ಫೆ.20ರಿಂದ 24ರವರೆಗೆ ಬೆಂಗಳೂರಲ್ಲೇ ನಡೆಯಲಿದೆ ಏರ್ ಶೋ

ಈ ಸುದ್ದಿಯನ್ನು ಶೇರ್ ಮಾಡಿ

Air-Show
ಬೆಂಗಳೂರು,ಸೆ.8- ತೀವ್ರ ವಿವಾದಕ್ಕೆ ಗುರಿಯಾಗಿದ್ದ ಬೆಂಗಳೂರು ವೈಮಾನಿಕ ಪ್ರದರ್ಶನ(ಏರ್ ಶೋ)ವನ್ನು ಈ ಬಾರಿ ನಗರದಲ್ಲೇ ನಡೆಸಲು ಕೇಂದ್ರ ರಕ್ಷಣಾ ಇಲಾಖೆ ತೀರ್ಮಾನಿಸಿದೆ.
2019ರ ಫೆಬ್ರವರಿ 20ರಿಂದ 24ರವರೆಗೆ ಒಟ್ಟು 5 ದಿನಗಳ ಕಾಲ ಯಲಹಂಕದ ವಾಯು ನೆಲೆಯಲ್ಲಿ 12ನೇ ವೈಮಾನಿಕ ಪ್ರದರ್ಶನ ನಡೆಯಲಿದೆ. ಕೇಂದ್ರ ರಕ್ಷಣಾ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪ್ರಸಕ್ತ ವರ್ಷದ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲೇ ನಡೆಸಲು ಸೂಚನೆ ಕೊಟ್ಟಿದ್ದಾರೆ.

ಇದಕ್ಕಾಗಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು. ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಅವರು ತಾಕೀತು ಮಾಡಿದ್ದಾರೆ. ಈಗ ರಕ್ಷಣಾ ಇಲಾಖೆ ಒಪ್ಪಿಗೆ ನೀಡಿರುವುದರಿಂದ ವೈಮಾನಿಕ ಪ್ರದರ್ಶನದ ಬಗ್ಗೆ ಉಂಟಾಗಿದ್ದ ಎಲ್ಲ ಗೊಂದಲಗಳು ನಿವಾರಣೆಯಾಗಿದೆ. ಈ ಹಿಂದೆ ವೈಮಾನಿಕ ಪ್ರದರ್ಶನವನ್ನು ಉತ್ತರ ಪ್ರದೇಶದ ರಾಜಧಾನಿ ಲಖ್ನೋ ಸಮೀಪದ ಬಕ್ಷಿ-ಕ-ತಲಬ್ ವಾಯುನೆಲೆಗೆ ಸ್ಥಳಾಂತರವಾಗಲಿದೆ ಎಂಬ ಪುಕಾರು ಹಬ್ಬಿತ್ತು.

ಯಾವಾಗ ಕರ್ನಾಟಕದಿಂದ ಉತ್ತರಪ್ರದೇಶಕ್ಕೆ ಏರ್ ಶೋ ಸ್ಥಳಾಂತರವಾಗಲಿದೆ ಎಂಬ ಸುದ್ದಿ ಹಬ್ಬಿತೋ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಹರಿಹಾಯ್ದಿತ್ತು. ಯಾವುದೇ ಕಾರಣಕ್ಕೂ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಿಂದ ಸ್ಥಳಾಂತರ ಮಾಡಬಾರದು, ಇದಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಿರ್ಮಲಾ ಸೀತಾರಾಮನ್‍ಗೆ ಪತ್ರ ಬರೆದಿದ್ದರು.

Air SHow

ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ವೈಮಾನಿಕ ಪ್ರದರ್ಶನವನ್ನು ಕರ್ನಾಟಕದಿಂದ ಬೇರೆಡೆ ಸ್ಥಳಾಂತರ ಮಾಡಬಾರದು. ಇದು ಬೆಂಗಳೂರಿನ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ರಕ್ಷಣಾ ಇಲಾಖೆ ಮತ್ತೊಮ್ಮೆ ಮರು ಚಿಂತನೆ ಮಾಡಬೇಕೆಂದು ಒತ್ತಾಯಿಸಿದ್ದರು. ಅಲ್ಲದೆ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ಸಿ.ಸದಾನಂದಗೌಡ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲೇ ನಡೆಯಬೇಕೆಂದು ಮನವಿ ಮಾಡಿಕೊಂಡಿದ್ದರು.  ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯಲಿರುವ ಈ ವೈಮಾನಿಕ ಪ್ರದರ್ಶನಕ್ಕೆ ಜಪಾನ್, ಅಮೆರಿಕ, ಜರ್ಮನಿ, ರಷ್ಯಾ, ಫ್ರಾನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳು ಭಾಗವಹಿಸುತ್ತವೆ.

ವೈಮಾನಿಕ ಪ್ರದರ್ಶನದಲ್ಲಿ ಭಾರತ ರಕ್ಷಣಾ ಇಲಾಖೆಯಲ್ಲಿ ಸಾಧಿಸಿರುವ ಸಾಧನೆಗಳು ಅನಾವರಣವಾಗಲಿದೆ. ಅಲ್ಲದೆ ಈ ವೇಳೆ ಕೆಲವು ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಭಾಗವಹಿಸುವುದರಿಂದ ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಅನೇಕ ಉದ್ಯಮಿಗಳು ಮುಂದೆ ಬರುತ್ತಾರೆ. ಹೀಗಾಗಿ ವೈಮಾನಿಕ ಪ್ರದರ್ಶನವೆಂಬುದು ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ ರಾಜ್ಯದಲ್ಲಿ ಉಳಿಸಿಕೊಳ್ಳುವ ಸರ್ಕಾರದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.

Facebook Comments

Sri Raghav

Admin