ಕೇಂದ್ರ ಸರ್ಕಾರ ತನಿಖಾ ತಂಡಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ : ಡಿಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01
ಬೆಂಗಳೂರು, ಸೆ.9- ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ತನಿಖಾ ತಂಡಗಳನ್ನು ಬಳಸಿ ವಿರೋಧ ಪಕ್ಷಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದೆ ಎಂದು ಟೀಕಿಸಿದರು. ಜಯನಗರದಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ವಿಂಟೇಜ್ ಕಾರ್ ರ್ಯಾಲಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಷ್ಟೇ ಅಲ್ಲ ಅನೇಕ ನಾಯಕರ ವಿರುದ್ಧವೂ ಇದೇ ರೀತಿ ಕೇಂದ್ರದ ತನಿಖಾ ತಂಡಗಳನ್ನು ಬಳಕೆ ಮಾಡಲಾಗುತ್ತಿದೆ. ಎಲ್ಲದಕ್ಕೂ 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಜನ ತೀರ್ಮಾನ ಮಾಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ರಾಜ್ಯದಲ್ಲಿ ಒಳ್ಳೆಯ ಸರ್ಕಾರವಿದ್ದು, ಪ್ರಗತಿಪರ ಕಾರ್ಯಕ್ರಮಗಳನ್ನು ನೀಡುತ್ತಿರುವುದನ್ನು ಸಹಿಸದೆ ಹೊಟ್ಟೆ ಹುರಿ ಪಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ ಎಲ್ಲರೂ ಮಾತನಾಡುತ್ತಾರೆ. ಅವರಿಗೆ ಹೊಟ್ಟೆಹುರಿ ಬಂದುಬಿಟ್ಟಿದೆ ಎಂದು ಹೇಳಿದರು.

ಪಿಒಪಿ ಗಣೇಶ ಬೇಡ:
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸಾರ್ವಜನಿಕರು ಬಳಸುವುದು ಸೂಕ್ತ. ಪರಿಸರಕ್ಕೆ ಹಾನಿಕರಕವಾಗುವ ಪಿಒಪಿ ಗಣೇಶ ಮೂರ್ತಿಗಳನ್ನು ಬಳಸಬಾರದು. ಯಾರೂ ಕೂಡ ಕಾನೂನು ವಿರುದ್ಧ ನಡೆದುಕೊಳ್ಳಬಾರದು, ಹಬ್ಬದ ಸಂದರ್ಭದಲ್ಲಿ ಬೇಕಾಗಿರುವ ಭದ್ರತೆಗೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ ಎಂದರು.

ಮಾದಕ ವಸ್ತುಗಳ ಬಳಕೆ, ಸೇವನೆಯಿಂದ ಉಂಟಾಗುವ ಹಾನಿಯ ಬಗ್ಗೆ ಜನರಿ ಜಾಗೃತಿ ಮೂಡಿಸಲು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ಅವರು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬ ಒಳ್ಳೆಯದು. ಡ್ರಗ್ ಸೇವನೆಯಿಂದ ಯುವಕರು ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಮಕ್ಕಳ ಮೇಲೆ ಪೋಷಕರು ತೀವ್ರ ನಿಗಾವಹಿಸುವುದು ಸೂಕ್ತ ಎಂದು ಹೇಳಿದರು. ಡ್ರಗ್ಸ್ ಸೇವನೆ ವಿರುದ್ಧ ಆಂದೋಲನ ಆರಂಭಿಸಿದ್ದು, ಪೊಲೀಸ್ ಇಲಾಖೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದು ತಿಳಿಸಿದರು.

Facebook Comments

Sri Raghav

Admin