ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕದ ನಿರ್ಲಕ್ಷ್ಯ : ಜಗದೀಶ್ ಶೆಟ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

Jagadish-Shettar-01
ಹುಬ್ಬಳ್ಳಿ, ಸೆ.5- ರಾಜ್ಯ ಸಮ್ಮಿಶ್ರ ಸರ್ಕಾರ ಹುಬ್ಬಳ್ಳಿ- ಧಾರವಾಡದ ಅಭಿವೃದ್ಧಿಯನ್ನು ಕಡೆಗಣಿಸಿ, ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಹುಬ್ಬಳ್ಳಿಯ ಮಿನಿ ವಿಧಾನಸೌಧದ ಎದುರು ಬಿಜೆಪಿ ಹಮ್ಮಿಕೊಂಡಿದ್ದ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಸಿಆರ್‍ಎಫ್ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಂಡಿಲ್ಲ. ಹು-ಧಾರವಾಡ ಮಹಾನಗರ ಪಾಲಿಕೆಯ ಬಾಕಿಯಿರುವ ಪಿಂಚಣಿ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಉದ್ದೇಶಪೂರ್ವಕವಾಗಿ ಅವಳಿ ನಗರದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆ. ಎಚ್.ಡಿ. ರೇವಣ್ಣ ಮತ್ತು ಕುಮಾರಸ್ವಾಮಿ ಸುಳ್ಳರ ಚಕ್ರವರ್ತಿಗಳು. ಆಡಳಿತ ನಡೆಸುವುದನ್ನು ಬಿಟ್ಟು ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ ಎಂದು ಹರಿಹಾಯ್ದರು. ದೇವಸ್ಥಾನ ಭೇಟಿ ಕಾರ್ಯಕ್ರಮದಲ್ಲೂ ತಾರತಮ್ಯವೆಸಗಿದ್ದಾರೆ.

ಉತ್ತರ ಕರ್ನಾಟಕದ ಯಾವುದೇ ದೇವಸ್ಥಾನಗಳಿಗೆ ಮುಖ್ಯಮಂತ್ರಿ ಭೇಟಿ ಕೊಟ್ಟಿಲ್ಲ ಎಂದು ಆರೋಪಿಸಿದ ಅವರು, ಉತ್ತರ ಕರ್ನಾಟಕದ ಜನರಿಗೆ ಮುಖ ತೋರಿಸಲು ಮುಖ್ಯಮಂತ್ರಿಗೆ ಆಗುತ್ತಿಲ್ಲ . ಇದರಿಂದಾಗಿ ಹುಬ್ಬಳ್ಳಿಯಲ್ಲಿದ್ದ ಮನೆಯನ್ನು ಖಾಲಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಕೆಶಿಪ್ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರಿಸಿ ರುವುದು ಖಂಡನೀಯ ಎಂದು ಹೇಳಿದ ಅವರು, ಪೆಟ್ರೋಲï, ಡೀಸೆಲ್ ಬೆಲೆ ಏರಿಕೆ ಮುಂದಿಟ್ಟು ಬಸ್ ಪ್ರಯಾಣ ದರ ಏರಿಸುವುದು ಸರಿಯಲ್ಲ.  ಮುಖ್ಯಮಂತ್ರಿಗಳು ಪ್ರಧಾನಿಯವರನ್ನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಬೇಕು.

ಇಂಧನ ದರ ಏರಿಕೆಯಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನರೇಂದ್ರ ಮೋದಿಯವರ ಗಮನದಲ್ಲಿದೆ. ಬೆಲೆ ಇಳಿಕೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎನ್ನುವ ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಮಾಜಿ ಮೇಯರ್ ವೀರಣ್ಣ ಸವಡಿ ಮತ್ತಿತರರು ಪಾಲ್ಗೊಂಡಿದ್ದರು.

Facebook Comments

Sri Raghav

Admin