ಪತ್ರಕರ್ತರ ವೈದ್ಯಕೀಯ ಅನುದಾನ ಬಳಕೆ ಮಾರ್ಗಸೂಚಿ ರೂಪಿಸಲು ಆಯುಕ್ತರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

BBMP--01

ಬೆಂಗಳೂರು,ಸೆ.6-ಇದೇ ಪ್ರಪ್ರಥಮ ಬಾರಿಗೆ ಬಿಬಿಎಂಪಿ ಬಜೆಟ್‍ನಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚ ಭರಿಸಲು ಮೀಸಲಿಟ್ಟಿರುವ ಒಂದು ಕೋಟಿ ರೂ.ಗಳ ಅನುದಾನ ಸದ್ಬಳಕೆಗೆ ಮಾರ್ಗಸೂಚಿ ರೂಪಿಸಲು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಸಮ್ಮತಿಸಿದ್ದಾರೆ. ಪತ್ರಕರ್ತರಾದ ಶಿವಕುಮಾರ್ ಬೆಳ್ಳಿತಟ್ಟೆ, ಗಿರೀಶ್ ಗರಗ, ರಮೇಶ್‍ಪಾಳ್ಯ, ಉಲ್ಲಾಸ್ ಸೇರಿದಂತೆ ಇನ್ನಿತರ ಪತ್ರಕರ್ತರು ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ಭೇಟಿಯಾಗಿ ವೈದ್ಯಕೀಯ ನಿಧಿ ಸದ್ಬಳಕೆಗೆ ಮಾರ್ಗಸೂಚಿ ರೂಪಿಸುವಂತೆ ಮನವಿ ಮಾಡಿಕೊಂಡರು. ಪತ್ರಕರ್ತರ ಬೇಡಿಕೆಗೆ ಸ್ಥಳದಲ್ಲೇ ಸ್ಪಂದಿಸಿದ ಆಯುಕ್ತರು ಕೂಡಲೇ ಮಾರ್ಗಸೂಚಿ ಹೊರಡಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು.

ವೈದ್ಯಕೀಯ ನಿಧಿ ಬಿಡುಗಡೆ ಕುರಿತಂತೆ ಇಬ್ಬರು ಹಿರಿಯ ಪತ್ರಕರ್ತರು ಮತ್ತು ಬಿಬಿಎಂಪಿ ಆರೋಗ್ಯಾಧಿಕಾರಿ ಗಳನ್ನೊಳಗೊಂಡ ಒಂದು ಸಮಿತಿ ರಚಿಸಲು ಕೂಡ ಮಂಜುನಾಥ್ ಸಮ್ಮತಿಸಿದರು. ಕೇವಲ ಬಿಬಿಎಂಪಿ ಪತ್ರಕರ್ತರಲ್ಲದೆ ನಗರದಲ್ಲಿರುವ ಇತರೆ ಪತ್ರಕರ್ತರಿಗೂ ಸೇವೆ ವಿಸ್ತರಿಸಲು, ಯಾವುದೇ ಪತ್ರಕರ್ತ ಅನಾರೋಗ್ಯಕ್ಕೀಡಾದಾಗ ಒಂದು ಕೋಟಿ ನಿಧಿಯಲ್ಲಿ ಹೇಗೆ ಹಣ ಬಿಡುಗಡೆ ಮಾಡಬೇಕು. ಇದಕ್ಕೆ ಮಾನದಂಡವೇನು ಎಂಬುದರ ಬಗ್ಗೆ ಈ ಸಮಿತಿ ಶಿಫಾರಸು ಮಾಡಲಿ ಈ ಶಿಫಾರಸಿನನ್ವಯ ಹಣ ಬಿಡುಗಡೆ ಮಾಡಲು ಸಿದ್ದ ಎಂದು ಹೇಳಿದರು.

ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತರಾದ ದೊಡ್ಡ ಬೊಮ್ಮಯ್ಯ, ಅಪಘಾತಕ್ಕೊಳ ಗಾಗಿರುವ ರಾಜು ಮಳವಳ್ಳಿ ಮತ್ತು ನಂದಕುಮಾರ್ ಅವರ ಚಿಕಿತ್ಸಾ ವೆಚ್ಚ ಭರಿಸಲು ಮಾರ್ಗಸೂಚಿಗೂ ಮುನ್ನವೇ ಆದ್ಯತೆ ನೀಡಲಾಗುವುದು ಎಂದು ಮಂಜುನಾಥ್ ಪ್ರಸಾದ್ ಭರವಸೆ ನೀಡಿದರು. ಆಡಳಿತ ಪಕ್ಷದ ನಾಯಕ ಶಿವರಾಜ್ ಮಾತನಾಡಿ, ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಪತ್ರಕರ್ತರ ಚಿಕಿತ್ಸಾ ವೆಚ್ಚಕ್ಕೆ ಮೀಸಲಿಟ್ಟಿರುವ ಒಂದು ಕೋಟಿ ಹಣ ಸದುಪಯೋಗಕ್ಕೆ ಕೂಡಲೇ ಮಾರ್ಗಸೂಚಿ ರೂಪಿಸುವಂತೆ ಮೇಯರ್ ಸಂಪತ್‍ರಾಜ್ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

Facebook Comments

Sri Raghav

Admin