ಕಾರ್ಯಕಾರಣಿ ಸಭೆ ಬಿಟ್ಟು ದೆಹಲಿಯಿಂದ ಬೆಂಗಳೂರಿಗೆ ಯಡಿಯೂರಪ್ಪ ದಿಢೀರ್ ವಾಪಸ್ಸಾಗಿದ್ದೇಕೆ ..!

ಈ ಸುದ್ದಿಯನ್ನು ಶೇರ್ ಮಾಡಿ

yadiyurappa
ಬೆಂಗಳೂರು,ಸೆ.8- ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಬೆಂಗಳೂರಿಗೆ ಆಗಮಿಸಿರುವುದು ರಾಜ್ಯದ ರಾಜಕೀಯದಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ನವದೆಹಲಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಯಡಿಯೂರಪ್ಪ ಭಾಗವಹಿಸಬೇಕಿತ್ತು. ಎಲ್ಲ ರಾಜ್ಯಗಳ ಅಧ್ಯಕ್ಷರು ಕಾರ್ಯಕಾರಿಣಿ ಸದಸ್ಯರು ಭಾಗವಹಿಸುವಂತೆ ಖುದ್ದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಸೂಚಿಸಿದರು.

ಇದರಂತೆ ಯಡಿಯೂರಪ್ಪ ನಿನ್ನೆ ರಾತ್ರಿ ನವದೆಹಲಿಗೆ ತೆರಳಿದ್ದರು. ಆದರೆ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವುದು ಊಹಾಪೋಹಗಳಿಗೆ ಇನ್ನಷ್ಟು ಪುಷ್ಟಿ ನೀಡಿದಂತಿದೆ.  ರಾಜ್ಯ ರಾಜಕಾರಣದಲ್ಲಿ ಬೆಳಗಾವಿಯ ಜಾರಕಿ ಹೊಳಿ ಸಹೋದರರು ಅಸಮಾಧಾನವಾಗಿರುವುದು, ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಎಫ್‍ಐಆರ್ ದಾಖಲಿಸಲು ಮುಂದಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಯಡಿಯೂರಪ್ಪ ಹಿಂತಿರುಗಿರುವುದು ಸುದ್ದಿಗೆ ರೆಕ್ಕೆಪುಕ್ಕ ಬಂದಂತಾಗಿದೆ.

ಮೂಲಗಳ ಪ್ರಕಾರ ಯಡಿಯೂರಪ್ಪ ತಮ್ಮ ಕುಟುಂಬದವರ ಜೊತೆ ಇಂದು ಸ್ವಾಮೀಜಿ ಒಬ್ಬರನ್ನು ಭೇಟಿ ಮಾಡ ಬೇಕಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಅನುಮತಿ ಪಡೆದು ವಾಪಸ್ಸಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮ ಮುಗಿದ ಬಳಿಕ ಸಂಜೆ ಪುನಃ ಯಡಿಯೂರಪ್ಪ ನವದೆಹಲಿಗೆ ತೆರಳಿ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

# ಲೋಕಸಭೆ ಚುನಾವಣೆ ಚರ್ಚೆ:
ಇಂದು ಸಂಜೆ ನವದೆಹಲಿಗೆ ತೆರಳಿದ ಬಳಿಕ ನಾಳೆ ಕಾರ್ಯಕಾರಿಣಿ ಸಭೆಯಲ್ಲಿ ಯಡಿಯೂರಪ್ಪ ಲೋಕಸಭೆ ಚುನಾವಣೆ ಕುರಿತಂತೆ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ನಡೆಸುವರು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡುವುದು ಲೋಕಸಭೆ ಚುನಾವಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಪ್ರತಿಯೊಂದು ರಾಜ್ಯಗಳ ಅಧ್ಯಕ್ಷರ ಜೊತೆ ಅಮಿತ್ ಷಾ ಖುದ್ದು ಮಾತುಕತೆ ನಡೆಸಲಿದ್ದು, ಲೋಕಸಭೆ ಚುನಾವಣೆಗೆ ಹೊಸ ಕಾರ್ಯತಂತ್ರ ರೂಪಿಸುವುದು, ಪ್ರತಿ ಪಕ್ಷಗಳ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯುವುದು ಸೇರಿದಂತೆ ಕೆಲವು ಸಲಹೆಗಳನ್ನು ನೀಡಲಿದ್ದಾರೆ.

Facebook Comments

Sri Raghav

Admin