ಸುರಕ್ಷತಾ ಕ್ರಮಗಳಿಂದಾಗಿ ತಗ್ಗಿದ ರೈಲು ದುರಂತಗಳು, ಈ ವರ್ಷ 75 ಅಪಘಾತಗಳಲ್ಲಿ 40 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Trtain-Accident--01
ನವದೆಹಲಿ, ಸೆ.9 (ಪಿಟಿಐ)- ಕಳೆದ ವರ್ಷ ಸೆಪ್ಟೆಂಬರ್‍ನಿಂದ ಈ ವರ್ಷದ ಅಕ್ಟೋಬರ್‍ವರೆಗೆ ದೇಶದ ವಿವಿಧೆಡೆ ಸಂಭವಿಸಿದ 75 ರೈಲು ಅಪಘಾತಗಳಲ್ಲಿ 40 ಮಂದಿ ಸಾವಿಗೀಡಾಗಿದ್ದಾರೆ. ಆದರೆ ಕಳೆದ ಐದು ವರ್ಷಗಳ ರೈಲು ಅಪಘಾತಗಳು ಮತ್ತು ಸಾವು-ನೋವಿಗೆ ಹೋಲಿಸಿದಲ್ಲಿ ಉತ್ತಮ ಸುರಕ್ಷತಾ ವಿಧಾನಗಳಿಂದ ದುರಂತದ ಸಂಖ್ಯೆ ಇಳಿಮುಖವಾಗಿರುವುದು ಸಮಾಧಾನಕರ ಸಂಗತಿ.

ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ಕಳೆದ ಐದು ವರ್ಷಗಳಲ್ಲಿ ಇದೇ ಅವಧಿಯಲ್ಲಿ ಸಂಭವಿಸಿದ ಅಪಘಾತಗಳು ಮತ್ತು ಸಾವುಗಳ ಬಗ್ಗೆ ಅಂಕಿ ಅಂಶ ನೀಡಿದ್ದಾರೆ.2016ರ ಸೆಪ್ಟೆಂಬರ್ ಮತ್ತು 2017ರ ಆಗಷ್ಟ್ ನಲ್ಲಿ ಒಟ್ಟು 80 ರೈಲು ಅಪಘಾತಗಳು ಸಂಭವಿಸಿ 249 ಮಂದಿ ಮೃತಪಟ್ಟಿದ್ದರು. ನವೆಂಬರ್ 2016ರಲ್ಲಿ ಉತ್ತರ ಪ್ರದೇಶದ ಕಾನ್ಪುರ ಸಮೀಪ ಇಂದೋರ್-ಪಾಟ್ನಾ ಎಕ್ಸ್‍ಪ್ರೆಸ್ ಹಳಿ ತಪ್ಪಿ ಆ ದುರ್ಘಟನೆಯೊಂದರಲ್ಲೇ 150ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದರು.

2014-2015ರ ಇದೇ ಅವಧಿಯಲ್ಲಿ ಒಟ್ಟು 108 ರೈಲು ಅಪಘಾತಗಳಲ್ಲಿ 196 ಮಂದಿ ಅಸುನೀಗಿದ್ದರು. 2013-2014ರ ಅವಧಿಯಲ್ಲಿ 139 ದುರ್ಘಟನೆಗಳು ಸಂಭವಿಸಿ 275 ಮಂದಿ ಸಾವಿಗೀಡಾಗಿದ್ದರು ಕಳೆದ ಒಂದು ವರ್ಷದ ಅವಧಿಯಲ್ಲಿ ರೈಲು ಅಪಘಾತಗಳು ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್‍ನಿಂದ ಈ ವರ್ಷದ ಅಕ್ಟೋಬರ್‍ವರೆಗೆ ಎರಡು ಪ್ರಮುಖ ರೈಲು ಅಪಘಾತಗಳು ಸಂಭವಿಸಿದೆ. ಕಳೆದ ವರ್ಷ ಆಗಸ್ಟ್‍ನಲ್ಲಿ ಉತ್ಕಲ್ ಎಕ್ಸ್‍ಪ್ರೆಸ್ ರೈಲು ಹಳಿ ತಪ್ಪಿ 20 ಮಂದಿ ಮೃತಪಟ್ಟರು. ಈ ವರ್ಷ ಏಪ್ರಿಲ್‍ನಲ್ಲಿ ಉತ್ತರ ಪ್ರದೇಶದಲ್ಲಿ ಶಾಲಾ ವಾಹನಕ್ಕೆ ರೈಲು ಅಪ್ಪಳಿಸಿ 13 ಮಕ್ಕಳು ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ರೈಲ್ವೆ ಕೈಗೊಂಡ ಸುರಕ್ಷತಾ ಕ್ರಮಗಳು ಮತ್ತು ಮುಂಜಾಗ್ರತಾ ವಿಧಾನಗಳಿಂದ ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅಪಘಾತಗಳು ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin