ಲಕ್ಷ್ಮಿಯನ್ನು ಹದ್ದುಬಸ್ತಿನಲ್ಲಿಡುವಂತೆ ರಮೇಶ್ ಜಾರಕಿಹೊಳಿ ವಾರ್ನಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

Ramesh-Jarkihile--Lakshmi

ಬೆಳಗಾವಿ, ಸೆ.6- ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಚುನಾ ವಣಾ ಕದನ ತಾರಕಕ್ಕೇರಿದೆ.  ಶಾಸಕಿ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಹದ್ದುಬಸ್ತಿನಲ್ಲಿ ಡದಿದ್ದರೆ ನಾನು, ಸತೀಶ್ ಜಾರಕಿಹೊಳಿ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಿಎಲ್‍ಡಿ ಬ್ಯಾಂಕ್‍ನಲ್ಲಿ ಶಾಸಕ, ಸಹೋದರ ಸತೀಶ್ ಜಾರಕಿಹೊಳಿಗೆ ಅವಮಾನವಾದರೆ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ಅವರು 90 ಕೋಟಿ ರೂ. ಸಾಲ ನೀಡಿರುವ ಸುದ್ದಿ ಹರಿದಾಡುತ್ತಿರುವುದು ನಮಗೆ ದಿಗಿಲು ಬಡಿದಿದೆ. ಹೆಬ್ಬಾಳ್ಕರ್ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರು ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಊಹಿಸಿರಲಿಲ್ಲ. ಅವರನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದು ಸತೀಶ್ ಜಾರಕಿಹೊಳಿ. ನಾನು ಒಪ್ಪಿರಲಿಲ್ಲ.

ಅವರು ಅಷ್ಟೊಂದು ಸಾಲವನ್ನು ಜಾರಕಿಹೊಳಿ ಕುಟುಂಬದವರಿಗೆ ಕೊಡುತ್ತಾರೆ ಎಂದು ನಂಬಲು ಸಾಧ್ಯವೇ ಎಂದು ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ಉಪಕಾರ ಮಾಡಿದ್ದನ್ನು ಯಾರ ಮುಂದೆಯೂ ಹೇಳಬಾರದು. ಆದರೆ, ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಮಾತನಾಡಬೇಕಿದೆ. 2007-08ರಲ್ಲಿ ಗಾಡ್‍ಫಾದರ್ ಯಾರು ಇದ್ದಾರೋ ಗೊತ್ತಿಲ್ಲ. ಅವರ ತಂದೆಗೆ ಕ್ಯಾನ್ಸರ್ ಆದಾಗ ಹಣ ನೀಡಿದ್ದು ನಾನೇ. ಚನ್ನರಾಜ ಅಟ್ಟಿಹೊಳಿ ಹೈದರಾಬಾದ್ ವಿವಿಯಿಂದ ಹಣ ಇಲ್ಲದೆ ಹೊರಹಾಕಿದ್ದರು. ಆಗ ಸಹಾಯ ಮಾಡಿದ್ದು ನಾನು. ಅವರ ಪುತ್ರನ ಶಿಕ್ಷಣಕ್ಕೆ ಸಹಾಯ ಮಾಡಿದ್ದೆ. ಖಾನಾಪುರ ತಮ್ಮ ಗಂಡನ ಮನೆಯ ಮೇಲೆ ದಾಳಿಯಾಗಬೇಕಿತ್ತು. ಆಗಲೂ ಸಹಾಯ ಮಾಡಿದ್ದೆ. ಬೊಮ್ಮಾಯಿ, ಉಮೇಶ್‍ಕತ್ತಿ ಯಾರೂ ಇಷ್ಟೊಂದು ದ್ವೇಷದ ರಾಜಕಾರಣ ಮಾಡಿಲ್ಲ. ಹೆಬ್ಬಾಳ್ಕರ್ ಅವರು ಇಷ್ಟೊಂದು ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವರಿಗೆ ಕಾನೂನಿನ ಅರಿವಿಲ್ಲ. ಇವರು ಜಾರಕಿಹೊಳಿ ಕುಟುಂಬಕ್ಕೆ ಹಣ ನೀಡುವ ಅವಶ್ಯಕತೆಯಿಲ್ಲ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಇವರಿಗೆ ದೆಹಲಿ ದಾರಿ ತೋರಿಸಿದ್ದು ನಾನು. ಅನಗತ್ಯವಾಗಿ ನಮ್ಮ ಮೇಲೆ ಆರೋಪ ಮಾಡಿ ತೇಜೋವಧೆ ಮಾಡುತ್ತಿರುವ ಇವರನ್ನು ಹದ್ದುಬಸ್ತಿನಲ್ಲಿಡದಿದ್ದರೆ ಪಕ್ಷಕ್ಕೆ ಧಕ್ಕೆಯಾಗುತ್ತದೆ. ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನನಗ್ಯಾರು ಮಂತ್ರಿ ಮಾಡಿದ್ದರು ಎಂದು ಖಾನಾಪುರ ಶಾಸಕ ಅರವಿಂದ್ ಪಾಟೀಲ್ ಅವರನ್ನು ಕೇಳಿ. ಡಿ.ಕೆ.ಶಿವಕುಮಾರ್ ಅವರು ನನ್ನ ಆಪ್ತರು. ಡಿಕೆಶಿ ಮಂತ್ರಿ ಮಾಡಲು ನಾನೂ ಸಹಾಯ ಮಾಡಿದ್ದೆ. ನನ್ನ ಪರ ಅವರೂ ಬ್ಯಾಟಿಂಗ್ ಮಾಡಿದ್ದರು. ಅದು ಅವರ ಕರ್ತವ್ಯ ಎಂದರು. ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ 9 ನಿರ್ದೇಶಕರು ನಮ್ಮ ಜತೆ ಇದ್ದರು. ಆದರೆ, ಹೆಬ್ಬಾಳ್ಕರ್ ಅವರು ಕುದುರೆ ವ್ಯಾಪಾರ ನಡೆಸಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯಾರು, ಅವರ ಇತಿಹಾಸ ಏನು ಎಂಬುದನ್ನು ಮೊದಲು ತಿಳಿದುಕೊಳ್ಳಲಿ ಎಂದು ಹೇಳಿದರು. ಒಟ್ಟಾರೆ ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣಾ ಕದನ ಬೀದಿಗೆ ಬಂದಿದೆ. ನಾಳೆ ಸಂಜೆ 4 ಗಂಟೆಗೆ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಶೀತಲ ಸಮರ ಈಗ ಬಹಿರಂಗಗೊಂಡಿದೆ.

ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಹೈಕಮಾಂಡ್ ನಾಯಕರು ಬಿಕ್ಕಟ್ಟು ಶಮನಗೊಳಿಸುವ ಪ್ರಯತ್ನ ವಿಫಲಗೊಂಡಿದೆ. ನಾಳೆ ನಡೆಯಲಿರುವ ಚುನಾವಣೆ, ಪ್ರಕಟಗೊಳ್ಳಲಿರುವ ಫಲಿತಾಂಶ ರಾಜಕೀಯ ಸಂಚಲನ ಉಂಟುಮಾಡಲಿದೆ.   ಒಟ್ಟಾರೆ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಹೆಬ್ಬಾಳ್ಕರ್-ಜಾರಕಿಹೊಳಿ ಸಹೋದರರು ಯಾರ ಕೈ ಮೇಲಾಗಲಿದೆ ಎಂಬುದನ್ನು ಕಾದು ನೋಡಬೇಕು.

ಪಿಎಲ್‍ಡಿ ಬ್ಯಾಂಕ್ ಚುನಾವಣೆ ಸಂಬಂಧ ಕಳೆದ ಎರಡು ವಾರಗಳಿಂದ ಈ ಇಬ್ಬರ ನಡುವೆ ಶೀತಲ ಸಮರ ನಡೆದಿತ್ತು. ಕಾನೂನು ಹೋರಾಟ ನಡೆದು ಈ ಹೋರಾಟದಲ್ಲಿ ಜಾರಕಿಹೊಳಿ ಸಹೋದರರಿಗೆ ಹಿನ್ನಡೆಯಾಗಿತ್ತು. ಅಂದಿನಿಂದ ಕೆರಳಿ ಕೆಂಡವಾಗಿದ್ದ ಈ ಸಹೋದರರು ಹೆಬ್ಬಾಳ್ಕರ್ ಸೇರಿದಂತೆ ಹೈಕಮಾಂಡ್ ನಾಯಕರ ವಿರುದ್ಧವೂ ಮುಗಿಬಿದ್ದಿದ್ದರು. ಈಗ ಬೆಳಗಾವಿ ರಾಜಕಾರಣ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಯಾವ ತಿರುವು ಪಡೆದುಕೊಳ್ಳಲಿದೆಯೋ ಕಾದು ನೋಡಬೇಕು.

Facebook Comments

Sri Raghav

Admin