ಯಡಿಯೂರಪ್ಪ ದೆಹಲಿಗೆ, ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತು ವರಿಷ್ಠರ ಜೊತೆ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01

ಬೆಂಗಳೂರು,ಸೆ.7- ಮುಂಬರುವ ಲೋಕಸಭೆ ಚುನಾವಣೆ ಪೂರ್ವ ಸಿದ್ಧತೆ ಹಾಗೂ ಇತ್ತೀಚೆಗೆ ನಡೆದ ನಗರಸ್ಥಳೀಯ ಸಂಸ್ಥೆಯ ಚುನಾವಣೆಯ ಫಲಿತಾಂಶ ಸೇರಿದಂತೆ ಪಕ್ಷದೊಳಗಿನ ಬೆಳವಣಿಗೆ ಕುರಿತಂತೆ ಚರ್ಚಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದಾರೆ. ನಾಳೆಯಿಂದ ನವದೆಹಲಿಯಲ್ಲಿ ಎರಡು ದಿನಗಳ ಕಾಲ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಲಿರುವ ಯಡಿಯೂರಪ್ಪ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಸಾಧನೆ ಕುರಿತಂತೆ ವರದಿ ನೀಡಲಿದ್ದಾರೆ.

ಇದೇ ವೇಳೆ 2019ರ ಲೋಕಸಭೆ ಚುನಾವಣೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ, ಹಾಲಿ ಸದಸ್ಯರಿಗೆ ಟಿಕೆಟ್ ನೀಡುವುದು ಹಾಗೂ ಚುನಾವಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ಜೊತೆ ಬಿಎಸ್‍ವೈ ಚರ್ಚೆ ಮಾಡಲಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಬಿಜೆಪಿ ಮತ್ತೆ ಅಧಿಕಾರ ರಚನೆ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಬಿಎಸ್‍ವೈ ಅವರ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ.

ಮೇಲ್ನೋಟಕ್ಕೆ ಇದೊಂದು ಪೂರ್ವ ನಿಗದಿ ಕಾರ್ಯಕ್ರಮ ಎಂದು ಹೇಳಲಾಗುತ್ತಿದ್ದರೂ ಸಮ್ಮಿಶ್ರ ಸರ್ಕಾರದೊಳಗೆ ಉಂಟಾಗಿರುವ ಪಿಎಲ್‍ಡಿ ಬ್ಯಾಂಕ್ ಕದನ, ಯಡಿಯೂರಪ್ಪ ದೆಹಲಿ ಭೇಟಿ ಕಾಕತಾಳೀಯ ಎಂಬಂತೆ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಇತ್ತೀಚೆಗೆ ಪ್ರಕಟಗೊಂಡ ನಗರಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡದಿದ್ದರೂ ಫಲಿತಾಂಶ ಅಷ್ಟೊಂದು ಕಳಪೆಯಾಗಿರಲಿಲ್ಲ.

ನಗರಸಭೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ ಪಟ್ಟಣ ಪಂಚಾಯ್ತಿ ಹಾಗೂ ಪುರಸಭೆಗಳಲ್ಲಿ 2ನೇ ಸ್ಥಾನ ಪಡೆದುಕೊಂಡಿತ್ತು. ಇನ್ನು ಮೂರು ಮಹಾನಗರಗಳ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿದಿದೆ. ತುಮಕೂರು ಮತ್ತು ಮೈಸೂರಿನಲ್ಲಿ ಅಧಿಕಾರ ಹಿಡಿಯದಿದ್ದರೂ ಒಟ್ಟಾರೆ ಸ್ಥಾನ ಗಳಿಕೆಯಲ್ಲಿ ಪಕ್ಷ ಮೊದಲ ಸ್ಥಾನ ಗಳಿಸಿತ್ತು. ಇದೆಲ್ಲವನ್ನು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ಯಡಿಯೂರಪ್ಪ ತರಲಿದ್ದಾರೆ ಎಂದು ತಿಳಿದುಬಂದಿದೆ.

ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾದರೆ ಕನಿಷ್ಟ ಪಕ್ಷ 20 ಸ್ಥಾನಗಳನ್ನಾದರೂ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಪ್ರತಿಯೊಂದು ಕ್ಷೇತ್ರಕ್ಕೂ ಸಾಕಷ್ಟು ಅಳೆದುತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಚಿತ್ತಹರಿಸಿದೆ. ಲೋಕಸಭೆ ಚುನಾವಣೆಗೆ ಯಾವ ರೀತಿಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು, ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದರೂ ಅದನ್ನು ಮೆಟ್ಟಿ ಹೆಚ್ಚಿನ ಸ್ಥಾನಗಳಿಸಲು ತೆಗೆದುಕೊಳ್ಳಬೇಕಾದ ಪ್ರಮುಖ ತೀರ್ಮಾನಗಳ ಬಗ್ಗೆ ಚರ್ಚೆ ನಡೆಯಲಿದೆ.  ಒಟ್ಟಾರೆ ಯಡಿಯೂರಪ್ಪನವರ ದೆಹಲಿ ಭೇಟಿ ಕೇವಲ ಬಿಜೆಪಿ ವಲಯದಲ್ಲಿ ಮಾತ್ರವಲ್ಲದೆ ಆಡಳಿತಾರೂಢ ಪಕ್ಷಗಳ ಪ್ರಮುಖರು ಕೂಡ ಕುತೂಹಲದಿಂದ ನೋಡುತ್ತಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin