“ಡಿಕೆಶಿ ಮೇಲೆ ಐಟಿ ಇಲಾಖೆ ಚೂ ಬಿಟ್ಟು ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸವ ಪ್ರಯತ್ನ ನಡೆಯುತ್ತಿದೆ”

ಈ ಸುದ್ದಿಯನ್ನು ಶೇರ್ ಮಾಡಿ

C-Kua
ಬೆಂಗಳೂರು, ಸೆ.8- ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆದಾಯ ಇಲಾಖೆಯನ್ನು ಚೂ ಬಿಡುವ ಮೂಲಕ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲ್‍ನಲ್ಲಿಂದು ಏರ್ಪಡಿಸಿದ್ದ ಹೃದಯ ಸಂಬಂಧಿ ಕಾಯಿಲೆಗಳ ಕಾರ್ಯಾಗಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಡಿ.ಕೆ.ಶಿವಕುಮಾರ್ ಪರವಾಗಿ ಬ್ಯಾಟಿಂಗ್ ಮಾಡಿದರು.

ರಾಜಕಾರಣ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದು ಜನಸಾಮಾನ್ಯರಿಗೆ ಅರ್ಥವಾಗುತ್ತಿದೆ. ಸರ್ಕಾರವನ್ನು ಅಸ್ತಿರಗೊಳಿಸಲು ಪ್ರತಿ ನಿತ್ಯ ವ್ಯರ್ಥ ಪ್ರಯತ್ನ ನಡೆಯುತ್ತಿವೆ. ಅದು ಎಲ್ಲಿಗೆ ಹೋಗಲಿದೆ ಎಂಬುದನ್ನು ಕಾದು ನೋಡಣ ಎಂದರು. ವಿರೋಧ ಪಕ್ಷಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ಪದೇ ಪದೇ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದರಿಂದ ಅವರು ಯಾವ ಸಾಧನೆ ಮಾಡುತ್ತಾರೋ ಗೊತ್ತಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಅಸ್ತಿರಗೊಳಿಸಲು ಮೊದಲಿನಿಂದಲೂ ಸತತ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಯಲ್ಲಿ ನಡೆಯುತ್ತಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಬಿಟ್ಟು ಆತುರವಾಗಿ ಬೆಂಗಳೂರಿಗೆ ಬಂದಿದರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಬಹುಶಃ ಸರ್ಕಾರವನ್ನು ಬೀಳಿಸಿ ತಾವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಬಂದಿರಬಹುದು ಎಂದು ವ್ಯಂಗ್ಯವಾಡಿದರು.

# ಭಾರತ್ ಬಂದ್‍ಗೆ ಬೆಂಬಲ:
ಇಂಧನ ಬೆಲೆ ಏರಿಕೆ ವಿರೋಧಿಸಿ ಇದೇ 10ರಂದು ಕರೆಯಲಾಗಿರುವ ಭಾರತ್ ಬಂದ್‍ಗೆ ಜೆಡಿಎಸ್ ಕೂಡ ಬೆಂಬಲ ವ್ಯಕ್ತಪಡಿಸಿದೆ ಎಂದು ಕುಮಾರಸ್ವಾಮಿ ಹೇಳಿದರು. ಕೇಂದ್ರ ಸರ್ಕಾರದ ತೈಲ ನೀತಿಯಿಂದಾಗಿ ಇಂಧನದ ಬೆಲೆ ದುಬಾರಿಯಾಗಿದೆ. ಇದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಸೇರಿದಂತೆ ಹಲವಾರು ಪಕ್ಷಗಳು ಭಾರತ್ ಬಂದ್‍ಗೆ ಕರೆ ನೀಡಿವೆ. ಜೆಡಿಎಸ್ ಕೂಡ ಬಂದ್‍ಗೆ ಬೆಂಬಲ ನೀಡಲಿದೆ ಎಂದರು.

# ದೇವೇಗೌಡರು ಮುನಿಸಿಕೊಂಡಿಲ್ಲ:
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರಿಗೆ ದಸರಾ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ನೀಡಲಾಗಿದೆ. ಅವರು ಬೇಸರಗೊಂಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಯಾವ ಕಾರಣಕ್ಕೆ ಬೇಸರಗೊಂಡಿದ್ದಾರೋ ಗೊತ್ತಿಲ್ಲ. ದಸರಾ ಉಸ್ತುವಾರಿಯನ್ನು ಕೊಟ್ಟಿದ್ದಕ್ಕಾಗಿ ಬೇಸರಗೊಂಡಿದ್ದಾರೋ ಅಥವಾ ಇನ್ನೇನೂ ಕಾರಣಕ್ಕೋ ಗೊತ್ತಿಲ್ಲ. ಆದರೆ, ದಸರಾ ಸೇರಿದಂತೆ ಜಿಲ್ಲೆಯ ಎಲ್ಲಾ ಕಾರ್ಯಕ್ರಮಗಳು ಉಸ್ತುವಾರಿ ಸಚಿವಾರದ ಜಿ.ಟಿ.ದೇವೇಗೌಡರ ನೇತೃತ್ವದಲ್ಲೇ ನಡೆಯುತ್ತವೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Facebook Comments

Sri Raghav

Admin