ನಾಪತ್ತೆಯಾಗಿದ್ದ ಯುವತಿ ಮೋರಿಯಲ್ಲಿ ಶವವಾಗಿ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Bhagyashree-Girl

ಗೌರಿಬಿದನೂರು, ಸೆ.6- ಎರಡು ದಿನಗಳ ಹಿಂದೆ ಫೈನಾನ್ಸ್ ಕಚೇರಿಗೆ ಕೆಲಸಕ್ಕೆ ತೆರಳಿ ನಾಪತ್ತೆಯಾಗಿದ್ದ ಯುವತಿ ಶವವಾಗಿ ಮೋರಿಯಲ್ಲಿ ಪತ್ತೆಯಾಗಿದ್ದಾಳೆ.
ಮೂಲತಃ ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿ, ಅರಳೂರು ನಾಗೇನಹಳ್ಳಿಯ ಕೃಷ್ಣಪ್ಪ-ಕಾಮಾಕ್ಷಮ್ಮ ಎಂಬುವವರ ಪುತ್ರಿ ಭಾಗ್ಯಶ್ರೀ (23) ಕೊಲೆಯಾದ ದುರ್ದೈವಿ.   ಬಿಎ ವ್ಯಾಸಂಗ ಮಾಡಿದ್ದ ಭಾಗ್ಯಶ್ರೀ ಕಳೆದ ಆರು ತಿಂಗಳಿನಿಂದ ಕನ್ನಮಂಗಲ ಗೇಟ್ ಬಳಿ ಇರುವ ಅಚೈನ್ ಫೈನಾನ್ಸ್ ಎಂಟರ್‍ಪ್ರೈಸಸ್‍ನಲ್ಲಿ ಕೆಲಸ ಮಾಡುತ್ತಿದ್ದರು.

ಭಾನುವಾರ ಎಂದಿನಂತೆ ಭಾಗ್ಯಶ್ರೀ ಕೆಲಸಕ್ಕೆ ತೆರಳಿದ್ದರು. ಅಂದು 5.85 ಲಕ್ಷ ರೂ. ಸಂಗ್ರಹವಾಗಿತ್ತು. ಈ ಹಣವನ್ನು ತೆಗೆದುಕೊಂಡು ಬಾಡಿಗೆಗೆ ಕಾರು ಮಾಡಿಕೊಂಡು ದೇವನಹಳ್ಳಿ ಬ್ರಾಂಚ್‍ಗೆ ಬರುವಂತೆ ಸುಮನಾ ಎಂಬುವವರು ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.  ಆದರೆ, ಭಾಗ್ಯಶ್ರೀ ದೇವನಹಳ್ಳಿ ಬ್ರಾಂಚ್‍ಗೂ ಹೋಗಿಲ್ಲ, ಮನೆಗೂ ತೆರಳಿಲ್ಲ. ರಾತ್ರಿಯಾದರೂ ಮಗಳು ಮನೆಗೆ ಬಾರದಿರುವುದನ್ನು ಕಂಡು ಪೊೀಷಕರು ಎಲ್ಲ ಕಡೆ ವಿಚಾರಿಸಿದ್ದಾರೆ. ಆದರೆ, ಮಗಳು ಸುಳಿವು ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ಈ ನಡುವೆ ನಿನ್ನೆ ಸಂಜೆ ತಾಲೂಕಿನ ನಗರಗೆರೆ ಹೋಬಳಿಯ ಸಬ್ಬನಹಳ್ಳಿ ಗ್ರಾಮದ ಗೌರಿಬಿದನೂರು-ಗುಡಿಬಂಡೆ ಮುಖ್ಯರಸ್ತೆಯ ಮಧ್ಯದ ಮೋರಿಯ ಕೆಳಗೆ ಯುವತಿಯ ಶವ ಪತ್ತೆಯಾಗಿತ್ತು.

ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ದುಷ್ಕರ್ಮಿಗಳು ಈ ಯುವತಿಯ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದು ಕಂಡುಬಂದಿದೆ. ಯುವತಿಯ ಚಹರೆ ಪತ್ತೆಯಾಗದ ಕಾರಣ ಶವವನ್ನು ಗೌರಿಬಿದನೂರು ಆಸ್ಪತ್ರೆಗೆ ಸಾಗಿಸಿದರು.

ಯುವತಿ ಕಪ್ಪು ಪ್ಯಾಂಟ್ ಮತ್ತು ಬಿಳಿ ಟಾಪ್ ಧರಿಸಿದ್ದು, 4.5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಈಕೆಯ ವಾರಸುದಾರರಿಗಾಗಿ ತನಿಖೆ ಕೈಗೊಂಡಾಗ ಈ ಯುವತಿ ಎರಡು ದಿನಗಳ ಹಿಂದೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿರುವುದು ಕಂಡುಬಂದಿದೆ.  ತಕ್ಷಣ ಈಕೆಯ ಪೊೀಷಕರಿಗೆ ಪೊಲೀಸರು ವಿಷಯ ತಿಳಿಸಿದ್ದು, ಪೊೀಷಕರು ಸ್ಥಳಕ್ಕೆ ಬಂದು ಮೃತದೇಹವನ್ನು ಗಮನಿಸಿ ತಮ್ಮ ಮಗಳೆಂದು ಗುರುತಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ, ವೃತ್ತ ನಿರೀಕ್ಷಕ ಅಮರನಾರಾಯಣ, ಎಎಸ್‍ಐ ಅವಿನಾಶ್ ಭೇಟಿ ನೀಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ಕೈಗೊಂಡಿದ್ದಾರೆ. ಈ ಯುವತಿ ಫೈನಾನ್ಸ್‍ನಲ್ಲಿ ಸಂಗ್ರಹವಾಗಿದ್ದ ಹಣವನ್ನು ದೇವನಹಳ್ಳಿ ಬ್ರಾಂಚ್‍ಗೆ ತೆಗೆದುಕೊಂಡು ಹೋಗುತ್ತಿದ್ದಾಗ ಈಕೆಯನ್ನು ಅಡ್ಡಗಟ್ಟಿ ಹಣ ಅಪಹರಿಸಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

Facebook Comments

Sri Raghav

Admin