ಪಡಿತರ ವಿತರಕರಿಂದ ಸೆ.25ರಂದು ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ಜೈಲ್ ಭರೋ ಚಳವಳಿ

ಈ ಸುದ್ದಿಯನ್ನು ಶೇರ್ ಮಾಡಿ

Protest--01

ಬೆಂಗಳೂರು, ಸೆ.5- ಅಖಿಲ ಭಾರತ ಪಡಿತರ ವಿತರಕರ ಒಕ್ಕೂಟದ ವತಿಯಿಂದ ಸೆ.25ರಂದು ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ದೆಹಲಿ ಚಲೋ ಜೈಲ್ ಬರೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಚಂಡೀಗಢ ಹಾಗೂ ಪಾಂಡಿಚೇರಿಯಲ್ಲಿ ಪಡಿತರ ಚೀಟಿದಾರರಿಗೆ ನೇರ ಹಣಕಾಸು ಜಾರಿಯಾಗಿದ್ದು, ಈ ಯೋಜನೆಯಿಂದ ಎರಡು ರಾಜ್ಯಗಳಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ಇದನ್ನು ವಿರೋದಿಸಿ ಕಳೆದ ವರ್ಷದಲ್ಲಿ ದೇಶದ ಸುಮಾರು 5.5 ಲಕ್ಷ ಜನ ಪಡಿತರ ವಿತರಕರು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು ಎಂದು ಅವರು ಹೇಳಿದರು. ಆದರೂ ಸಹ ಕೇಂದ್ರ ಸರ್ಕಾರ ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲು ಹೊರಟಿರುವುದರಿಂದ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಸಹಾಯಕರು, ಸೀಮೆಎಣ್ಣೆ ವಿತರಕರು, ವಿಎಸ್‍ಎಸ್‍ಎಸ್‍ಎನ್ ಕಾರ್ಯದರ್ಶಿಗಳು ಈ ಚಳವಳಿ ನಡೆಸಲಿದ್ದಾರೆ ಎಂದು ತಿಳಿಸಿದರು.

ಕಡ್ಡಾಯವಾಗಿ ಎಲ್ಲರಿಗೂ ಪಡಿತರ ಕೊಡಬೇಕು. ಪಿಡಿಎಸ್ ಮೂಲಕ ಸೀಮೆಎಣ್ಣೆ ವಿತರಿಸಬೇಕು. ಪ್ರತಿ ಕ್ವಿಂಟಾಲ್‍ಗೆ 250ರೂ. ಕಮಿಷನ್ ನಿಗದಿ ಮಾಡಬೇಕು ಅಥವಾ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಮಿಷನ್ ತಿಂಗಳಿಗೆ 30 ಸಾವಿರ ಮಾಡಬೇಕು. ದೇಶಾದ್ಯಂತ ವಿತರಣೆ ಹಾಗೂ ಕಮಿಷನ್ ಒಂದೇ ಮಾದರಿಯಲ್ಲಿರಬೇಕು. ಚಂಡೀಗಢ ಮತ್ತು ಪಾಂಡಿಚೇರಿಯಲ್ಲಿರುವ ನೇರ ಸೌಲಭ್ಯ ವರ್ಗಾವಣೆ ಯೋಜನೆಯನ್ನು ಕೈ ಬಿಡುವುದು, ಅಲ್ಲಿಯೂ ಸಹ ಪಿಡಿಎಸ್ ಯೋಜನೆ ಜಾರಿಗೊಳಿಸುವಂತೆ ಚಳವಳಿಯಲ್ಲಿ ಒತ್ತಾಯಿಸುವುದಾಗಿ ಹೇಳಿದರು.  ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಶಿವಪ್ರಸಾದ್, ಖಜಾಂಚಿ ಸಿ.ಎನ್.ನಟರಾಜ್, ಮುಖಂಡರಾದ ಗುಂಡಯ್ಯ, ಡಿ.ತಾಯಣ್ಣ, ಕೆ.ಎಲ್.ರಾಮಚಂದ್ರು ಉಪಸ್ಥಿತರಿದ್ದರು.

Facebook Comments