ನಾಯಿ ಕಚ್ಚಿದ್ದಕ್ಕೆ ಪಶು ವೈದ್ಯರ ಬಂಧಿಸಿರುವುದಕ್ಕೆ ಖಂಡಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Karnataka-Veterinary-Associ

ಬೆಂಗಳೂರು, ಸೆ.9- ಮಗುವಿಗೆ ನಾಯಿಗಳು ಕಚ್ಚಿದ ಕಾರಣಕ್ಕೆ ಪಶು ವೈದ್ಯರ ವಿರುದ್ಧ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸಿದ ಕ್ರಮವನ್ನು ಕರ್ನಾಟಕ ಪಶು ವೈದ್ಯಕೀಯ ಸಂಘ ತೀವ್ರವಾಗಿ ಖಂಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಎ.ಡಿ.ಶಿವರಾಮು ಅವರು, ಮಕ್ಕಳಿಗೆ ಬೀದಿ ನಾಯಿ ಕಡಿದು ಗಾಯಗೊಳಿಸಿರುವುದಕ್ಕೆ ನಮಗೂ ನೋವುಂಟಾಗಿದೆ. ಇದೊಂದು ಅನಿರೀಕ್ಷಿತ ಮತ್ತು ಆಕಸ್ಮಿಕ ಸಂಗತಿಯಾಗಿದೆ. ಆದರೆ, ಈ ಅನಿರೀಕ್ಷಿತ ಘಟನೆಗೆ ಪಶು ವೈದ್ಯರನ್ನು ಬಲಿ ಪಶು ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾವು ಪಶು ವೈದ್ಯರು. ಹಾಗೆಂದ ಮಾತ್ರಕ್ಕೆ ನಾವು ಪಶುಗಳಲ್ಲ. ನಾವುಗಳು ಉನ್ನತ ವ್ಯಾಸಂಗ ಮಾಡಿ, ಉತ್ತಮ ಅಂಕಗಳನ್ನು ಪಡೆದು 1 ನೆ ದರ್ಜೆಯ ಅಧಿಕಾರಿಗಳಾಗಿ ಸರ್ಕಾರದ ಸೇವೆಗೆ ಸೇರಿದ್ದೇವೆ.  ಸರ್ಕಾರದ ಲಭ್ಯವಿರುವ ಕನಿಷ್ಠ ಸವಲತ್ತುಗಳೊಂದಿಗೆ ಹಗಲಿರುಳೂ ಜನರ ಸೇವೆ ಮಾಡುತ್ತಿದ್ದೇವೆ. ನಮ್ಮ ಜೀವದ ಹಂಗನ್ನೂ ತೊರೆದು ಬೀದಿನಾಯಿಗಳಿಗೆ ಮತ್ತು ಇತರೆ ಪ್ರಾಣಿಗಳಿಗೆ ರೇಬೀಸ್, ಬ್ರುಸೆಲೊಸಿಸ್, ಲೆಪ್ಟೊಸ್ಪಿರೋಸಿಸ್‍ನಂತಹ ಚುಚ್ಚುಮದ್ದುಗಳನ್ನು ನೀಡುತ್ತಿದ್ದೇವೆ. ಈ ಮೂಲಕ ನಾವು ಪ್ರಾಣಿಜನ್ಯ ಆಹಾರ ಸೇವಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ರೋಗಗಳು ಬಾರದಿರುವಂತೆ ಎಚ್ಚರ ವಹಿಸುತ್ತಿದ್ದೇವೆ ಎಂದರು.

ಮಗುವಿಗೆ ನಾಯಿಗಳು ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಪಶು ವೈದ್ಯ ವಿಭಾಗದ ಸಹಾಯಕ ನಿರ್ದೇಶಕರಾಗಿರುವ ಡಾ.ಶ್ರೀರಾಮ್ ಅವರು ಮತ್ತು ಅವರ ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ನಂತರ ನಾವು ಪ್ರಶ್ನಿಸಿದಾಗ ಅವರನ್ನು ಬಿಡುಗಡೆ ಮಾಡಿದ್ದಾರೆ.  ಇದೊಂದು ಅಮಾನವೀಯ ಘಟನೆ. ಕೂಡಲೇ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

Facebook Comments