ಎಂ.ಕೃಷ್ಣಪ್ಪ-ರಾಮಲಿಂಗಾರೆಡ್ಡಿ ನಡುವೆ ಪೈಪೋಟಿ, ಯಾರಿಗಿದೆ ಸಚಿವರಾಗುವ ಯೋಗ..?

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--014

ಬೆಂಗಳೂರು, ಸೆ.6- ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿ, ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಆಕಾಂಕ್ಷಿಗಳಿಂದ ಪ್ರಬಲ ಲಾಬಿ ಮತ್ತು ಪೈಪೋಟಿ   ಆರಂಭಗೊಂಡಿದ್ದು, ಎರಡೂ ಪಕ್ಷಗಳ ವರಿಷ್ಠರಿಗೆ ವಿಸ್ತರಣೆ ಸಂಕಟ ತಲೆನೋವಾಗಿ ಪರಿಣಮಿಸಿದೆ. ಖಾಲಿ ಉಳಿದಿರುವ 7 ಸ್ಥಾನಗಳ ಭರ್ತಿಗೆ ಈ ತಿಂಗಳ ಮೂರನೇ ವಾರ ಸಮಯ ನಿಗದಿಯಾಗಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳ ನಿರೀಕ್ಷೆಗಳು ಗರಿಗೆದರಿವೆ. ಲಾಬಿ ಹಾಗೂ ಒತ್ತಡ ತಂತ್ರಗಳು ಎರಡೂ ಪಕ್ಷಗಳ ಆಕಾಂಕ್ಷಿಗಳಿಂದ ಆರಂಭಗೊಂಡಿವೆ. ಕಾಂಗ್ರೆಸ್‍ಗೆ 6 ಸ್ಥಾನ ತುಂಬಲು ಹಾಗೂ ಜೆಡಿಎಸ್‍ಗೆ ಒಂದು ಸ್ಥಾನ ತುಂಬಲು ಅವಕಾಶವಿದೆ.

ರೆಡ್ಡಿ ಸಮುದಾಯದ ಪ್ರಮುಖ ನಾಯಕರೂ ಆಗಿರುವ ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಮಾಜಿ ವಸತಿ ಸಚಿವ ಎಂ.ಕೃಷ್ಣಪ್ಪ ಅವರು ತಮ್ಮ ಪ್ರಭಾವ ಬಳಸಿ ಲಾಬಿ ಆರಂಭಿಸಿದ್ದು, ಹೇಗಾದರೂ ಮಾಡಿ ಸಂಪುಟ ಸೇರಲು ಹರಸಾಹಸ ಪಡುತ್ತಿದ್ದಾರೆ. ಈ ಇಬ್ಬರು ನಾಯಕರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಕೋಟಾದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಆದರೆ ಇವರಿಬ್ಬರೂ ಪ್ರಭಾವಿ ನಾಯಕರಾಗಿರುವುದರಿಂದ ತಮ್ಮ ಗಾಡ್‍ಫಾದರ್‍ಗಳ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಎಂ. ಕೃಷ್ಣಪ್ಪ ಅವರು ಕಳೆದ ಸರ್ಕಾರದಲ್ಲಿ ಕೊನೆ ಹಂತದಲ್ಲಿ ಸಂಪುಟ ಸೇರಿದರು. ಆದರೆ, ರಾಮಲಿಂಗಾ ರೆಡ್ಡಿ ಪೂರ್ಣ ಐದು ವರ್ಷ ಸಂಪುಟದಲ್ಲಿ ಇದ್ದರು. ಆದ್ದರಿಂದ ಈ ಬಾರಿ ಎಂ.ಕೃಷ್ಣಪ್ಪ ಅವರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಅವರ ಪರವಾಗಿ ಲಾಬಿ ನಡೆಸುತ್ತಿರುವ ನಾಯಕರು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಅದೇ ರೀತಿ ಜೆಡಿಎಸ್‍ನಿಂದ ಗೋಪಾಲಯ್ಯ ಪ್ರಬಲ ಆಕಾಂಕ್ಷಿಯಾಗಿದ್ದು, ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಜೆಡಿಎಸ್‍ನಿಂದ ಯಾವುದೇ ಸಚಿವರು ಇಲ್ಲ.

ಈ ಭಾಗದಲ್ಲಿ ಪಕ್ಷವನ್ನು ಬೆಳೆಸಲು ಪಕ್ಷದ ಸಚಿವರೊಬ್ಬರು ಇರಬೇಕು. ಆದ್ದರಿಂದ ಸಚಿವ ಸ್ಥಾನ ತಮಗೆ ನೀಡಬೇಕು ಎಂದು ಗೋಪಾಲಯ್ಯ ಅವರು ಜೆಡಿಎಸ್ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಆದರೆ ಗೋಪಾಲಯ್ಯ ಅವರಿಗೆ ಸಚಿವ ಸ್ಥಾನ ನೀಡಿದರೆ ಸಚಿವ ಸ್ಥಾನ ವಂಚಿತ ಪಕ್ಷದ ಹಿರಿಯ ನಾಯಕರು ಅಸಮಾಧಾನಗೊಳ್ಳಬಹುದು ಎಂಬ ಆತಂಕದಿಂದ ಒಂದು ಸ್ಥಾನವನ್ನು ಭರ್ತಿ ಮಾಡದೆ ಖಾಲಿ ಇಟ್ಟುಕೊಳ್ಳಲು ಜೆಡಿಎಸ್ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬಿಬಿಎಂಪಿ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಮೇಯರ್ ಸ್ಥಾನಕ್ಕೆ ಗಂಗಾಂಬಿಕಾ ಅವರನ್ನು ಆಯ್ಕೆ ಮಾಡಲು ರಾಮಲಿಂಗಾ ರೆಡ್ಡಿ ಲಾಬಿ ನಡೆಸುತ್ತಿದ್ದಾರೆ. ಗಂಗಾಂಬಿಕಾ ಅವರನ್ನು ಮೇಯರ್ ಆಗಿ ಆಯ್ಕೆ ಮಾಡಿದರೆ ಸಂಪುಟದಲ್ಲಿ ಬೇರೆಯವರಿಗೆ ಅವಕಾಶ ನೀಡಬೇಕಾಗುತ್ತದೆ ಎಂಬ ಷರತ್ತನ್ನು ಕಾಂಗ್ರೆಸ್ ವರಿಷ್ಠರು ರಾಮಲಿಂಗಾ ರೆಡ್ಡಿ ಅವರ ಮುಂದೆ ಇಟ್ಟಿದ್ದಾರೆ. ಇದೀಗ ರಾಮಲಿಂಗಾ ರೆಡ್ಡಿ ಅವರು ಈ ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ.

ಆದರೆ ರಾಮಲಿಂಗಾ ರೆಡ್ಡಿ ಅವರು ಪಾಲಿಕೆಯಲ್ಲಿ ತಮ್ಮ ಆಪ್ತರಾದ ಗಂಗಾಂಬಿಕೆಯೂ ಇರಬೇಕು, ತಮಗೆ ಸಚಿವ ಸಂಪುಟದಲ್ಲಿ ಸ್ಥಾನವೂ ದೊರೆಯಬೇಕು ಎಂಬ ಬೇಡಿಕೆ ಇಟ್ಟಿದ್ದು, ಇದರಿಂದ ಕಾಂಗ್ರೆಸ್ ವರಿಷ್ಠರು ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ರೆಡ್ಡಿ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಈ ಮಧ್ಯೆ ರಾಮಲಿಂಗಾ ರೆಡ್ಡಿ ಅವರು ಸಂಪುಟ ಸೇರಿದರೆ ಬೆಂಗಳೂರು ನಗರ ಉಸ್ತುವಾರಿ ಖಾತೆಗೆ ಬೇಡಿಕೆ ಇಡುವ ಸಾಧ್ಯತೆ ಇರುವುದರಿಂದ ಪ್ರಸ್ತುತ ಈ ಖಾತೆಯನ್ನು ನಿಭಾಯಿಸುತ್ತಿರುವ ಗೃಹ ಸಚಿವರೂ ಆಗಿರುವ ಡಾ.ಜಿ.ಪರಮೇಶ್ವರ್ ಅವರು ರಾಮಲಿಂಗಾ ರೆಡ್ಡಿ ಸಂಪುಟ ಸೇರಲು ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

34 ಸದಸ್ಯ ಬಲದ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಅನಿವಾರ್ಯತೆ ಸರ್ಕಾರಕ್ಕಿದೆ. ಸದ್ಯದ ಲೆಕ್ಕಾಚಾರಗಳಂತೆ ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತ, ವಾಲ್ಮೀಕಿ ನಾಯಕ, ಕುರುಬ ಹಾಗೂ ಮುಸ್ಲಿಂ ಸಮುದಾಯಗಳಿಗೆ ಕನಿಷ್ಠ ಒಂದೊಂದು ಸ್ಥಾನ ಸಿಗುವ ನಿರೀಕ್ಷೆಯಿದೆ. ಒಕ್ಕಲಿಗ ಕೋಟಾದಲ್ಲಿ ಸಂಪುಟ ಸೇರಲು ಹೆಚ್ಚಿನ ಶಾಸಕರು ತುದಿಗಾಗಲ್ಲಿ ನಿಂತಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಅವಕಾಶ ನೀಡಲಾಗಿದೆ. ಆದ್ದರಿಂದ ಮತ್ತೆ ಒಕ್ಕಲಿಗ ಶಾಸಕರಿಗೆ ಅವಕಾಶ ನೀಡಬಾರದು ಎಂದು ಸರ್ಕಾರದಲ್ಲಿರುವ ಕೆಲವು ನಾಯಕರು ಅಡ್ಡಗಾಲು ಹಾಕುತ್ತಿರುವುದು ಕೂಡ ಬೆಳಕಿಗೆ ಬಂದಿದೆ. ಹೀಗಾದರೆ ರಾಮಲಿಂಗಾ ರೆಡ್ಡಿ ಹಾಗೂ ಎಂ.ಕೃಷ್ಣಪ್ಪ ಅವರ ಕನಸು ಈ ಬಾರಿ ನನಸಾಗುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಅಂತಿಮವಾಗಿ ಯಾರು ಇದರಲ್ಲಿ ಸಫಲರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Facebook Comments

Sri Raghav

Admin