ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿ, 6 ಲಕ್ಷ ಮೌಲ್ಯದ ಆಭರಣ ದೋಚಿದ ಚಾಲಾಕಿ ಕಳ್ಳಿಯರು..!

ಈ ಸುದ್ದಿಯನ್ನು ಶೇರ್ ಮಾಡಿ

Women
ಚಿಕ್ಕಮಗಳೂರು, ಸೆ.5- ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿದ ಇಬ್ಬರು ಮಹಿಳೆಯರು ಪ್ರಯಾಣಿಕರೊಬ್ಬರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿರುವ ಘಟನೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸಾ ಪಟ್ಟಣ ನಿವಾಸಿ ಮರಗದಮ್ಮ ಚಿನ್ನಾಭರಣ ಕಳೆದುಕೊಂಡಿರುವ ಮಹಿಳೆ. ಸಂಬಂಧಿಕರ ಮದುವೆ ಎಂದು ತಮಿಳುನಾಡಿಗೆ ಹೋಗಿದ್ದ ಈ ಮಹಿಳೆ ಮದುವೆ ಮುಗಿಸಿಕೊಂಡು ಮೈಸೂರಿಗೆ ಬಂದು ಅಲ್ಲಿಂದ ರಾತ್ರಿ ಚಿಕ್ಕಮಗಳೂರು ಬಸ್ ಹತ್ತಿ ಬೆಳಗ್ಗೆ ಇಲ್ಲಿಗೆ ಬಂದಿದ್ದಾರೆ.

ಇಲ್ಲಿಂದ ತಮ್ಮ ಊರಾದ ಕಳಸಾ ಪಟ್ಟಣಕ್ಕೆ ತೆರಳಲು ಬೆಳಗ್ಗೆ 9 ಗಂಟೆ ಸಮಯದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಹೊರನಾಡು ಬಸ್ ಹತ್ತಿ ಟಿಕೆಟ್ ಪಡೆದುಕೊಂಡಿದ್ದಾರೆ.  ಬಸ್ ಇನ್ನೂ ಹೊರಟಿರಲಿಲ್ಲ. ಈ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಪ್ರಯಾಣಿಕರ ಸೋಗಿನಲ್ಲಿ ಬಂದು ಮರುಗದಮ್ಮ ಅವರ ಪಕ್ಕ ಕುಳಿತು ಮಾತನಾಡಿಸಿದ್ದಾರೆ. ಒಬ್ಬರು ಮಾತನಾಡಿಸುತ್ತಿದ್ದಂತೆ ಇನ್ನೊಬ್ಬರು ಇವರ ವ್ಯಾನಿಟಿ ಬ್ಯಾಗ್‍ನ ಜಿಪ್ ತೆಗೆದು ಅದರಲ್ಲಿದ್ದ 225 ಗ್ರಾಂ ತೂಕದ ಸುಮಾರು 6 ಲಕ್ಷ ಮೌಲ್ಯದ ಆಭರಣಗಳನ್ನು ಕಳ್ಳತನ ಮಾಡಿ ಕೆಲ ನಿಮಿಷಗಳಲ್ಲೇ ಇಬ್ಬರೂ ಕೆಳಗಿಳಿದು ತಮ್ಮ ಕೈ ಚಳಕ ತೋರಿಸಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

ನಂತರ ಮರಗದಮ್ಮ ವ್ಯಾನಿಟಿ ಬ್ಯಾಗ ಜಿಪ್ ತೆಗೆದಿರುವುದನ್ನು ಗಮನಿಸಿ ಗಾಬರಿಯಾಗಿ ನೋಡಿದಾಗ ಅದರಲ್ಲಿದ್ದ ಒಡವೆಗಳು ನಾಪತ್ತೆಯಾಗಿರುವುದು ಕಂಡು ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ತಿಳಿಸಿದ್ದಾರೆ. ಪ್ರಯಾಣಿಕರು ಇವರನ್ನು ವಿಚಾರಿಸಿದಾಗ ನನ್ನ ಸೀಟಿನ ಪಕ್ಕದಲ್ಲಿ ಇಬ್ಬರು ಮಹಿಳೆಯರು ಕುಳಿತುಕೊಂಡು ಮಾತನಾಡಿಸಿ ಇಳಿದು ಹೋಗಿದ್ದಾರೆ. ಅವರೇ ಆಭರಣ ಕದ್ದಿರುವುದು. ಅವರ ಚಹರೆ ಗುರುತಿಸುವುದಾಗಿ ತಿಳಿಸಿದ್ದಾರೆ. ವ್ಯಾನಿಟಿ ಬ್ಯಾಗ್‍ನಲ್ಲಿ ಚಿನ್ನದ ಸರ, ನಾಲ್ಕು ಬಳೆ, ನಾಲ್ಕು ಉಂಗುರ ಸೇರಿದಂತೆ 225 ಗ್ರಾಂ ಬಂಗಾರದ ಆಭರಣಗಳನ್ನು ಕಳೆದುಕೊಂಡಿರುವುದಾಗಿ ಮರಗದಮ್ಮ ಕಣ್ಣೀರಿಟ್ಟಿದ್ದಾರೆ.  ಈ ಬಗ್ಗೆ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಮಹಿಳೆಯರಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments

Sri Raghav

Admin