ಐಎಸ್‍ಎಸ್‍ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‍ಶಿಪ್’ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನ

ಈ ಸುದ್ದಿಯನ್ನು ಶೇರ್ ಮಾಡಿ

ಚಾಂಗ್‍ವೊನ್Shooting--01, ಸೆ.7-ದಕ್ಷಿಣ ಕೊರಿಯಾ ಚ್ಯಾಂಗ್‍ವೊನ್‍ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ(ಐಎಸ್‍ಎಸ್‍ಎಫ್) ಪಂದ್ಯಾವಳಿಯ ವಿಶ್ವಚಾಂಪಿಯನ್‍ಶಿಪ್‍ನಲ್ಲಿ ಭಾರತೀಯ ಶೂಟರ್‍ಗಳು ಹೊಸ ಹೊಸ ದಾಖಲೆಗಳೊಂದಿಗೆ ಪದಕಗಳ ಬೇಟೆ ಮುಂದುವರಿಸಿದ್ದಾರೆ. ಕಿರಿಯ ಶೂಟರ್‍ಗಳು ಇಂದು ಭಾರತಕ್ಕೆ ಮತ್ತೆರಡು ಚಿನ್ನದ ಪದಕಗಳನ್ನು ದಕ್ಕಿಸಿಕೊಟ್ಟಿದ್ದಾರೆ.

ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಕಿರಿಯ ಶೂಟರ್ ಹೃದಯ್ ಹಜಾರಿಕ(17) ಅವರು ಚಿನ್ನದ ಪದಕ ಸಾಧನೆಯೊಂದಿಗೆ ವಿಜೃಂಭಿಸಿದರು. ಇದೇ ವೇಳೆ ಭಾರತದ ಮಹಿಳೆಯರು ಕಿರಿಯರ ತಂಡ ಸ್ಫರ್ಧೆಯಲ್ಲಿ ಹೊಸ ವಿಶ್ವದಾಖಲೆಯೊಂದಿಗೆ ಬಂಗಾರ ಗೆದ್ದಿರುವುದು ಭಾರತಕ್ಕೆ ಡಬಲ್ ಧಮಾಕದ ಗರಿ.
ಐಎಸ್‍ಎಸ್‍ಎಫ್‍ನಲ್ಲಿ 627.3 ಸ್ಕೋರ್‍ಗಳೊಂದಿಗೆ ಪುರುಷರ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿದ್ದ ಹೃದಯ್, ಇರಾನ್‍ನ ಮಹಮದ್ ಅಮೀರ್ ನೆಕೌನಾಮ್ ಅವರೊಂದಿಗೆ 250.1ರಲ್ಲಿ ಸಮಬಲ ಸಾಧಿಸಿದ್ದರು.

ಎಂಟು ಸ್ಪರ್ಧಿಗಳಲ್ಲಿ ಚಿನ್ನದ ಪದಕಕ್ಕೆ ಇವರಿಬ್ಬರು ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಶೂಟ್-ಆಫ್ ಅರ್ಹತೆ ಮೇರೆಗೆ ಹೃದಯ್‍ಗೆ ಬಂಗಾರ ಒಲಿಯಿತು. ಮಹಮದ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ರಷ್ಯಾದ ಗ್ರೆಗೊರಿ ಶಾಮಕೊವ್ ಕಂಚು ಗೆದ್ದರು. ಮಹಿಳೆಯರ 10 ಮೀಟರ್ ಏರ್ ರೈಫಲ್ ಟೀಮ್ ಇವೆಂಟ್‍ನಲ್ಲಿ ಭಾರತದ ಎಳಾವೆನಿಲ್ ವಲರಿಯನ್(631 ಸ್ಕೋರ್), ಶ್ರೇಯಾ ಅಗರ್‍ವಾಲ್(628.5) ಹಾಘೂ ಮಾನಿನಿ ಕೌಶಿಕ್(621.2) ಅವರನ್ನು ಒಳಗೊಂಡ ತಂಡ ಒಟ್ಟು 1880.7 ಸ್ಕೋರ್‍ಗಳ ವಿಶ್ವದಾಖಲೆಯೊಂದಿಗೆ ಸ್ವರ್ಣ ಪದಕಕ್ಕೆ ಮುತ್ತಿಟ್ಟರು. ಅಲ್ಲದೇ ಜ್ಯೂನಿಯರ್ ವಿಶ್ವಕಪ್ ಪ್ರಶಸ್ತಿ ವಿಜೇತೆ ಎಳಾವೆನಿಲ್ ವಲರಿಯನ್ ನೂತನ ಜ್ಯೂನಿಯರ್ ವಿಶ್ವ ದಾಖಲೆಗೂ ಪಾತ್ರರಾಗಿದ್ದಾರೆ.

ನಿನ್ನೆ 10 ಮೀಟರ್ ಏರ್ ರೈಫಲ್ ಕಿರಿಯರ ಸ್ಫರ್ಧೆಯಲ್ಲಿ ಏಷ್ಯನ್ ಗೇಮ್ಸ್‍ನ ಬಂಗಾರದ ಪದಕ ವಿಜೇತ ಸೌರಭ ಚೌಧರಿ ಹೊಸ ವಿಶ್ವ ದಾಖಲೆ ಸಾಧನೆಯೊಂದಿಗೆ(ಫೈನಲ್‍ನಲ್ಲಿ 245.5 ಸ್ಕೋರ್) ಚಿನ್ನದ ಪದಕ ಗೆದ್ದರು. ಇದೇ ಸ್ಪರ್ಧೆಯಲ್ಲಿ ಅರ್ಜುನ್ ಸಿಂಗ್ ಚೀಮಾ ಕಂಚು ಗೆದ್ದು ಭಾರತದ ಹೆಮ್ಮೆಯನ್ನು ದ್ವಿಗುಣಗೊಳಿಸಿದ್ದರು. ಪುರುಷರ ಜ್ಯೂನಿಯರ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಅಮನ್ ಅಲಿ ಎಲಾಹಿ, ವಿವಾನ್ ಕಪೂರ್ ಮತ್ತು ಮಾನವಾಧಿತಯ್ ಸಿಂಗ್ ರಾಥೋಡ್ ಅವರನ್ನು ಒಳಗೊಂಡ ತಂಡ ಬೆಳ್ಳಿ ಗೆದ್ದು ಸಂಭ್ರಮಿಸಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin