ಕಾಬೂಲ್‍ನಲ್ಲಿ ಅವಳಿ ಬಾಂಬ್ ಸ್ಫೋಟ : ಪತ್ರಕರ್ತರೂ ಸೇರಿದಂತೆ 24 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Kabul--01

ಕಾಬೂಲ್, ಸೆ.6- ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರ ಅಟ್ಟಹಾಸ ಮುಂದುವರಿದಿದೆ. ರಾಜಧಾನಿ ಕಾಬೂಲ್‍ನ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಅವಳಿ ಬಾಂಬ್ ಸ್ಫೋಟದಿಂದಾಗಿ ಪತ್ರಕರ್ತರೂ ಸೇರಿದಂತೆ ಕನಿಷ್ಠ 24 ಮಂದಿ ಸಾವನ್ನಪ್ಪಿ, 80ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.  ಕಾಬೂಲ್‍ನ ದಾತ್-ಇ-ಬರ್ಚಿ ಪ್ರದೇಶದಲ್ಲಿರುವ ಕ್ರೀಡಾಕ್ಲಬ್ ನಲ್ಲಿ ಸ್ಫೋಟ ನಡೆದಿದ್ದು, ಉಗ್ರರು ತಮ್ಮ ಕ್ರೌರ್ಯ ಪ್ರದರ್ಶಿಸಿದ್ದಾರೆ. ಮೊದಲು ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಈ ವೇಳೆ ಹಲವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಸುತ್ತಮುತ್ತಲಿದ್ದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲೇ ಕಾರಿನಲ್ಲಿ ಇಡಲಾಗಿದ್ದ ಮತ್ತೊಂದು ಬಾಂಬ್‍ನನ್ನೂ ಸ್ಫೋಟಿಸಲಾಗಿದೆ.

ಇದರಿಂದಾಗಿ ಬಾಂಬ್‍ಸ್ಫೋಟದ ತೀವ್ರತೆ ಹೆಚ್ಚಾಗಿದ್ದು, ಘಟನೆಯಲ್ಲಿ ಅಪಾರ ಸಾವು-ನೋವುಗಳಾಗಿವೆ. ಈವರೆಗೂ ಯಾವುದೇ ಉಗ್ರ ಸಂಘಟನೆಗಳು ದಾಳಿಯ ಹೊಣೆ ಹೊತ್ತುಕೊಂಡಿಲ್ಲವಾದರೂ ಇದರ ಹಿಂದೆ ಐಎಸ್‍ಐ ಮತ್ತು ತಾಲಿಬಾನ್ ಬಂಡುಕೋರರ ಕೈವಾಡವಿರುವ ಸಾಧ್ಯತೆ ಇದೆ.

ಈ ಬಗ್ಗೆ ಮಾಹಿತಿ ನೀಡಿರುವ ಆಫ್ಘಾನಿಸ್ತಾನ ಆಂತರಿಕ ಇಲಾಖೆಯ ವಕ್ತಾರರು ಮೊದಲ ಬಾರಿಗೆ ಆತ್ಮಾಹುತಿ ಬಾಂಬರ್‍ನಿಂದ ಸ್ಫೋಟ ಸಂಭವಿಸಿದ್ದು, ಸ್ವಲ್ಪ ಸಮಯದ ನಂತರ ಕಾರ್‍ಬಾಂಬ್ ಸ್ಫೋಟಗೊಂಡಿದೆ ಎಂದು ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯಲ್ಲಿ ಮಾಧ್ಯಮ ಸಂಸ್ಥೆಯೊಂದರ ಛಾಯಾಗ್ರಾಹಕರು ಮತ್ತು ವರದಿಗಾರರು ಸಹ ಮೃತಪಟ್ಟಿದ್ದು, ಸ್ಥಳೀಯ ಮಾಧ್ಯಮವೊಂದರ ನಾಲ್ಕು ಜನ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರಿಗೆ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಸಂತಾಪ ಸೂಚಿಸಿದ್ದು, ನಾಗರಿಕರು, ಮಾಧ್ಯಮ ಮಂದಿಯನ್ನು ದೇಶದಲ್ಲಿ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವೀಯತೆಯ ಮೇಲೆ ನಡೆಯುತ್ತಿರುವ ಆಕ್ರಮಣವಾಗಿದೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin