ನಿಮ್ಮ ದೇಹದಲ್ಲಿ ಈ ಲಕ್ಷಣಗಳಿವೆಯೇ..? ಹಾಗಾದರೆ ಅದು ಇಲಿಜ್ವರ ಇರಬಹುದು ಎಚ್ಚರಿಕೆ…!

ಈ ಸುದ್ದಿಯನ್ನು ಶೇರ್ ಮಾಡಿ

Fever--01

ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಇಲಿಜ್ವರದ ಬಗ್ಗೆ ಜನರು ಜಾಗೃತರಾಗಿರಬೇಕಿದೆ. ಇಲಿಜ್ವರದ ರೋಗಾಣುವು ಇಲಿ, ಹೆಗ್ಗಣ, ಬೆಕ್ಕು, ನಾಯಿ, ಆಡು, ದನ, ಕುದುರೆ ಮುಂತಾದ ಪ್ರಾಣಿಗಳ ದೇಹದಲ್ಲಿದ್ದು, ಸೋಂಕು ಹೊಂದಿರುವ ಇಂತಹ ಪ್ರಾಣಿಗಳ ಮೂತ್ರವಿಸರ್ಜನೆಯು ನೀರಿನಲ್ಲಿ ಸೇರಿ ನೀರನ್ನು ಕಲುಷಿತಗೊಳಿಸುತ್ತದೆ.  ಈ ಕಲುಷಿತ ನೀರು ಮನುಷ್ಯನ ಚರ್ಮದಲ್ಲಿನ ಒಡಕು/ಗಾಯಗಳ ಮೂಲಕ ದೇಹವನ್ನು ಪ್ರವೇಶಿಸಿ, ರಕ್ತದ ಮೂಲಕ ಮೆದುಳು, ಯಕೃತ್ತು, ಶ್ವಾಸಕೋಶ, ಹೃದಯ ಹಾಗೂ ಮೂತ್ರಜನಕಾಂಗಗಳಲ್ಲಿ ಶೇಖರಣೆಗೊಂಡು ಇಲಿಜ್ವರಕ್ಕೆ ಕಾರಣವಾಗುತ್ತದೆ.

ರೋಗ ಲಕ್ಷಣಗಳು:

ಜ್ವರ, ತಲೆನೋವು, ಮಾಂಸ ಖಂಡಗಳ ನೋವು ಮತ್ತು ಮೈ-ಕೈ ನೋವು. ವಾಂತಿ, ಭೇದಿ ಮತ್ತು ಹೊಟ್ಟೆನೋವು. ಪಿತ್ತ ಕಾಮಾಲೆ (ಜಾಂಡೀಸ್). ಬಾಯಿ, ಮೂಗು, ಕಫದಲ್ಲಿ ರಕ್ತಸ್ರಾವ. ಹೃದಯದ ಸೋಂಕು. ಮೂತ್ರಪಿಂಡ ಸೋಂಕಿನಿಂದಾಗಿ ಮೂತ್ರ ವಿಸರ್ಜನೆಯ ಪ್ರಮಾಣ ಕಡಿಮೆಯಾಗುವುದು/ನಿಂತು ಹೋಗುವುದು. ಇತ್ಯಾದಿ ಈ ಜ್ವರದ ಲಕ್ಷಣಗಳು. ಬ್ಯಾಕ್ಟೀರಿಯ ದೇಹವನ್ನು ಸೇರುವ ವಿಧಾನ: ಚರ್ಮದಲ್ಲಿ ತರಚು ಗಾಯಗಳಾಗಿದ್ದಲ್ಲಿ ಅಥವಾ ಕಣ್ಣಿಗೆ ಕಾಣಿಸದ ಸಂದುಗಳ ಮೂಲಕ ಈ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸುತ್ತವೆ.

ಕಲುಷಿತ ನೀರಿನ ಸಂಪರ್ಕದಿಂದ ಈ ರೋಗ ಶೀಘ್ರವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮಗಳು: ನೀರಿನ ಸಂರಕ್ಷಣೆ ಅತಿ ಅಗತ್ಯ. ಸ್ನಾನ ಮತ್ತು ಕುಡಿಯಲು ಉಪಯೋಗಿಸುವ ನೀರಿನಲ್ಲಿ ಪ್ರಾಣಿಗಳ ಮೂತ್ರ ಸೇರದಂತೆ ನೀರು ಸಂಗ್ರಹಿಸುವ ತೊಟ್ಟಿಗಳಿಗೆ ಭದ್ರವಾಗಿ ಮುಚ್ಚಳ ಹಾಕಬೇಕು. ಪ್ರಾಣಿಗಳಲ್ಲಿ ಈ ರೋಗ ಹರಡುವ ರೋಗಾಣು ಗಳು ಇರುವ ಸಾಧ್ಯತೆ ಇರುವುದರಿಂದ ಕೊಳ, ಹೊಂಡ ಹಾಗೂ ನಿಂತ ನೀರಿನಲ್ಲಿ ಸ್ನಾನ ಮಾಡಬಾರದು ಹಾಗೂ ಕುಡಿಯಬಾರದು. ಇಂತಹ ಪ್ರಾಣಿಗಳ ವಾಸಸ್ಥಳಗಳಲ್ಲಿ ಬರಿಗಾಲಿನಲ್ಲಿ ಓಡಾಡದೆ ಚಪ್ಪಲಿ/ಕಾಲುಚೀಲಗಳನ್ನು ಧರಿಸಿ ನಡೆಯುವುದು ಸೂಕ್ತ. ಆಹಾರ ಪದಾರ್ಥಗಳು, ಹಣ್ಣು-ತರಕಾರಿ ಇತ್ಯಾದಿ ಇಲಿಗಳಿಗೆ ಸಿಗದಂತೆ ನೋಡಿಕೊಳ್ಳಬೇಕು.

rat-Fevar

ಮನೆ, ಗೋದಾಮು, ಅಂಗಡಿ, ಚರಂಡಿ ಮತ್ತು ಹೊಲ-ಗದ್ದೆ ಪರಿಸರದಲ್ಲಿ ಇಲಿಗಳು ವಾಸ ಮಾಡದಂತೆ ಹಾಗೂ ಸಂತಾನ ವೃದ್ಧಿಯಾಗದಂತೆ ಭದ್ರ ಮಾಡಬೇಕು. ವೈಯಕ್ತಿಕ ಸ್ವಚ್ಛತೆ ಹಾಗೂ ಪರಿಸರ ನೈರ್ಮಲ್ಯದಿಂದ ರೋಗ ಹರಡುವುದನ್ನು ತಡೆಗಟ್ಟಬೇಕು. ಕೃಷಿಕರು, ಕೂಲಿ ಕಾರ್ಮಿಕರು, ಗಣಿ ಕೆಲಸಗಾರರು, ಕಸಾಯಿಖಾನೆ ಕೆಲಸಗಾರರು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರು, ಪೌರ ಕಾರ್ಮಿಕರು ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ಇವರುಗಳು ಜಾಗ್ರತೆ ವಹಿಸಬೇಕು.

ಚಿಕಿತ್ಸೆ: ಇಲಿ ಜ್ವರಕ್ಕೆ ನಿರ್ದಿಷ್ಟ ಔಷಧಿ ಮತ್ತು ಚಿಕಿತ್ಸೆ ಲಭ್ಯವಿದೆ. ಶೀಘ್ರ ಪತ್ತೆ ಮತ್ತು ಕ್ರಮಬದ್ಧವಾದ ಚಿಕಿತ್ಸೆಯಿಂದ ರೋಗವನ್ನು ಸಂಪೂರ್ಣ ಗುಣಪಡಿಸಬಹುದಾಗಿದೆ. ರೋಗಿಯನ್ನು ಇತರರಿಂದ ಪ್ರತ್ಯೇಕಿಸುವ ಅಗತ್ಯವಿಲ್ಲ.

ಸೇವಾ ಸೌಲಭ್ಯಗಳು: ಜಿಲ್ಲೆ ಎಲ್ಲ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಔಷಧಿಗಳು ಲಭ್ಯವಿದ್ದು, ಸಾರ್ವಜನಿಕರು ಈ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Facebook Comments

Sri Raghav

Admin