ಬೆಂಗಳೂರಿನ ರಾಜಾಜಿನಗರಲ್ಲಿ ಪತಿಯಿಂದ ಪತ್ನಿಯ ಬರ್ಬರ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Bengaluru--Murder--01

ಬೆಂಗಳೂರು, ಸೆ.6- ಪತ್ನಿಯನ್ನು ಪತಿಯೇ ಚಾಕುವಿನಿಂದ ಭೀಕರವಾಗಿ ಇರಿದು ಕೊಲೆ ಮಾಡಿ, ಶವವನ್ನು ಸಾಗಿಸಲು ಯತ್ನಿಸಿದ ಘಟನೆ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜಾಜಿನಗರದ 58ನೇ ಕ್ರಾಸ್, 3ನೇ ಬ್ಲಾಕ್‍ನ ರಾಮಮಂದಿರ ಸಮೀಪದ ನಿವಾಸಿ ಗೃಹಿಣಿ ಪ್ರೀತಿ (38) ಕೊಲೆಯಾದವರು. ಆರೋಪಿ ಪತಿ ಹಿರೇನ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಾಮಮಂದಿರದ ಸಮಿಪದ ಅಪಾರ್ಟ್‍ಮೆಂಟ್‍ವೊಂದರ ಒಂದನೇ ಮಹಡಿಯಲ್ಲಿ ವಾಸವಾಗಿದ್ದ ದಂಪತಿಗೆ ಪಿಯುಸಿ ಓದುತ್ತಿರುವ ಒಬ್ಬ ಪುತ್ರನಿದ್ದಾನೆ. ಆರೋಪಿ ಹಿರೇನ್ ಮೂಲತಃ ಗುಜರಾತ್‍ನವರು. ಕುರುಬರಹಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರೀತಿ ಮಹಾರಾಷ್ಟ್ರ ಮೂಲದವರು. ನಿನ್ನೆ ಮಧ್ಯಾಹ್ನ 12ರಿಂದ 1 ಗಂಟೆಯ ಮಧ್ಯೆ ಈ ಕೊಲೆ ನಡೆದಿದೆ. ದಂಪತಿಯ ಮಧ್ಯೆ ಯಾವುದೋ ವಿಚಾರಕ್ಕೆ ಜಗಳ ಉಂಟಾಗಿದೆ. ಜಗಳ ವಿಕೋಪಕ್ಕೆ ಹೋದಾಗ ಹಿರೇನ್ ಚಾಕುವಿನಿಂದ ಪತ್ನಿಯ ಕೈ ಹಾಗು ಕುತ್ತಿಗೆಗೆ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿ ಪ್ರೀತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಲೆ ಮಾಡಿದ ನಂತರ ಹಿರೇನ್ ರಾತ್ರಿ 10.30ರ ವೇಳೆಗೆ ಪತ್ನಿಯ ಮೃತದೇಹವನ್ನು ಬೇರೆಡೆ ಸಾಗಿಸಲು ಬೆಡ್‍ಶೀಟ್‍ವೊಂದರಲ್ಲಿ ಸುತ್ತಿ ಒಂದನೇ ಮಹಡಿಯಲ್ಲಿರುವ ತಮ್ಮ ಮನೆಯಿಂದ ಕಾರು ಪಾರ್ಕಿಂಗ್ ಮಾಡುವ ನೆಲಮಹಡಿಗೆ ತಂದಿದ್ದಾನೆ. ಆಗ ಅದನ್ನು ನೋಡಿದ ಅಪಾರ್ಟ್‍ಮೆಂಟ್‍ನ ಭದ್ರತಾ ಸಿಬ್ಬಂದಿಗೆ ಅನುಮಾನ ಬಂದಿದೆ. ಹತ್ತಿರ ಬಂದು ನೋಡಿದಾಗ ಬೆಡ್‍ಶೀಟ್‍ನಲ್ಲಿ ರಕ್ತ ಇರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣ ಅಪಾರ್ಟ್‍ಮೆಂಟ್‍ನ ನಿವಾಸಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿನ ನಿವಾಸಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ರಾಜಾಜಿನಗರ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿ ಹಿರೇನ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕಾರಣ ಬಹಳಷ್ಟು ನಿಗೂಢವಾಗಿದೆ. ದಂಪತಿ ಅನ್ಯೋನ್ಯವಾಗಿದ್ದರು ಎಂದು ಪ್ರೀತಿಯ ಸಂಬಂಧಿಕರು ತಿಳಿಸಿದ್ದಾರೆ. ಪ್ರೀತಿ ಅವರು ಕೊಲೆಯಾಗಿರುವ ಬಗ್ಗೆ ಮಹಾರಾಷ್ಟ್ರದಲ್ಲಿರುವ ಅವರ ಕುಟುಂಬದವರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಯಿಯ ಕೊಲೆಯ ಬಗ್ಗೆ ಮಗನನ್ನೂ ಸಹ ಪೊಲೀಸರು ವಿಚಾರಣೆಗೊಳಪಡಿಸಿ, ಕೆಲವು ಮಾಹಿತಿಗಳನ್ನು ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ಚೇತನ್ ಸಿಂಗ್ ರಾಥೋರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ರಾಜಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin