ವಿದ್ಯಾರ್ಥಿಗಳು ಮತ್ತು ಸಾಫ್ಟ್ವೇರ್ ಎಂಜಿನಿಯರ್’ಗಳಿಗೆ ಗಾಂಜಾ ಮಾರುತ್ತಿದ್ದ ಐವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ganja-Seller

ಬೆಂಗಳೂರು, ಸೆ.9- ನಗರದಲ್ಲಿ ಗಾಂಜಾ ಮಾರಾಟ ಜಾಲವನ್ನು ಭೇದಿಸಿರುವ ಕೋರಮಂಗಲ ಪೊಲೀಸರು, ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್‍ವೇರ್ ಉದ್ಯೋಗಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಂಜಿನಿಯರ್ ವಿದ್ಯಾರ್ಥಿ ಸೇರಿ ಐವರನ್ನು ಬಂಧಿಸಿ, 3.5 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣದ ಮಣಿಕಂಠ (23), ಎಚ್‍ಎಎಲ್‍ನ ಅನ್ನಸಂದ್ರಪಾಳ್ಯದ 10ನೇ ಕ್ರಾಸ್ ನಿವಾಸಿ ಜುಬೇರ್ ಬಾಷ(32), ರಾಜಾಜಿನಗರದ 2ನೇ ಹಂತ, ಇ ಬ್ಲಾಕ್‍ನ 5 ಮುಖ್ಯರಸ್ತೆ ನಿವಾಸಿ ಶಿವಪ್ರಸಾದ್, ಬಳ್ಳಾರಿ ನಗರ ಪಟೇಲ್ ನಗರದ ಒಂದನೇ ಹಂತದ ನಿವಾಸಿ ಶ್ರೇಯಸ್ (20) ಹಾಗೂ ವಿಶಾಖಪಟ್ಟಣದ ಪೆದ್ದಗುಡ ಪಂಚಾಯತ್ ನಿವಾಸಿ ಎಸ್.ಲಕ್ಷ್ಮಣ್ (22) ಬಂಧಿತ ಆರೋಪಿಗಳು.

ಆರೋಪಿ ಮಣಿಕಂಠ ಆಂಧ್ರಪ್ರದೇಶದ ವಿಶಾಖಪಟ್ಟಣದ ನಿವಾಸಿಯಾಗಿದ್ದು, ಈತ ವಿಶಾಖಪಟ್ಟಣದ ಲಕ್ಷ್ಮಣ್ ಎಂಬಾತನಿಂದ ಗಾಂಜಾ ಖರೀದಿ ಮಾಡಿ ಬೆಂಗಳೂರಿನ ಜುಬೇರ್ ಬಾಷ ಜೊತೆ ಸೇರಿ ನಗರದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಆರೋಪಿ, ಶ್ರೇಯಸ್ £ಗರದ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಈತ ಗಾಂಜಾ ಖರೀದಿ ಮಾಡಿ ಸೇವನೆ ಮಾಡಿಕೊಂಡಿದ್ದು, ನಂತರ ಅಕ್ರಮ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳು ಕೋರಮಂಗಲದ ಬಿಬಿಎಂಪಿ ಅಂಬೇಡ್ಕರ್ ಪಾರ್ಕ್ ಬಳಿ ಗಾಂಜಾ ಮಾರಾಟ ಮಾಡಲು ಬರುತ್ತಿರುವ ವಿಷಯ ತಿಳಿದು ಕೋರಮಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾಫ್ಟ್‍ವೇರ್ ಇಂಜಿನಿಯರ್‍ಗಳು ಗಾಂಜಾ ಖರೀದಿ ಮಾಡುತ್ತಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಈಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ 2.5ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಮಾರುತಿ ಓಮ್ನಿ, 1550 ರೂ.ನಗದು, ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೋರಮಂಗಲ ಪೊಲೀಸರು ತಿಳಿಸಿದ್ದಾರೆ.

Facebook Comments