾಗಿ ಕೆಲವೊಂದು ಯೋಜನೆಗಳಿಗೆ ಆಕರ್ಷಕವಾದ ಹೆಸರುಗಳನ್ನು ಇಡಲಾಗಿದೆ ಎಂದು ಟೀಕಿಸಿದರು.

ಶಿಕ್ಷಕರ ಜವಾಬ್ದಾರಿ ದೊಡ್ಡದು:
ಸಮಾಜದ ಮುಖ್ಯವಾಹಿನಿಗೆ ಯುವ ಸಮುದಾಯವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಸ್ಥಾನದಲ್ಲಿ ಶಿಕ್ಷಕರಿದ್ದಾರೆ. ಸಮಾಜಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ರಾಜ್ಯದ ಆಯವ್ಯಯದ ಶೇ.12ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುತ್ತಿದೆ. ಆದರೂ ಶಿಕ್ಷಕರ ನಿರೀಕ್ಷೆಗೆ ಇದು ಕಡಿಮೆಯಾಗಿದೆ. ಶಿಕ್ಷಕರ ಕ್ಷೇತ್ರದಲ್ಲಿ ಅರೆಕಾಲಿಕ ಉಪನ್ಯಾಸಕರು, ಹೊರಗುತ್ತಿಗೆ ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಲಾಗುವುದು ಎಂದರು.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯೇ ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಿದೆ. ಕುಲಪತಿಗಳು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಶಿಕ್ಷಣ ನೀಡಲು ನೀಲನಕ್ಷೆ ಸಿದ್ಧಪಡಿಸಿದರೆ ಸರ್ಕಾರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದೆ. ಅಲ್ಲದೆ, ಸೂಕ್ತ ಸಹಕಾರ ನೀಡಲಿದೆ ಎಂದರು.

ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರು ಹಾಗೂ ಮೂಲ ಸೌಕರ್ಯದ ಕೊರತೆ ಇದ್ದು, ಮುಂದಿನ ಆರು ತಿಂಗಳಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿದೆ. ಸರ್ಕಾರಿ ಶಾಲೆಗಳಲ್ಲೂ ಕೂಡ ಖಾಸಗಿ ಶಾಲೆಗಳ ಸರಿಸಮನಾದ ಮೂಲ ಸೌಲಭ್ಯ, ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದರು.

ಕೆಲವು ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಕಳೆದ ಆರು ತಿಂಗಳಿನಿಂದ ಹಣ ಬಿಡುಗಡೆಯಾಗದೆ 12 ಸಾವಿರ ಶಿಕ್ಷಕರಿಗೆ ವೇತನ ಆಗಿಲ್ಲ ಎಂದು ವರದಿಯಾಗಿದೆ. ತಾಂತ್ರಿಕ ಕಾರಣದಿಂದ ವೇತನ ಬಿಡುಗಡೆಯಾಗದಿರುವುದನ್ನು ಸರಿಪಡಿಸಲಾಗುವುದು ಎಂದರು.

ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ದಾಪುಗಾಲು ಹಾಕಬೇಕಿದ್ದು, ಅದಕ್ಕೆ ಪೂರಕವಾದ ಸಲಹೆ ನೀಡಿ ಎಂದು ಮುಖ್ಯಮಂತ್ರಿಗಳು ಸಲಹೆ ಕೇಳಿದರು. ಬ್ಯಾಂಕ್‍ಗಳಿಗೆ 30 ಸಾವಿರ ಕೋಟಿ ರೂ. ಪಾವತಿ: ರಾಜ್ಯದ ಎಲ್ಲ ಭಾಗಗಳೂ ಒಂದೇ ಆಗಿದ್ದು, ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಮುಂದಿನ ಆಗಸ್ಟ್‍ನೊಳಗೆ 30 ಸಾವಿರ ಕೋಟಿ ರೂ. ಪಾವತಿಸಲಾಗುವುದು ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, 3 ಸಾವಿರ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು, 393 ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ರಾಜ್ಯ ಸರ್ಕಾರ ಅಗತ್ಯ ಮೂಲಸೌಲಭ್ಯ ನೀಡಲು ಸಿದ್ಧವಿದ್ದು, ಉತ್ತಮ ಶಿಕ್ಷಣ ನೀಡಬೇಕೆಂದು ಹೇಳಿದರು. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಸಚಿವರು ಕಿವಿಮಾತು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ರಾಮಕೃಷ್ಣ ಮಾತನಾಡಿ, ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ರದ್ದುಪಡಿಸುತ್ತಿರುವುದನ್ನು ವಿರೋಧಿಸಬೇಕು. ಏಕರೂಪದ ನೀಟ್ ಪರೀಕ್ಷೆಯಿಂದ ರಾಜ್ಯದ ಶೇ.50ರಷ್ಟು ಸೀಟುಗಳು ಬೇರೆ ರಾಜ್ಯದ ಪಾಲಾಗುತ್ತಿವೆ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ಕೊಡಲಿ ಪೆಟ್ಟು ನೀಡಿದಂತಾಗಿದೆ. ಇವೆರಡನ್ನೂ ಪ್ರತಿಭಟಿಸಬೇಕು ಎಂದರು.

ಸಮಾರಂಭದಲ್ಲಿ ಪರಿಷತ್ ಸದಸ್ಯರಾದ ಅ.ದೇವೇಗೌಡ, ಪುಟ್ಟಣ್ಣ, ಮೇಯರ್ ಸಂಪತ್‍ರಾಜ್, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾದೇವಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಡಾ.ಮಂಜುಳಾ, ಬೆಂಗಳೂರು ವಿವಿ ಉಪಕುಲಪತಿ ಡಾ.ವೇಣುಗೋಪಾಲ್, ಬೆಂಗಳೂರು ಕೇಂದ್ರ ವಿವಿ ಉಪಕುಲಪತಿ ಜಾಫೆಟ್, ಬೆಂಗಳೂರು ಉತ್ತರ ವಿವಿ ಕುಲಪತಿ ಕೆಂಪರಾಜು, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ತಳವಾರ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin