ಅತಿವೃಷ್ಟಿಗೊಳಗಾದ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್’ಗಾಗಿ ಪಿಎಂ ಭೇಟಿ ಮಾಡಲಿರುವ ಸಿಎಂ ನಿಯೋಗ

ಈ ಸುದ್ದಿಯನ್ನು ಶೇರ್ ಮಾಡಿ

CM-Kumaraswamy
ಬೆಂಗಳೂರು, ಸೆ.9- ಕೊಡಗು ಸೇರಿದಂತೆ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಕೋರಿ ಮನವಿ ಸಲ್ಲಿಸಲು ರಾಜ್ಯದ ನಿಯೋಗ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದ ನಿಯೋಗ ಪ್ರಧಾನಿ ಅವರನ್ನು ಭೇಟಿ ಮಾಡಲಿದ್ದು, ಮಹಾಮಳೆಯಿಂದ ಭೂಕುಸಿತ ಉಂಟಾಗಿರುವ ಕೊಡಗು, ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಪ್ರಧಾನಿ ಅವರಲ್ಲಿ ನಿಯೋಗ ಅಂಕಿ-ಅಂಶಗಳ ಸಹಿತ ಮನವಿ ಮಾಡಲಿದೆ.

ಈಗಾಗಲೇ ತುರ್ತು ಪರಿಹಾರ ಕೋರಿ ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ಅವರಿಗೆ ಮುಖ್ಯಮಂತ್ರಿ ಮನವಿ ಮಾಡಿದ್ದರು. ಎರಡು ಸಾವಿರ ಕೋಟಿಗೂ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರದಿಂದ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಮನೆ, ಸೇತುವೆ, ರಸ್ತೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಕರ್ಯ ಹಾನಿಗೆ ಸುಮಾರು 3 ಸಾವಿರ ಕೋಟಿ ರೂ.ಗೂ ಹೆಚ್ಚು ಪರಿಹಾರ ಕೋರುವ ನಿರೀಕ್ಷೆ ಇದೆ.

ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗಿದ್ದು, ಹಾನಿಯ ಅಂದಾಜನ್ನು ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಸುಮಾರು ಎರಡು ಸಾವಿರ ಕೋಟಿಗೂ ಹೆಚ್ಚು ಬೆಳೆಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸದ್ಯಕ್ಕೆ ಕೊಡಗಿನ ಪುನರ್ ನಿರ್ಮಾಣ ಸೇರಿದಂತೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಲು ಪ್ರಧಾನಿ ಅವರಿಗೆ ಮನವರಿಕೆ ಮಾಡಲು ನಿಯೋಗವನ್ನು ಮುಖ್ಯಮಂತ್ರಿ ಕೊಂಡೊಯ್ಯುತ್ತಿದ್ದಾರೆ.

ಕೊಡಗು ಸೇರಿದಂತೆ ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳಿಗೆ ಆಗಿರುವ ಹಾನಿಗೆ ಸಂಬಂಧಿಸಿದಂತೆ ವರದಿಯನ್ನು ಆಯಾ ಜಿಲ್ಲಾಧಿಕಾರಿಗಳಿಂದ ಪಡೆಯಲಾಗಿದ್ದು, ಕ್ರೋಢೀಕೃತ ವರದಿಯನ್ನಾಧರಿಸಿ ಪ್ರಧಾನಿಯವರಿಗೆ ವಿಶೇಷ ಪ್ಯಾಕೇಜ್‍ಗೆ ಮನವಿ ಸಲ್ಲಿಸಲಾಗುತ್ತದೆ.  ಅಲ್ಲದೆ, ಕೊಡಗು ಸೇರಿದಂತೆ ಅತಿವೃಷ್ಟಿ ಪ್ರದೇಶಗಳಲ್ಲಿ ರಾಜ್ಯಸರ್ಕಾರ ಕೈಗೊಳ್ಳಲಿರುವ ಪುನರ್ ನಿರ್ಮಾಣ ಕಾರ್ಯಗಳ ಬಗ್ಗೆಯೂ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದೇ ಸಂದರ್ಭದಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ಬರ ಪರಿಸ್ಥಿತಿ ತಲೆದೋರಿರುವ ಬಗ್ಗೆಯೂ ಪ್ರಧಾನಿಯವರ ಗಮನ ಸೆಳೆಯಲಾಗುತ್ತದೆ. ಆದರೆ, ಬರ ಪೀಡಿತ ಪ್ರದೇಶಗಳನ್ನು ರಾಜ್ಯಸರ್ಕಾರ ಘೋಷಣೆ ಮಾಡದಿರುವ ಹಿನ್ನೆಲೆಯಲ್ಲಿ ನಿರ್ದಿಷ್ಟ ಪ್ರಮಾಣದ ನೆರವು ಕೋರಿ ಮನವಿ ಸಲ್ಲಿಸುವ ಸಾಧ್ಯತೆ ಕಡಿಮೆ ಇದೆ.

# ಕರ್ನಾಟಕ ಭವನದಲ್ಲಿ ಸಭೆ:

ಇಂದು ಸಂಜೆ ದೆಹಲಿಗೆ ತೆರಳುವ ಮುಖ್ಯಮಂತ್ರಿಯವರು ನಾಳೆ ಬೆಳಗ್ಗೆ ಕರ್ನಾಟಕ ಭವನದಲ್ಲಿ ನಿಯೋಗದಲ್ಲಿ ತೆರಳುವ ರಾಜ್ಯದ ನಾಯಕರ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಪ್ರಧಾನಿ ಅವರಿಗೆ ಮನವಿ ಮಾಡಬೇಕಾಗಿರುವ ಅಂಶಗಳ ಬಗ್ಗೆ ಪೂರ್ವಭಾವಿ ಚರ್ಚೆ ನಡೆಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.   ಪ್ರಧಾನಿ ಬಳಿಗೆ ತೆರಳುವ ನಿಯೋಗದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಪ್ರತಾಪ್ ಸಿಂಹ, ನಳಿನ್‍ಕುಮಾರ್ ಕಟಿಲ್, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕರೆದೊಯ್ಯಲು ಮುಖ್ಯಮಂತ್ರಿ ಆಹ್ವಾನಿಸಿದ್ದಾರೆ. ನಾಳೆ ಪ್ರಧಾನಿ ಅವರನ್ನು ಭೇಟಿ ಮಾಡಿದ ನಂತರ ಸಂಜೆ ಬೆಂಗಳೂರಿಗೆ ಮುಖ್ಯಮಂತ್ರಿ ವಾಪಸಾಗುವ ಕಾರ್ಯಕ್ರಮವಿದೆ.

Facebook Comments

Sri Raghav

Admin