ಲಕ್ಷ್ಮಿ ಹೆಬ್ಬಾಳ್ಕರ್- ಜಾರಕಿಹೊಳಿ ಸಹೋದರರ ನಡುವೆ ಪಿಎಲ್‌ಡಿ ಫೈಟ್, ಯಾರ ‘ಕೈ’ ಮೇಲಾಗುತ್ತೆ..?

ಈ ಸುದ್ದಿಯನ್ನು ಶೇರ್ ಮಾಡಿ

Belagavi-Polirtics

ಬೆಳಗಾವಿ. ಸೆ. 07 : ಇಂದು ಜಿಲ್ಲೆಯ ಪಿಎಲ್‍ಡಿ ಬ್ಯಾಂಕ್‍ಗೆ ಚುನಾವಣೆ ನಡೆಯಲಿದೆ. ಸಮ್ಮಿಶ್ರ ಸರ್ಕಾರಕ್ಕೂ ಇಂದೇ ನಿರ್ಣಾಯಕ ದಿನವಾಗಿದ್ದು, ಲಕ್ಷ್ಮಿ ಗೆದ್ದರೆ ಕುಮಾರಸ್ವಾಮಿ ಆಡಳಿತಕ್ಕೆ ಕೊನೆಗಾಲ ಎದುರಾಗ್ತಿದೆಯಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಇಂದಿನ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಕುತೂಹಲ ಕೆರಳಿಸಿದ್ದು, ಜಾರಕಿಹೊಳಿ ಬ್ರದರ್ಸ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಸಮರ ಕ್ಲೈಮ್ಯಾಕ್ಸ್ ತಲುಪಿದೆ. 9 ಜನ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರನ್ನು ಹೊಂದಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗರನ್ನೇ ಕೂರಿಸಲು ಹಠ ಹಿಡಿದಿದ್ದಾರೆ. ಎಲ್ಲ ಬೆಂಬಲಿತ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರಿಗೆ ಪೊಲೀಸ್ ರಕ್ಷಣೆಗೆ ಮನವಿ ಮಾಡಿಕೊಂಡಿದ್ದಾರೆ.

ಚುನಾವಣೆ ಪ್ರಕ್ರಿಯೆಯನ್ನು ವಿಡಿಯೋ ಚಿತ್ರಣ ಮಾಡಿಸಬೇಕೆಂದು ಜಿಲ್ಲಾಡಳಿತಕ್ಕೆ ಬೇಡಿಕೆ ಇಡಲಾಗಿದ್ದು, ಈಗಾಗಲೇ ಹೆಬ್ಬಾಳ್ಕರ್ ಬಣಕ್ಕೆ ನಾಮನಿರ್ದೇಶಿತ ಸದಸ್ಯ ಮಹಾದೇವ್ ಪಾಟೀಲ್ ಬೆಂಬಲ ಸೂಚಿಸಿದ್ದಾರೆ. ಇತ್ತ ಜಾರಕಿಹೊಳಿ ಸಹೋದರರು ತಮ್ಮದೇ ದಾಳ ಉರುಳಿಸಿದ್ದು, ಕಾನೂನು ಸುವ್ಯವಸ್ಥೆ ಹಾಳಾಗಬಹುದು. ಚುನಾವಣೆಯನ್ನೇ ಮುಂದೂಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಬೆಂಬಲಿಗರನ್ನು ತಮ್ಮ ಬಳಿಯೇ ಉಳಿಸಿಕೊಂಡು ನೇರವಾಗಿ ಚುನಾವಣಾ ಸ್ಥಳಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಗೆಲುವಿಗಾಗಿ ಎರಡು ಬಣದಿಂದ ಕೊನೆಗಳಿಗೆವರೆಗೆ ಶತ ಪ್ರಯತ್ನ ನಡೆಯಲಿದೆ.

ಮಹಾರಾಷ್ಟ್ರದ ಅಂಬೋಲಿ ಬಳಿಯ ರೆಸಾರ್ಟ್ ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪಟಾಲಂ ಬೀಡುಬಿಟ್ಟಿದೆ. ಇಂದು ಬೆಳಗ್ಗೆ ಸದಸ್ಯರು ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ಬಳಿಕ ಬ್ಯಾಂಕ್‍ಗೆ ಆಗಮಿಸಲಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಸಂಪರ್ಕದಲ್ಲಿರುವ ಸದಸ್ಯರು ಬೇರೆ ಯಾರ ಸಂಪರ್ಕಕ್ಕೂ ಬಂದಿಲ್ಲ ಅನ್ನೋ ಮಾಹಿತಿ ಈ ಸಂಜೆಗೆ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಎಷ್ಟೇ ಎದುರಾಳಿಗಳು ಬಂದ್ರೂ ಕೂಡ ಮೆಟ್ಟಿ ನಿಂತಾಗ ಮಾತ್ರ ನಾಯಕರಾಗಲು ಸಾಧ್ಯ ಅಂತ ಬೆಳಗಾವಿ ಜಾರಕಿಹೊಳಿ ಬ್ರದರ್ಸ್ ವಿರುದ್ಧ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗುಡುಗಿದ್ದಾರೆ. ರಾಜಕೀಯದಲ್ಲಿ ಇದೆಲ್ಲಾ ಸಹಜ, ಕಷ್ಟ ಬಂದಾಗ ಹೋರಾಟ ಮಾಡ್ಬೇಕು. ಒಂದೇ ಒಂದು ಹೆಜ್ಜೆ ಹಿಂದೆ ಇಡಲ್ಲ. ಏನೇ ಪರಿಸ್ಥಿತಿ ಬರಲಿ ಏನು ಬೇಕಾದ್ರೂ ಆಗ್ಲಿ. ಸಮಾಜದಲ್ಲಿ ಶಿಕ್ಷಕರಿಗೆ ಹೆದರಿದಷ್ಟು ಬೇರೆ ಯಾರಿಗೂ ಹೆದರಿಲ್ಲ. ಶಿಕ್ಷಕರ ಎದುರು ನಾನು ನಡುಗುತ್ತಿದ್ದೆ. ಇಂದು ಇಡೀ ಸಭಾಂಗಣವನ್ನೇ ನಡುಗಿಸುತ್ತೇನೆ. ನನಗೆ ಬೆಂಬಲ ಇದೆ. ಗೆಲುವು ನನ್ನದೇ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ
# ಕುತೂಹಲ ಸೃಷ್ಟಿಸಿದ ಚುನಾವಣೆ:

ಬೆಳಗಾವಿಯ ಪ್ರಭಾವಿ ರಾಜಕೀಯ ನಾಯಕರಾದ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ತೀವ್ರ ಪೈಪೋಟಿಯಿಂದ ಪಿಎಲ್ಡಿ ಬ್ಯಾಂಕ್ ಚುನಾವಣೆ ಕೂಡ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ. ಈ ಎರಡು ಬಣಗಳ ಕಾರಣದಿಂದ ಇಡೀ ರಾಜ್ಯದ ಜನರು ಅತ್ತ ಗಮನಹರಿಸುವಂತಾಗಿದೆ. ರಾಜ್ಯ ರಾಜಕಾರಣದಲ್ಲಿಯೂ ಈ ಚುನಾವಣೆ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಸೋತರೆ ಉಗ್ರ ತೀರ್ಮಾನಕ್ಕೆ ಸಿದ್ಧ ಎಂದು ಈಗಾಗಲೇ ಜಾರಕಿಹೊಳಿ ಸಹೋದರರು ಘೋಷಿಸಿದ್ದಾರೆ. ಈ ಮೂಲಕ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಈ ಚುನಾವಣೆಯಿಂದ ಶಾಕ್ ಸಿಗಲಿದೆಯಾ ಎಂಬುದು ಇಂದು ಸಂಜೆಯೊಳಗೆ ಗೊತ್ತಾಗಲಿದೆ.

ಬೆಳಗ್ಗೆ 10ರಿಂದ 11ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಮಧ್ಯಾಹ್ನ 1ರಿಂದ 1.20ರ ವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮಧ್ಯಾಹ್ನ 1.20ರಿಂದ 1.50ರ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. 1.50ರ ನಂತರ ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದವರ ಪ್ರಕಟಣೆ ಮಾಡಲಾಗುವುದು. 2 ಗಂಟೆಗೆ ಗುಪ್ತ ಮತದಾನ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಲಿದೆ.

# ನಿಷೇದಾಜ್ಞೆ ಜಾರಿ:
ಬೆಳಗಾವಿಯಲ್ಲಿ ಪಿಎಲ್ಡಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ನಗರ ಪೋಲಿಸ್‌ ಆಯುಕ್ತ ಡಾ.ಡಿ.ಸಿ. ರಾಜಪ್ಪ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಕಪಿಲೇಶ್ವರ ದೇವಸ್ಥಾನದ ರೈಲ್ವೆ ಓವರ್‌ ಬ್ರಿಡ್ಜ್‌ನಿಂದ ಮಾಣಿಕಭಾಗ, ಹಳೆ ಪಿ.ಬಿ. ರಸ್ತೆ, ಮಹಾದ್ವಾರ ರಸ್ತೆ ರೈಲ್ವೆ ಓವರ್‌ ಬ್ರಿಡ್ಜ್‌ವರೆಗೆ ಮತ್ತು ರಸ್ತೆಯ ಸುತ್ತಮುತ್ತಲಿನ 50 ಮೀಟರ್‌ ವ್ಯಾಪ್ತಿ, ತಹಸೀಲ್ದಾರ ಕಚೇರಿಯ ಸುತ್ತಮುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ಬೆಳಗ್ಗೆ 6 ಗಂಟೆಯಿಂದ ಸೆ.8ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬೆಳಗಾವಿಯ ಪಿಎಲ್ಡಿ ಬ್ಯಾಂಕ್ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಿದ್ದು, 200 ಪೋಲಿಸ್ ಸಿಬ್ಬಂದಿ, 4 ಡಿಆರ್, 2 ಕೆಎಸ್ಆರ್ಪಿ ತುಕಡಿ ನಿಯೋಜನೆ‌ ಮಾಡಲಾಗಿದೆ. ಡಿಎಸ್ಪಿ ಬಾಲಚಂದ್ರ ಶಿಂಗ್ಯಾಗೋಳ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

# ಈಶ್ವರ ಖಂಡ್ರೆ ರಾಜಿ ಪಂಚಾಯ್ತಿ:
ಜಾರಕಿಹೊಳಿ ಬ್ರದರ್ಸ್ ಹಾಗೂ ಹೆಬ್ಬಾಳ್ಕರ್ ನಡುವೆ ಕದನ ವಿಚಾರವಾಗಿ ಬೆಳಗಾವಿಗೆ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿ ನೀಡಲಿದ್ದಾರೆ. ಖುದ್ದು ಭೇಟಿ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಖಂಡ್ರೆ ಬೆಳಗಾವಿಗೆ ಧಾವಿಸಿ, ರಾಜಿ ಪಂಚಾಯತಿ ಮಾಡಲಿದ್ದಾರೆ. ಪಿಎಲ್ಡಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಮಯಕ್ಕೂ ಮೊದಲೇ ಸಚಿವ ರಮೇಶ ಜಾರಕಿಹೊಳಿ, ಶಾಸಕ ಸತೀಶ ಜಾರಕಿಹೊಳಿ ಹಾಗೂ ಶಾಸಕಿ ಹೆಬ್ಬಾಳ್ಕರ್ ಜತೆಗೆ ಖಂಡ್ರೆ ಮಾತುಕತೆ ನಡೆಸಲಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್ ಬಣದಲ್ಲಿ ಯಾರ್ಯಾರು ಇದ್ದಾರೆ?
ಲಕ್ಷ್ಮಿ ಹೆಬ್ಬಾಳ್ಕರ್ ಬಣ :
1. ಮಹಾಂತೇಶ ಪಾಟೀಲ್
2. ಮುಷಪ್ಪ ಹಟ್ಟಿ
3. ಬಾಪುಸಾಹೇಬ್ ಜಮಾದಾರ್
4. ಚಿದಂಬರ ಕುಡಚಿ
5. ಬಾಪುಗೌಡ ಪಾಟೀಲ್
6. ಪರುಶರಾಮ ಪಾಟೀಲ್
7. ಮಹಾದೇವ ಪಾಟೀಲ್
8. ರೇಖಾ ಕುತ್ರೆ
9. ಗೀತಾ ಪಿಂಗಟ್

ಸತೀಶ ಜಾರಕಿಹೊಳಿ ಬಣ :
1. ರಾಮಪ್ಪ ಗೋಳಿ
2. ಪ್ರಸಾದ ಪಾಟೀಲ
3. ಸಚಿನ್ ಕೋಲಾರ
4. ಶಂಕರ್ ನಾವಗೇಕರ್
5. ಮಹಾಂತೇಶ್ ಉಳ್ಳಾಗಡ್ಡಿ

Facebook Comments

Sri Raghav

Admin