ಎತ್ತಿನಗಾಡಿಗಳ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಮೆರವಣಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Congress

ಬೆಂಗಳೂರು, ಸೆ.10- ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಕರೆ ನೀಡಿದ್ದ ಭಾರತ್ ಬಂದ್ ಅಂಗವಾಗಿ ಇಂದು ಮೈಸೂರು ಬ್ಯಾಂಕ್ ವೃತ್ತದಿಂದ ಮೌರ್ಯ ವೃತ್ತದವರೆಗೂ ಎತ್ತಿನಗಾಡಿಗಳ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ, ಸಚಿವ ಜಮೀರ್ ಅಹಮ್ಮದ್ ಖಾನ್, ಶಾಸಕರಾದ ಎನ್.ಎ.ಹ್ಯಾರಿಸ್, ಎಚ್.ಎಂ.ರೇವಣ್ಣ ಮತ್ತಿತರರು ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಿದರು. ಪ್ರತಿ ಬ್ಲಾಕ್‍ನಿಂದಲೂ ಮೆರವಣಿಗೆ ಮೂಲಕ ಮೈಸೂರ್ ಬ್ಯಾಂಕ್ ಮೌರ್ಯ ವೃತ್ತದವರೆಗೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

ಸುಮಾರು ಏಳೆಂಟು ಎತ್ತಿನಗಾಡಿಗಳು, ಐದಾರು ಕುದುರೆ ಗಾಡಿಗಳು ಮೆರವಣಿಗೆಯಲ್ಲಿದ್ದವು. ಸಾವಿರಾರು ಮಂದಿ ಕಾರ್ಯಕರ್ತರು ಪಾದಯಾತ್ರೆ ನಡೆಸಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಧೋರಣೆಯನ್ನು ಖಂಡಿಸಿದರು.   ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆ ಜನಸಾಮಾನ್ಯರ ಕೈಗೆಟುಕದಂತೆ ದುಬಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ವಿವಿಧೆಡೆಯಿಂದ ಆಗಮಿಸಿದ್ದ ಬ್ಲಾಕ್ ಕಾಂಗ್ರೆಸ್ ಮುಖಂಡರು ಬೈಕ್ ರ್ಯಾಲಿ ಮೂಲಕ ದಾರಿಯುದ್ದಕ್ಕೂ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಮಾರ್ಗದ ಪ್ರಮುಖ ವೃತ್ತಗಳಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.  ಟೈರ್‍ಗಳಿಗೆ ಬೆಂಕಿ ಹಚ್ಚಲು ಪಂಕ್ಚರ್ ಅಂಗಡಿಗಳಲ್ಲಿ ಹಾಕಲಾಗಿದ್ದ ಟೈರ್‍ಗಳನ್ನು ತೆಗೆದುಕೊಳ್ಳುವಾಗ ಕೆಲವು ಕಡೆ ಮಾತಿನ ಚಕಮಕಿ ನಡೆದಿದೆ. ರೇಸ್‍ಕೋರ್ಸ್ ರಸ್ತೆಯ ಸಿ.ರಂಗಸ್ವಾಮಿ ವೃತ್ತದ ಬಳಿ ಐಎನ್‍ಟಿಯುಸಿ ಕಾರ್ಯಕರ್ತರು ಟೈರ್‍ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಲ್ಲದೆ, ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ತಡೆಯಲು ಯತ್ನಿಸಿದರು.

ವಾಣಿಜ್ಯ ವಾಹನಗಳು ಸಂಚರಿಸಬಾರದು ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ವಾಹನಗಳನ್ನು ಮುಂದೆ ಹೋಗಲು ಅನುವು ಮಾಡಿಕೊಟ್ಟರು. ನಂತರ ಬೆಂಕಿ ಹಾಕಲಾಗಿದ್ದ ಟೈರ್‍ಗಳನ್ನು ತೆರವುಗೊಳಿಸಿ ಕಾರ್ಯಕರ್ತರ ಮೆರವಣಿಗೆ ಮುಂದೆ ಹೋಗಲು ಪೊಲೀಸರು ಸೂಚಿಸಿದರು. ನಾಟೇಕಲ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಅಡ್ಡವಾಗಿ ಕಾರುಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುವಾಗ ಪೊಲೀಸರು ತೆರವುಗೊಳಿಸಲು ಮುಂದಾದಾಗ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆಯಿತು. ಈ ವೇಳೆ ಕಾಂಗ್ರೆಸ್ ಬಾವುಟ ಕೆಳಗೆ ಬಿತ್ತು ಎಂಬ ಕಾರಣಕ್ಕಾಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ವಾಗ್ವಾದ ನಡೆಸಿದರು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರಿಂದ ಕೆಜಿ ರಸ್ತೆ, ಪ್ಯಾಲೆಸ್ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಸುಮಾರು ಒಂದೂವರೆ ಕಿ.ಮೀ. ರಸ್ತೆಯುದ್ದಕ್ಕೂ ಮೆರವಣಿಗೆಯಲ್ಲಿ ಜನ ಜಂಗುಳಿ ತುಂಬಿತ್ತು.

ಬೆಂಗಳೂರಿನ ನಾನಾ ಭಾಗಗಳಿಂದ ಮೆರವಣಿಗೆ ಬೈಕ್ ರ್ಯಾಲಿ, ಎತ್ತಿನ ಗಾಡಿ ಹಾಗೂ ವಿವಿಧ ಸ್ವರೂಪದಲ್ಲಿ ಆಗಮಿಸಿದ್ದ ಕಾರ್ಯಕರ್ತರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎತ್ತಿನ ಗಾಡಿ ಮೇಲೆ ಬೈಕನ್ನು ಇಟ್ಟು ಮೆರವಣಿಗೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

Facebook Comments

Sri Raghav

Admin