BREAKING : ‘ಸಲಿಂಗಕಾಮ ಅಪರಾಧವಲ್ಲ’ ಸುಪ್ರೀಂ ಐತಿಹಾಸಿಕ ತೀರ್ಪು

ಈ ಸುದ್ದಿಯನ್ನು ಶೇರ್ ಮಾಡಿ

Supreme-Court-Sex

ನವದೆಹಲಿ, ಸೆ.6- ತೀವ್ರ ವಿವಾದ ಹಾಗೂ ಪರ-ವಿರೋಧ ವಾದಕ್ಕೆ ಕಾರಣವಾಗಿದ್ದ ಸಲಿಂಗಕಾಮ ಕುರಿತು ಇಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಮತ್ಮಿಯ ಸಲಿಂಗಕಾಮ ಅಪರಾಧವಲ್ಲ ಎಂದು ಘೋಷಿಸಿದೆ. ಇದರೊಂದಿಗೆ 158 ವರ್ಷಗಳ ಬಳಿಕ ಹಳೆಯ ಕಾನೂನನ್ನು ಸರ್ವೋಚ್ಛ ನ್ಯಾಯಾಲಯ ರದ್ದುಗೊಳಿಸಿದ್ದು, ಸಲಿಂಗಕಾಮಿಗಳ ಹೋರಾಟಕ್ಕೆ ಜಯ ಲಭಿಸಿದೆ.

ಸಲಿಂಗಕಾಮಿಗಳ ಹಕ್ಕುಗಳ ಹೋರಾಟಗಾರರು ಸೇರಿದಂತೆ ವಿವಿಧ ವ್ಯಕ್ತಿ, ಸಂಘ-ಸಂಸ್ಥೆಗಳ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚ ನ್ಯಾಯಾಧೀಶರ ಸಂವಿಧಾನಿಕ ಪೀಠ ಒಪ್ಪಿಗೆಯ ಸಲಿಂಗಕಾಮ ಅಪರಾಧವಲ್ಲ. ಸಲಿಂಗಕಾಮಿಗಳು ಗೌರವದಿಂದ ಜೀವಿಸುವ ಹಕ್ಕಿದೆ ಎಂದು ಇಂದು ಚಾರಿತ್ರಿಕ ತೀರ್ಪು ನೀಡಿದೆ.

ಸಮ್ಮತಿಯ ಸಲಿಂಗಕಾಮ ಅಪರಾಧವಲ್ಲ ಎಂದು ಘೋಷಿಸಿದ್ದರೂ. ಒಪ್ಪಿಗೆಯ ಅನೈಸರ್ಗಿಕ ಲೈಂಗಿಕ ಕ್ರಿಯೆ ಹಾಗೂ ಪ್ರಾಣಿಗಳು ಮತ್ತು ಮಕ್ಕಳೊಂದಿಗೆ ನಡೆಸುವ ಅಸಹಜ ಲೈಂಗಿಕ ಚಟುವಟಿಕೆಗಳನ್ನು ಅಪರಾಧ ಎಂದು ಸುಪ್ರೀಂಕೋರ್ಟ್ ಸಿಜೆಐ ದೀಪಕ್ ಮಿಶ್ರಾ ತೀರ್ಪು ನೀಡಿದರು. ಇದು ಐವರು ನ್ಯಾಯಾಧೀಶರ ಸಹಮತದ ಆದೇ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಾಣಿಗಳು ಮತ್ತು ಮಕ್ಕಳೊಂದಿಗೆ ನಡೆಸುವ ಅನೈಸರ್ಗಿಕ ಲೈಂಗಿಕ ಕ್ರಿಯೆ ಅಪರಾಧ ಎಂದು ಪರಿಗಣಿಸಿರುವ ಐಪಿಸಿ ಸೆಕ್ಷನ್ 377ರಲ್ಲಿನ ನಿಯಮಗಳು ಜÁರಿಯಲ್ಲಿರುತ್ತವೆ ಎಂದು ನ್ಯಾಯಾಧೀಶರಾದ ಆರ್. ನಾರಿಮನ್, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ ಹಾಗೂ ಮಲ್ಹೋತ್ರಾ ಅವರನ್ನೊಳಗೊಂಡ ಪಂಚ ನ್ಯಾಯಾಧೀಶರ ಸಂವಿಧಾನಿಕ ಪೀಠ ಹೇಳಿದೆ.

ಐಪಿಸಿ ಸೆಕ್ಷನ್ 377 ಎಂಬುದು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಯಾವುದೇ ವ್ಯಕ್ತಿ ಪ್ರಕೃತಿಗೆ ವಿರುದ್ಧವಾಗಿ ಪುರುಷ, ಮಹಿಳೆ ಅಥವಾ ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸಿದರೆ ಜೀವಾವಧಿ ಅಥವಾ 10 ವರ್ಷದವರೆಗೂ ವಿಸ್ತರಿಸಬಹುದಾದ ಶಿಕ್ಷೆ ವಿಧಿಸಬಹುದು ಹಾಗೂ ದಂಡ ಹೇರಬಹುದು ಎಂದು ಈ ಕಾಯ್ದೆ ಹೇಳುತ್ತದೆ. ಈ ತೀರ್ಪನ್ನು ಓದಿದ ಮುಖ್ಯ ನ್ಯಾಯಮೂರ್ತಿ ಅವರು, ಐಪಿಸಿ ಸೆಕ್ಷನ್ 377ರ ಕೆಲವು ನಿಯಮಗಳಿಗೆ ಬದಲಾವಣೆಗಳನ್ನು ಸೂಚಿಸಿದರು. ಸಲಿಂಗಕಾಮ ಅಪರಾಧವಲ್ಲ. ಸಲಿಂಗಕಾಮಿಗಳು ಗೌರವದಿಂದ ಜೀವಿಸುವ ಹಕ್ಕು ಇದೆ. ಅವರಿಗೂ ಬೇರೆಯವರಂತೆ ಬದುಕುವ ಎಲ್ಲ ಸಮಾನ ಹಕ್ಕುಗಳು ಇವೆ. ಘನತೆ ಮತ್ತು ಖಾಸಗಿತನ ಅತಿ ಮುಖ್ಯ. ಯಾವುದೇ ವ್ಯಕ್ತಿಯ ಖಾಸಗಿತನಕ್ಕೆ ಸಂವಿಧಾನ ಬದ್ಧವಾಗಿದೆ. ಪೂರ್ವಗ್ರಹಗಳಿಗೆ ಇತಿಶ್ರೀ ಹಾಡಬೇಕಿದೆ ಎಂದು ಹೇಳಿದರು.

ಎಲ್‍ಜಿಬಿಟಿ (ಸಲಿಂಗಿಗಳು. ಸಲಿಂಗಕಾಮಿಗಳು, ದ್ವಿಲಿಂಗಿಗಳು, ತೃತೀಯ ಲಿಂಗಿಗಳು – ಲಿಸ್ಬೆಯಿನ್, ಗೇ, ಬೈಸೆಕ್ಷುವರ್, ಟ್ರಾನ್ಸ್‍ಜೆಂಡರ್) ಸಮುದಾಯದವರನ್ನು ಶೋಷಣೆಗೆ ಒಳಪಡಿಸಲು ಸೆಕ್ಷನ್ 377 ಆಸ್ತ್ರವಾಗಬಾರದು. ಈ ಸಮುದಾಯದವರೂ ಕೂಡ ಇತರ ಮನುಷ್ಯರಂತೆ ಎಲ್ಲ ಮೂಲಭೂತ ಹಕ್ಕುಗಳನ್ನು ಹೊಂದಿರುತ್ತಾರೆ. ಈಗಿರುವ ತಾರತಮ್ಯವನ್ನು ಹೋಗಲಾಡಿಸಬೇಕು ಎಂದು ಅವರು ತಿಳಿಸಿದರು. ಸಲಿಂಗಕಾಮ ಅಪರಾಧ ಅಥವಾ ಮಾನಸಿಕ ಅಸ್ವಸ್ಥತೆಯಲ್ಲ. ಇದು ಸಂಪೂರ್ಣ ಸ್ವಾಭಾವಿಕ ಸ್ಥಿತಿಯಾಗಿದೆ. ಇದು ಖಾಸಗಿ ಸಂಗತಿಯಾಗಿರುವುದರಿಂದ ಇಬ್ಬರು ವಯಸ್ಕರರ ಒಪ್ಪಿಗೆಯ ಲೈಂಗಿಕ ಸಂಬಂಧಕ್ಕೆ ಸಮಾಜ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸ್ಪಷ್ಟಪಡಿಸಿದರು.

ಭಾರತದಲ್ಲಿ ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 377ರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳ ಬಗ್ಗೆ ಸುದೀರ್ಘ ಸಂವಿಧಾನ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು. ಹೋಟೆಲ್ ಉದ್ಯಮಿ ಕೇಶವ್ ಸೂರಿ ಅವರು ಸೆಕ್ಷನ್ 377ರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ನಂತರ ಹಮ್‍ಸಫರ್ ಟ್ರಸ್ಟ್‍ನ ಅಶೋಕ್ ರಾವ್ ಕವಿ ಹಾಗೂ ಅರಿಫ್ ಜಾಫರ್ ಏಪ್ರಿಲ್ 27ರಂದು ಸೆಕ್ಷನ್ ರದ್ದತಿಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಮೇ ತಿಂಗಳಿನಿಂದ ವಿಚಾರಣೆ ನಡೆಸಿದ್ದ ಸಂವಿಧಾನಪೀಠ ಜು.17ರಂದು ತೀರ್ಪು ಕಾದಿರಿಸಿತ್ತು.

ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಲಿಂಗಕಾಮಿಗಳು ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿ ಹರ್ಷದಿಂದ ಕುಣಿದಾಡಿದರು.
ಸಮ್ಮತಿಯ ಸಲಿಂಗಕಾಮವನ್ನು ಅಪರಾಧ ಎಂದು ಸಾರುವ 158 ವರ್ಷದಷ್ಟು ಹಳೆಯದಾದ ಐಪಿಸಿ ಸೆಕ್ಷನ್ 377ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ದೇಶಾದ್ಯಂತ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.  ಈ ವಿಚಾರವಾಗಿ ಪ್ರತಿಕ್ರಿಯೆ ಸಲ್ಲಿಸಲು ಮೊದಲು ಸಮಯಾವಕಾಶ ಕೇಳಿದ್ದ ಕೇಂದ್ರ ಸರ್ಕಾರ, ನಂತರದಲ್ಲಿ ಈ ವಿಷಯವನ್ನು ಸುಪ್ರೀಂಕೋರ್ಟ್‍ನ ವಿವೇಚನೆಗೆ ಬಿಟ್ಟಿತ್ತು. 2001ರಲ್ಲಿ ಈ ಕಾಯ್ದೆಯ ವಿರುದ್ಧ ನಾಝ್ ಫೌಂಡೇಶನ್ ಎಂಬ ಎನ್‍ಜಿಒ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು. 2009ರಲ್ಲಿ ಆ ನ್ಯಾಯಾಲಯ ಸಲಿಂಗಕಾಮವನ್ನು ಅಪರಾಧ ಮುಕ್ತಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಕೆಯಾಗಿತ್ತು.

2013ರಲ್ಲಿ ದೆಹಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ವ ಜಾಗೊಳಿಸಿ, ಸಲಿಂಗಕಾಮವನ್ನು ಅಕ್ರಮ ಎಂದು ಕರೆದಿತ್ತು. ಈ ತೀರ್ಪಿಗೆ ವ್ಯಾಪಕ ಟೀಕೆಗಳು, ಪರ, ವಿರೋಧಗಳು ಕೇಳಿ ಬಂದಿದ್ದವು. ಈ ಸಂಬಂಧ ಕ್ಯುರೇಟಿವ್ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸುವ ಬದಲು ಸೆಕ್ಷನ್ 377 ಕುರಿತಂತೆ ಮೊದಲಿನಿಂದ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿತ್ತು.

# ಖ್ಯಾತನಾಮರ ಸ್ವಾಗತ:
ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಬಾಲಿವುಡ್ ಖ್ಯಾತನಾಮರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸ್ವಾಗತಿಸಿದ್ದಾರೆ.

# ಏನಿದು 377 ಸೆಕ್ಷನ್..?
ಭಾರತದಲ್ಲಿ ಇನ್ನೂ ಬ್ರಿಟಿಷರ ಆಡಳಿತ ನಡೆಯುತ್ತಿದ್ದಾಗಲೇ 1861ರಲ್ಲಿ ಲಾರ್ಡ್ ಮೆಕಾಲೆ ನೇತೃತ್ವದಲ್ಲಿ, ಭಾರತದ ಕಾನೂನು ಪ್ರಾಧಿಕಾರ ನೀಡಿದ ಶಿಫಾರಸಿನ ಮೇರೆಗೆ, ಭಾರತೀಯ ದಂಡ ಸಂಹಿತೆಯನ್ನು ಡ್ರಾಫ್ಟ್ ಮಾಡಲಾಯಿತು. ಅದರಲ್ಲಿನ ಸೆಕ್ಷನ್ 377 ಅಸ್ವಾಭಾವಿಕ ಲೈಂಗಿಕತೆಯ ಅಪರಾಧಕ್ಕೆ ಯಾವ ಶಿಕ್ಷೆಯನ್ನು ನೀಡಬೇಕೆಂದು ವಿವರಿಸುತ್ತದೆ. ಅಸಹಜ ಅಪರಾಧಗಳು – ಯಾರಾದರೂ ಸ್ವಇಚ್ಛೆಯಿಂದ ನೈಸರ್ಗಿಕ ಕ್ರಿಯೆಗೆ ವಿರುದ್ಧವಾಗಿ ಪುರುಷ, ಸ್ತ್ರೀ ಅಥವಾ ಪ್ರಾಣಿಯೊಡನೆ ದೈಹಿಕ ಸಂಭೋಗ ನಡೆಸುತ್ತಾರೋ ಅವರು 10 ವರ್ಷ ಜೈಲು ಶಿಕ್ಷೆ ಮತ್ತು ದಂಡಕ್ಕೆ ಅರ್ಹರಾಗಿರುತ್ತಾರೆ. ಈ ಕಾನೂನಿನ ವಿರುದ್ಧವೇ ಈಗ ಸಮರ ಆರಂಭವಾಗಿ, ತೀರ್ಪು ನೀಡುವ ಹಂತಕ್ಕೆ ಬಂದಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ಬಲವಂತದ ದೈಹಿಕ ಸಂಭೋಗಕ್ಕೆ ಸಂಬಂಧಿಸಿದ್ದರೆ, ಸೆಕ್ಷನ್ 377 ಸ್ವಇಚ್ಛೆಯಿದ್ದರೂ ನಿಸರ್ಗಕ್ಕೆ ಅಥವಾ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ದೈಹಿಕ ಸಂಭೋಗದ ಬಗ್ಗೆ ಹೇಳುತ್ತದೆ. ಆದರೆ, ಈ 377 ಸೆಕ್ಷನ್ ಪುರುಷ, ಸ್ತ್ರೀ ಸಲಿಂಗ ಕಾಮಿಗಳು, ಲೈಂಗಿಕ ಅಲ್ಪಸಂಖ್ಯಾತರು, ದ್ವಿಲಿಂಗಿಗಳ ಸಮುದಾಯದ ಬಗ್ಗೆಯಾಗಲಿ, ಅವರ ಲೈಂಗಿಕ ಕ್ರಿಯೆಗಳ ಬಗ್ಗೆಯಾಗಲು ನೇರವಾಗಿ ಏನನ್ನೂ ಹೇಳುವುದಿಲ್ಲ.  ಈ ಕಾನೂನಿನಡಿಯಲ್ಲಿ ಸಲಿಂಗ ಕಾಮಿಗಳು ಮಾತ್ರವಲ್ಲ ಭಿನ್ನಲಿಂಗೀಯ ಕಾಮ ಕೂಡ ಅಪರಾಧ ಎಂದು ಹೇಳುತ್ತದೆ. ಇಂಥ ಪ್ರಕೃತಿಗೆ ವಿರುದ್ಧವಾದ ಸಂಭೋಗ ಸ್ವಇಚ್ಛೆಯಿಂದ ನಡೆಸಿದರೆ ಕೂಡ ಅದು ಕಾನೂನಿಗೆ ವಿರುದ್ಧವಾಗಿರುತ್ತದೆ ಮತ್ತು ಅಪರಾಧವಾಗುತ್ತದೆ.  ಶಿಶ್ನ ಮತ್ತು ಯೋನಿ ಕೂಡಿಕೆಯ ಸಂಭೋಗವನ್ನು ಹೊರತುಪಡಿಸಿ ಮತ್ತಾವುದೇ ಸಂಭೋಗವಾಗಲಿ, ಗುದ ಸಂಭೋಗ, ಮೌಖಿಕ ಸಂಭೋಗ ಕೂಡ, ಅದು ಸ್ವಇಚ್ಛೆಯಿಂದ ಮಾಡಿದ್ದರೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಅಡಿಯಲ್ಲಿ ಅಪರಾಧವಾಗುತ್ತದೆ.

Facebook Comments

Sri Raghav

Admin