ಇಂದು ಶಿಕ್ಷಕರ ದಿನ, ಜೀವನದಲ್ಲಿ ಜ್ಞಾನದ ಬೆಳಕು ಚೆಲ್ಲಿದ ಗುರುವನ್ನು ನೆನೆಯುವ ದಿನ
ಅಜ್ಞಾನವೆಂಬ ಅಂಧಕಾರದಲ್ಲಿ ಮುಳುಗಿರುವವನ ಬಾಳಿನಲ್ಲಿ ಕತ್ತಲು ಹೊಡೆದೋಡಿಸಿ, ವಿದ್ಯೆಯೆಂಬ ಸುಜ್ಞಾನದ ಬೆಳಕನ್ನು ತರುವ ಶ್ರೇಷ್ಠ ವ್ಯಕ್ತಿಯೇ ಗುರು.
ಗುರುವಿನ ಸ್ಥಾನದಲ್ಲಿ ತಂದೆ-ತಾಯಿಗಳು, ಶಿಕ್ಷಕರು, ಹಿರಿಯರು, ಹಿತೈಷಿಗಳು, ಸ್ನೇಹಿತರು ಮುಂತಾದವರು ನಿಲ್ಲುತ್ತಾರೆ. ಹೆಚ್ಚಾಗಿ ಗುರು ಎಂದ ತಕ್ಷಣ ನಮ್ಮ ನೆನಪಿಗೆ ಬರುವುದು ವಿದ್ಯಾದಾನದ ಮೂಲಕ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿ, ಸಮಾಜಕ್ಕೆ ಹಾಗೂ ನಾಡಿಗೆ ಉತ್ತಮ ಪ್ರಜೆಗಳನ್ನಾಗಿ ಕೊಡುಗೆ ನೀಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಂತಹ ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರು ಹಾಗೂ ಅಧ್ಯಾಪಕ ವರ್ಗದವರು. ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಜಗತ್ತು ಕಂಡ ಸರ್ವಶ್ರೇಷ್ಠ ಶಿಕ್ಷಕ, ಶಿಕ್ಷಕ ವೃತ್ತಿಯನ್ನು ತನ್ನ ಜೀವನಾಡಿಯೆಂದು ಭಾವಿಸಿದ್ದಂತಹ ಮಹಾನ್ ಪುರುಷ, ಮಾಜಿ ರಾಷ್ಟ್ರಪತಿ, ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ರಾಷ್ಟ್ರದೆಲ್ಲೆಡೆ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ.
ಜ್ಞಾನಾರ್ಜನೆ ಮತ್ತು ಜ್ಞಾನಬೋಧನೆ ತನ್ನ ಎರಡು ಕಣ್ಣುಗಳಂತೆ ಎಂದು ತಿಳಿದು ಜೀವನವಿಡೀ ಬೋಧನೆಗೆ ಹಾಗೂ ಈ ಮೂಲಕ ಸಮಾಜದ ಬದಲಾವಣೆಗೆ ತನ್ನ ತನು-ಮನವನ್ನು ಮೀಸಲಾಗಿಟ್ಟಿದ್ದ ಸರ್ವಪಲ್ಲಿ ರಾಧಾಕೃಷ್ಣನ್ರವರು ಜನಿಸಿದ್ದು 1888 ಸೆಪ್ಟೆಂಬರ್ 5 ರಂದು ತಮಿಳುನಾಡಿನ ತಿರುತ್ತಣಿಯಲ್ಲಿ. ಚಿಕ್ಕ ವಯಸ್ಸಿನಿಂದಲೂ ಪುಸ್ತಕಗಳನ್ನು ಓದುವ ಗೀಳು ಹೆಚ್ಚಾಗಿದ್ದ ಇವರಿಗೆ ತದನಂತರದ ದಿನಗಳಲ್ಲಿ ತತ್ವಶಾಸ್ತ್ರ ಅಚ್ಚುಮೆಚ್ಚಿನ ಹಾಗೂ ಆಸಕ್ತಿಯ ವಿಷಯವಾಗಿ ಹೊರಹೊಮ್ಮಿತು. ಅವರು ತತ್ವಶಾಸ್ತ್ರ ಬೋಧನೆ ಮಾಡುವ ಸಮಯದಲ್ಲಿ ಇಡೀ ತರಗತಿಯೇ ನಿಶ್ಶಬ್ಧತೆಯಿಂದ ಇರುತ್ತಿತ್ತು. ಅಷ್ಟರಮಟ್ಟಿಗೆ ವಿದ್ಯಾರ್ಥಿಗಳು ರಾಧಾಕೃಷ್ಣನ್ ಅವರ ಬೋಧನೆಯನ್ನು ಬಹಳ ಇಷ್ಟಪಟ್ಟು ಆಲಿಸುತ್ತಿದ್ದರು. ರಾಧಾಕೃಷ್ಣನ್ರವರು ಬೋಧಿಸುತ್ತಿದ್ದ ತರಗತಿಗಳಲ್ಲಿ ಬೇರೆ ತರಗತಿಗಳ ವಿದ್ಯಾರ್ಥಿಗಳೂ ಕೂಡ ಬಂದು ಕುಳಿತು ಬೋಧನೆಯನ್ನು ಕೇಳುತ್ತಿದ್ದರು.
ಬೋಧಿಸುವ ಸಮಯದಲ್ಲಿ ತತ್ವಶಾಸ್ತ್ರ ವಿಷಯಗಳನ್ನು ಅಚ್ಚುಕಟ್ಟಾಗಿ, ಸ್ವಾರಸ್ಯಕರವಾಗಿ ಮನಮುಟ್ಟುವಂತೆ ಹೇಳುತ್ತಿದ್ದರು. ರಾಧಾಕೃಷ್ಣನ್ರವರ ಬೋಧನಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತುಂಬಿ ತುಳುಕುತ್ತಿತ್ತು. ಅಷ್ಟರಮಟ್ಟಿಗೆ ತಮ್ಮ ಪಾಂಡಿತ್ಯ, ಹಾವ-ಭಾವದಿಂದ ವಿದ್ಯಾರ್ಥಿಗಳ ಪ್ರೀತಿಯ ಹಾಗೂ ನೆಚ್ಚಿನ ಶಿಕ್ಷಕರಾಗಿದ್ದರು. ಆದರ್ಶ ಹಾಗೂ ಅತ್ಯುತ್ತಮ ಶಿಕ್ಷಕನ ಹೆಗ್ಗುರುತು ಮತ್ತು ಮಾದರಿಯಾಗಿದ್ದವರು ರಾಧಾಕೃಷ್ಣನ್ರವರು. ಸಾಧನೆಗೆ ಅಸಾಧ್ಯವಾದುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದನ್ನು ಎಲ್ಲಾ ಸಾಧಕರು ಹಾಗೂ ಸಾಧನೆಯ ಹಾದಿಯಲ್ಲಿರುವವರು ಖಡಾಖಂಡಿತವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ, ಸಾಧನೆ ಮಾಡಲು ಉತ್ತಮ ಮಾರ್ಗದರ್ಶಕ ಹಾಗೂ ಸೂಕ್ತ ಮಾರ್ಗದರ್ಶನ ಬೇಕಲ್ಲವೆ..? ಅಂತಹ ಮಾರ್ಗದರ್ಶಕರ ಮುಂಚೂಣಿ ಸ್ಥಾನದಲ್ಲಿ ನೆಲೆಸಿರುವವರೇ ಗುರು.
ಅದಕ್ಕಾಗಿ ಅಲ್ಲವೆ ಸಾಧನೆ ಮಾಡಲು ನಿಶ್ಚಯಿಸಿರುವವನಿಗೆ ಹಿಂದೆ ಗುರು ಮುಂದೆ ಗುರಿ ಇರಬೇಕೆಂದು ತಿಳಿದವರು ನುಡಿದಿರುವುದು. ಗುರುವಿನ ಮಾರ್ಗದರ್ಶನವಿಲ್ಲದೆ ಏನನ್ನಾದರೂ ಸಾಧಿಸಲು ಹೊರಟವನ ಪ್ರಯತ್ನ ಬರೀ ವ್ಯರ್ಥ ಪ್ರಯತ್ನವೇ ಸರಿ. ಹಾಗಾಗಿಯೇ ಅಲ್ಲವೇ, ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ನುಡಿದಿರುವುದು.
ಶಿಕ್ಷಕ ಎಂಬ ಪವಾಡ ಪುರುಷನ ಹಾಗೂ ಅವನ ಮಹಿಮೆಯನ್ನು ಆದಿಗುರು ಶಂಕರಾಚಾರ್ಯರು ತಮ್ಮ ಸ್ತೋತ್ರದ ಮೂಲಕ ಹೀಗೆ ಬಣ್ಣಿಸುತ್ತಾರೆ.
ಗುರುಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರ
ಗುರುಸ್ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇ ನಮಃ ||
ಗುರುವನ್ನು ಕೇವಲ ಒಬ್ಬ ವ್ಯಕ್ತಿಯನ್ನಾಗಿ ನೋಡದೆ, ಶಕ್ತಿಯಾಗಿ ನೋಡಿದಲ್ಲಿ ಅವನ ನಿಜವಾದ ಅಂತಃಶಕ್ತಿ ಅನಾವರಣಗೊಳ್ಳುತ್ತದೆ. ಅವನಲ್ಲಿರುವ ವಾತ್ಸಲ್ಯ, ಪ್ರೀತಿ, ತ್ಯಾಗ, ಚೈತನ್ಯದಂತಹ ವ್ಯಕ್ತಿತ್ವಗಳಿಗೆ ಅವನಿಗವನೇ ಸಾಟಿ. ಹಾಗಾಗಿಯೇ ಉಪನಿಷತ್ತಿನಲ್ಲಿ ಗು ಎಂದರೆ ಕತ್ತಲು, ರು ಎಂದರೆ ಹೋಗಲಾಡಿಸುವವನು ಎಂದು ಅದ್ಭುತವಾಗಿ ವರ್ಣಿಸಲಾಗಿದೆ. ನನ್ನ ಪ್ರೀತಿಯ ಶಿಕ್ಷಕ ವೃಂದದವರಿಗೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಷಯಗಳು.
Pingback: dofollow High PR blog posting sites
Pingback: massage in bkk
Pingback: Istanbul Eskort
Pingback: the hidden wiki link
Pingback: รับผลิตครีม