ಕರ್ನಾಟಕ ಚಲನಚಿತ್ರ ಕಪ್‍ಗೆ ಕ್ಷಣಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

KCC-Cup

ಚಿತ್ರರಂಗದ ವತಿಯಿಂದ ಸಿನಿಮಾ ಹಾಗೂ ಕ್ರಿಕೆಟ್ ಪ್ರಿಯರಿಗಾಗಿ ಕರ್ನಾಟಕ ಚಲನಚಿತ್ರ ಕಪ್ ರಂಗು ಪಡೆದುಕೊಂಡಿದೆ. ವಿಜಯನಗರ ಪೇಟ್ರಿಯಟ್ಸ್ ತಂಡಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಹೊಯ್ಸಳ ಈಗಲ್ಸ್ ಗೆ ಉಪೇಂದ್ರ, ಕದಂಬ ಲಯನ್ಸ್‍ಗೆ ಸುದೀಪ್, ಗಂಗಾ ವಾರಿಯಸ್ರ್ಸ್‍ಗೆ ಪುನೀತ್‍ರಾಜ್‍ಕುಮಾರ್, ರಾಷ್ಟ್ರಕೂಟ ಪ್ಯಾಂಥರ್ಸ್‍ಗೆ ಯಶ್ ಮತ್ತು ಒಡೆಯರ್ ಚಾಲೆಂಜರ್ಸ್‍ಗೆ ಗಣೇಶ್ ಕ್ಯಾಪ್ಟನ್ ಹುದ್ದೆಯನ್ನು ಅಲಂಕರಿಸಿದ್ದಾರೆ. ತಲಾ ಒಂದೊಂದು ತಂಡದಲ್ಲಿ ಪ್ರಪಂಚದಾದ್ಯಂತ ಹೆಸರು ಮಾಡಿರುವ ಮಾಜಿ ಆಟಗಾರರಾದ ವೀರೇಂದ್ರಸೆಹ್ವಾಗ್, ಹರ್ಷಲ್ ಗಿಬ್ಸ್, ತಿಲಕರತ್ನೆ ದಿಲ್ಷಾನ್, ಆ್ಯಡಂಗಿಲ್ ಕ್ರಿಸ್ಟ್, ಲ್ಯಾನ್ಸ್ ಕ್ಲೂಸ್ನರ್, ಹಾಗೂ ಓವೈಷಾ ಆಡಲಿರುವುದು ಹೈಲೈಟ್ ಆಗಿದೆ.

ಟಿಕೆಟ್ ಹಣವನ್ನು ಕೊಡಗು ಪೀಡಿತ ಜನರಿಗೆ ನೆರವು ನೀಡಲಾಗುವುದೆಂದು ನಟ ಸುದೀಪ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಾಧ್ಯಮದವರೊಂದಿಗೆ ಮಾತನಾಡುತ್ತಾ , ಪಂದ್ಯದ ವಿವರಣೆ, ವಿಷಯಗಳನ್ನು ಹೇಳಲು ತಂಡದೊಂದಿಗೆ ಹಾಜರಿದ್ದರು. ಕನ್ನಡ ಚಿತ್ರಗಳನ್ನು ಕಾರ್ಮಿಕರು, ಆಟೋ ಚಾಲಕರು ನೋಡುತ್ತಾರೆ. ಇವರುಗಳಿಗೆ ಪಂದ್ಯ ವೀಕ್ಷಿಸಲು ಅನುಕೂಲವಾಗುವಂತೆ ಎರಡು ದಿನದ ಪಂದ್ಯಗಳಿಗೆ ಸೇರಿಕೊಂಡು ರೂ.50 ಟಿಕೆಟ್ ದರ ನಿಗದಿಪಡಿಸಲಾಗಿದೆ.
ಕಲರ್ಸ್ ಸೂಪರ್ ವಾಹಿನಿಯವರು ನೇರ ಪ್ರಸಾರ ಮಾಡಲಿದ್ದು, ಸ್ಟಾರ್ಸ್ ಸ್ಪೋಟ್ರ್ಸ್ ತಂತ್ರಜ್ಞರು ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ. ಬಾಲಿವುಡ್‍ನ ಸುಹೈಲ್‍ಖಾನ್ ,ಅರ್ಬಾಜ್‍ಖಾನ್, ಧನುಷ್ ಬರಲಿರುವುದಾಗಿ ತಿಳಿಸಿದ್ದಾರೆ. ಸೆಪ್ಟಂಬರ್ 8ರ ಮಧ್ಯಾಹ್ನ 12 ಗಂಟೆಗೆ ಶುರುವಾಗಲಿದ್ದು ನಾಲ್ಕು ಪಂದ್ಯಗಳು ನಡೆಯಲಿದೆ. 9ರಂದು ಫೈನಲ್ ಸೇರಿದಂತೆ ಎರಡು ಪಂದ್ಯಗಳೊಂದಿಗೆ ಮುಕ್ತಾಯ ವಾಗುತ್ತದೆ. ರೂ.50 ರಿಂದ 5000ರ ವರೆಗಿನ ಟಿಕೆಟ್‍ಗಳು ಸಿಗಲಿದೆ. ಇಷ್ಟು ದಿವಸ ಕಲಾವಿದರಾಗಿ ಬರುತ್ತಿದ್ದ ಶಿವಣ್ಣ ಇಂದು ಕ್ರೀಡಾಪಟುವಾಗಿ ಆಗಮಿಸಿದ್ದಾರೆ. ಜೊತೆಗೆ ತರಬೇತಿ ಪಡೆಯಲು 10 ದಿವಸ ಚಿತ್ರೀಕರಣಕ್ಕೆ ರಜೆ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಾ ಹೋದರು ಸುದೀಪ್.

ಕ್ರಿಕೆಟ್ ಆಟದಿಂದ ಚಿತ್ರರಂಗದ ಎಲ್ಲಾ ವಿಭಾಗ ದವರು ವೇದಿಕೆಯಲ್ಲಿ ಸಿಗುತ್ತಾರೆ. ಸುದೀಪ್ ಹುಟ್ಟು ಹಾಕಿದ ಇಂತಹ ಕಲ್ಪನೆ ಹೆಮ್ಮರವಾಗಿದೆ. ಅವರು ಒಂಥರ ಸಿಎಂ (ಕ್ರಿಕೆಟ್ ಮಾಂತ್ರಿಕ) ಇದ್ದಂಗೆ. ನಾವೆಲ್ಲರೂ ಸಾಥ್ ನೀಡಲು ಸದಾ ಸಿದ್ಧ ಎಂದು ನಟ ಶಿವರಾಜ್‍ಕುಮಾರ್ ಕ್ರಿಕೆಟ್ ಪಂದ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಉಳಿದಂತೆ ಹಿರಿಯ ನಟ ದೊಡ್ಡಣ್ಣ , ಟಗರು ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಕ್ರಿಕೆಟ್ ಪಂದ್ಯಾವಳಿಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.

Facebook Comments