ಕೃಷಿ ಜಮೀನುಗಳಲ್ಲಿ ಬಡಾವಣೆ ನಿರ್ಮಿಸುತ್ತಿದ್ದವರಿಗೆ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

Illigal-Layout-In--Agricltu

ಬೆಂಗಳೂರು, ಸೆ.7- ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ನಾಡ ಕಚೇರಿಗಳಲ್ಲಿ 5ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಆಸ್ತಿ ನೋಂದಣಿ ಪೂರ್ವ 11ಇ ನಕ್ಷೆಗಳ ತಯಾರಿಕೆಯನ್ನು ನಿರ್ಬಂಧಿಸಿ ಆದೇಶಿಸಲಾಗಿದೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ 1 , 2 ಗುಂಟೆಯಂತೆ ನಿವೇಶನ ರೂಪದಲ್ಲಿ ಕೃಷಿ ಜಮೀನು ನೋಂದಣಿಯಾಗುತ್ತಿದ್ದು, ಅನಧಿಕೃತ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಇಂತಹ ವಹಿವಾಟನ್ನು ನಿರ್ಬಂಧಿಸಲು ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ಹೊಸಕೋಟೆ ನಾಡ ಕಚೇರಿಯಲ್ಲಿ ಅರ್ಜಿ ಸ್ವೀಕರಿಸುವಿಕೆ ಭೂಮಾಪನಾ ಕಚೇರಿಯಲ್ಲಿ 11ಇ ನಕ್ಷೆಗಳ ತಯಾರಿಕೆಯನ್ನು ನಿರ್ಬಂಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ನಾಲ್ಕೂ ತಾಲ್ಲೂಕುಗಳ ತಹಸೀಲ್ದಾರ್‍ಗಳು ಸಂಬಂಧಪಟ್ಟ ನಾಡ ಕಚೇರಿಗೆ ಸೂಚನೆ ನೀಡಿ ಕಟ್ಟುನಿಟ್ಟಾಗಿ ಆದೇಶ ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳಬೇಕು.
ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದ ನಾಡಕಚೇರಿ ಮತ್ತು ಭೂಮಾಪನ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ. ಆದರೆ, ವಿಭಾಗ ಖಾತೆ, ಸರ್ಕಾರಕ್ಕೆ ಜಮೀನು ನೋಂದಣಿ ಮಾಡಿಕೊಳ್ಳುವ ಪ್ರಕರಣಗಳು, ಆಶ್ರಯ ಯೋಜನೆಗಳ ನೋಂದಣಿ ಸಂದರ್ಭದಲ್ಲಿ 5ಗುಂಟೆ ವಿಸ್ತೀರ್ಣ ಮಿತಿಯ ಆದೇಶಕ್ಕೆ ವಿನಾಯಿತಿ ನೀಡಲಾಗಿದೆ. ಅನಿವಾರ್ಯ ಸಂದರ್ಭದಲ್ಲಿ ಸಾರ್ವಜನಿಕರಿಂದ ಕ್ರಯ ದಾನದ ಉದ್ದೇಶಕ್ಕಾಗಿ 5 ಗುಂಟೆ ಕಡಿಮೆ ವಿಸ್ತೀರ್ಣಕ್ಕೆ ನೋಂದಣಿ ಪೂರ್ವ 11 ಇ ನಕ್ಷೆಯ ಸ್ವೀಕೃತಿ ಬಗ್ಗೆ ತೀರ್ಮಾನ ಕೈಗೊಳ್ಳಲು ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಆದೇಶದಲ್ಲಿ  ತಿಳಿಸಲಾಗಿದೆ.

Facebook Comments

Sri Raghav

Admin