ನಾಳೆ ತೆಲಂಗಾಣ ವಿಧಾನಸಭೆ ವಿಸರ್ಜನೆಗೆ ಮುಂದಾದ ಸಿಎಂ ಕೆಸಿಆರ್..!?

ಈ ಸುದ್ದಿಯನ್ನು ಶೇರ್ ಮಾಡಿ

Telangana--01

ಹೈದರಾಬಾದ್,5-ಅವಧಿಗೂ ಮುನ್ನವೇ ಹೊಸ ಜನಾದೇಶ ಪಡೆಯಲು ಮುಂದಾಗಿರುವ ತೆಲಾಂಗಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನಾಳೆ ಬೆಳಗ್ಗೆ ವಿಧಾನಸಭೆ ವಿಸರ್ಜನೆ ಮಾಡಲಿದ್ದಾರೆ. ಸಾಮಾನ್ಯವಾಗಿ ಯಾವುದೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಮುನ್ನ ದೇವರು, ಶಾಸ್ತ್ರಗಳಿಗೆ ಎಲ್ಲವನ್ನು ಲೆಕ್ಕಾಚಾರ ಹಾಕಿಯೇ ಮುಂದಡಿ ಇಡುತ್ತಾರೆ.

ಚಂದ್ರಶೇಖರ್ ರಾವ್ ಅವರಿಗೆ ಆರು ಅದೃಷ್ಟದ ಸಂಖ್ಯೆ ಎಂದೇ ಹೇಳಲಾಗುತ್ತದೆ. ಹೀಗಾಗಿ ನಾಳೆ ಬೆಳಗ್ಗೆ 6.45ಕ್ಕೆ ಶುಭ ಸಂದರ್ಭದಲ್ಲಿ ವಿಧಾನಸಭೆಯನ್ನು ವಿಸರ್ಜನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಭಾನುವಾರವೇ ರಂಗಾರೆಡ್ಡಿ ಜಿಲ್ಲೆಯಲ್ಲಿ ಪಕ್ಷದ ವತಿಯಿಂದ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆ ವೇಳೆ ವಿಧಾನಸಭೆ ವಿಸರ್ಜನೆ ಮಾಡಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಚಂದ್ರಶೇಖರ್ ರಾವ್ ಕೇವಲ ಸರ್ಕಾರದ ಸಾಧನೆಗಳನ್ನು ಜನತೆಯ ಮುಂದಿಟ್ಟಿದ್ದರು. ಅಲ್ಲದೆ ಜನತೆಗಾಗಿ ಕೆಲವು ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು.

ಜ್ಯೋತಿಷಿ ಒಬ್ಬರ ಸಲಹೆ ಮೇರೆಗೆ ಸೆ.6ರಂದು ವಿಧಾನಸಭೆ ವಿಸರ್ಜಿಸಿದರೆ ಪುನಃ ರಾಜ್ಯದಲ್ಲಿ ಟಿಆರ್‍ಎಸ್ ಅಧಿಕಾರಕ್ಕೆ ಬರಲಿದೆ ಸಲಹೆ ಮಾಡಿದ್ದರು. ಇದರಂತೆಯೇ ನಾಳೆ 6.45ಕ್ಕೆ ವಿದ್ಯುಕ್ತವಾಗಿ ವಿಧಾನಸಭೆ ವಿಸರ್ಜಿಸಿ ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ.  ತೆಲಂಗಾಣ ವಿಧಾನಸಭೆಯ ವೇಳಾಪಟ್ಟಿಯಂತೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮೇ ತಿಂಗಳಿನಲ್ಲಿ ನಡೆಯಬೇಕಿತ್ತು. ಈವರೆಗೂ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆಯುತ್ತಿತ್ತು. ಈಗ ಅವಧಿಗೂ ಮುನ್ನವೇ ಚುನಾವಣೆ ಎದುರಿಸಲು ವಿಧಾನಸಭೆಯನ್ನು ವಿಸರ್ಜನೆ ಮಾಡುವ ತೀರ್ಮಾನಕ್ಕೆ ಬರಲಾಗಿದೆ.

ಒಂದು ವೇಳೆ ನಾಳೆ ಅಧಿಕೃತವಾಗಿ ವಿಸರ್ಜನೆಯಾದರೆ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ರಾಜಸ್ಥಾನ, ಛತ್ತೀಸ್‍ಗಢ ಹಾಗೂ ಮಧ್ಯಪ್ರದೇಶದ ಜೊತೆಗೆ ತೆಲಂಗಾಣಕ್ಕೆ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿಪಡಿಸುವ ಸಾಧ್ಯತೆ ಇದೆ.

# ವಿರೋಧ ಪಕ್ಷಗಳ ಅಪಸ್ವರ:
ಚಂದ್ರಶೇಖರ್ ರಾವ್ ಅವರ ಈ ನಿರ್ಧಾರಕ್ಕೆ ಕಾಂಗ್ರೆಸ್, ಪಿಡಿಪಿ ಮತ್ತಿತರ ಪಕ್ಷಗಳು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಚೇಲಾದಂತೆ ವರ್ತಿಸುವ ಮುಖ್ಯಮಂತ್ರಿ ಜನಾದೇಶವನ್ನು ಧಿಕ್ಕರಿಸಿ ಚುನಾವಣೆ ಹೇರಲು ಮುಂದಾಗಿದ್ದಾರೆ. ಈ ಸಂಬಂಧ ನಾವು ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಕಾಂಗ್ರೆಸ್‍ನ ನಾಯಕರೊಬ್ಬರು ಹೇಳಿದ್ದಾರೆ.

ಆದರೆ ಬಿಜೆಪಿ ಮಾತ್ರ ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡದೇ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಮುಂದಾಗಿದೆ. ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಚುನಾವಣೆಗೆ ಸಜ್ಜಾಗಬೇಕೆಂದು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.  2019ರ ಲೋಕಸಭೆ ಚುನಾವಣೆಯಲ್ಲಿ ಟಿಆರ್‍ಎಸ್ ಎನ್‍ಡಿಎಗೆ ಬೆಂಬಲ ನೀಡುವ ಸಾಧ್ಯತೆ ಇರುವುದರಿಂದ ಚಂದ್ರಶೇಖರ್ ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಸೇರಿದಂತೆ ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲ.

ಇತ್ತೀಚೆಗೆ ಟಿಡಿಪಿ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ ವೇಳೆ ಟಿಆರ್‍ಎಸ್ ಸದನದಿಂದ ಹೊರ ನಡೆದಿತ್ತು. ಇದಕ್ಕೆ ಪ್ರಧಾನಿಯವರು ಚಂದ್ರಶೇಖರ್ ರಾವ್‍ಗೆ ಕೃತಜ್ಞತೆ ಸಲ್ಲಿಸಿದ್ದರು. ಅಲ್ಲದೆ ಕೆಲ ದಿನಗಳ ಹಿಂದೆ ಪ್ರಧಾನಿಯನ್ನು ಭೇಟಿಯಾಗಿ ಚುನಾವಣೆ ನಂತರ ಬಿಜೆಪಿ ಜೊತೆ ಮೈತ್ರಿಗೆ ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದರು. ಅಖಂಡ ಆಂಧ್ರದಲ್ಲಿ ಟಿಡಿಪಿಯನ್ನು ಅಧಿಕಾರದಿಂದ ದೂರ ಇಡಲು ಹವಣಿಸುತ್ತಿರುವ ಬಿಜೆಪಿ ವೈಎಸ್‍ಆರ್ ಹಾಗೂ ಟಿಆರ್‍ಎಸ್ ಜೊತೆ ದೋಸ್ತಿ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಈ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ.

Facebook Comments

Sri Raghav

Admin